ಸಾರಾಂಶ
ಸಂಚಾರಿ ಠಾಣೆ ಪಿಎಸ್ಐ ಜೆ.ಎಂ.ಮಹೇಶ್ ಹಾಗೂ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಹಾಡಹಗಲೇ ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡುತ್ತಿದ್ದ ಪ್ರಯಾಣಿಕರ ಆಫೆ ಆಟೋ, ದ್ವಿಚಕ್ರ ವಾಹನ ಚಾಲಕರನ್ನು ಸ್ಥಳದಲ್ಲಿ ಪರೀಕ್ಷೆ ಒಳಪಡಿಸಿ ಮದ್ಯ ಸೇವನೆ ದೃಢ ಪಟ್ಟ ನಂತರ 12 ಮಂದಿ ಚಾಲಕರ ವಿರುದ್ಧ ಪಟ್ಟಣದ ಜೆಎಂಎಫ್‌ಸಿ ಪ್ರಧಾನ ಸಿವಿಲ್ ನ್ಯಾಯಾಲಯಕ್ಕೆ ಎಫ್ಐಆರ್ ಸಲ್ಲಿಸಿದ್ದರು.
ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಸಂಚಾರಿ ಠಾಣೆ ಪೊಲೀಸರು ಕಳೆದ ಒಂದು ವಾರದಿಂದ ವಿಶೇಷ ಕಾರ್ಯಚರಣೆ ನಡೆಸಿ ಮದ್ಯ ಸೇವನೆ ಮಾಡಿ ವಾಹನ ಚಲಾಯಿಸುತ್ತಿದ್ದ 12 ಮಂದಿ ಚಾಲಕರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು 1.20 ಲಕ್ಷ ರು. ದಂಡ ವಸೂಲಿ ಮಾಡಿದ್ದಾರೆ. ಸಂಚಾರಿ ಠಾಣೆ ಪಿಎಸ್ಐ ಜೆ.ಎಂ.ಮಹೇಶ್ ಹಾಗೂ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಹಾಡಹಗಲೇ ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡುತ್ತಿದ್ದ ಪ್ರಯಾಣಿಕರ ಆಫೆ ಆಟೋ, ದ್ವಿಚಕ್ರ ವಾಹನ ಚಾಲಕರನ್ನು ಸ್ಥಳದಲ್ಲಿ ಪರೀಕ್ಷೆ ಒಳಪಡಿಸಿ ಮದ್ಯ ಸೇವನೆ ದೃಢ ಪಟ್ಟ ನಂತರ 12 ಮಂದಿ ಚಾಲಕರ ವಿರುದ್ಧ ಪಟ್ಟಣದ ಜೆಎಂಎಫ್‌ಸಿ ಪ್ರಧಾನ ಸಿವಿಲ್ ನ್ಯಾಯಾಲಯಕ್ಕೆ ಎಫ್ಐಆರ್ ಸಲ್ಲಿಸಿದ್ದರು.ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಸಿವಿಲ್ ನ್ಯಾಯಾಧೀಶ ಅಜಿತ್ ದೇವರಮನೆ ಅವರು 12 ಮಂದಿ ಪಾನಮತ್ತ ಚಾಲಕರಿಗೆ ತಲಾ 10 ಸಾವಿರದಂತೆ 1.20 ಲಕ್ಷ ರು. ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿರುವ ಸರ್ವಿಸ್ ರಸ್ತೆ, ಪ್ರವಾಸಿ ಮಂದಿರದ ವೃತ್ತ, ಪೇಟೆ ಬೀದಿ ಸೇರಿದಂತೆ ಪಟ್ಟಣ ವ್ಯಾಪ್ತಿಯಲ್ಲಿ ಹೆಲ್ಮೆಟ್ ರಹಿತ ಮತ್ತು ಮೊಬೈಲ್ ಸಂಭಾಷಣೆ ನಿರತವಾಹನ ಚಾಲನೆ, ತ್ರಿಬಲ್ ರೈಡಿಂಗ್ ಹಾಗೂ ಸೀಟ್ ಬೆಲ್ಟ್ ಧರಿಸದೆ ಕಾರು ಚಾಲನೆ ಸೇರಿದಂತೆ ಹಲವು ಮೋಟಾರ್ ವಾಹನ ಕಾಯ್ದೆ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಒಟ್ಟು 105 ಪ್ರಕರಣಗಳನ್ನು ದಾಖಲು ಮಾಡಿಕೊಂಡ ಸಂಚಾರಿ ಪೊಲೀಸರು 5042 ಪ್ರಕರಣಗಳನ್ನು ದಾಖಲು ಮಾಡಿಕೊಂಡು 17 ಲಕ್ಷ 26, ಸಾವಿರದ 800 ರು.ಗಳ ದಂಡ ವಸೂಲಿ ಮಾಡಿದ್ದಾರೆ.