ಬೆಂಗಳೂರಿನ ಬೀದಿನಾಯಿಗಳ ಅಟ್ಟಹಾಸಕ್ಕೆ ವೃದ್ಧ ಬಲಿ

| Published : Jul 30 2025, 02:02 AM IST

ಸಾರಾಂಶ

ವಾಕಿಂಗ್‌ಗೆ ಹೋದ ವೃದ್ಧನನ್ನು ಬೀದಿ ನಾಯಿಗಳು ದಾಳಿ ಮಾಡಿ ಭೀಕರವಾಗಿ ಕಚ್ಚಿ ಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜಧಾನಿ ಬೆಂಗಳೂರಿನಲ್ಲಿ ಬೀದಿ ನಾಯಿಗಳ ದಾಳಿಗೆ ವೃದ್ಧರೊಬ್ಬರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಏಕಾಏಕಿ ಬೀದಿ ನಾಯಿಗಳ ಗುಂಪು ವೃದ್ಧರ ಮೇಲೆ ಎರಗಿದ್ದಲ್ಲದೆ, ಅವರ ಮಾಂಸ ಖಂಡಗಳನ್ನು ಕಚ್ಚಿ ತಿಂದಿವೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ವೃದ್ಧರು ಸಾವನ್ನಪ್ಪಿದ್ದಾರೆ.

ಮೃತರನ್ನು ಸೀತಪ್ಪ (68) ಎಂದು ಗುರುತಿಸಲಾಗಿದ್ದು, ಸೋಮವಾರ ಬೆಳಗಿನ ಜಾವ ಈ ಘಟನೆ ಕೊಡಿಗೇಹಳ್ಳಿಯ ಟೆಲಿಕಾಂ ಲೇಔಟ್‌ನಲ್ಲಿ ನಡೆದಿದೆ. ಸೋಮವಾರ ಬೆಳಗಿನ ಜಾವ ಸುಮಾರು 3 ಗಂಟೆ ಸುಮಾರಿಗೆ ಸೀನಪ್ಪ ಮನೆಯಿಂದ ವಾಕಿಂಗ್‌ ಹೋಗುವುದಕ್ಕೆ ಹೊರಗೆ ಬಂದಿದ್ದಾರೆ. ಆ ವೇಳೆಗೆ ಸರಿಯಾಗಿ ಸುಮಾರು 7 ರಿಂದ 8 ಬೀದಿ ನಾಯಿಗಳ ಗುಂಪು ವೃದ್ಧರ ಮೇಲೆ ಏಕಾಏಕಿ ದಾಳಿ ನಡೆಸಿವೆ. ಸೀತಪ್ಪ ಅವರ ಎರಡು ಕೈ- ಕಾಲುಗಳು ಸೇರಿದಂತೆ ದೇಹದ ಹಲವು ಭಾಗಗಳನ್ನು ಕಚ್ಚಿ ಗಾಯಗೊಳಿಸಿವೆ. ಅಲ್ಲದೆ, ಅವರ ಮಾಂಸ ಖಂಡಗಳನ್ನು ತಿಂದು ಹಾಕಿವೆ.

ವೃದ್ಧ ನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳುವುದಕ್ಕೆ ಪ್ರಯತ್ನ ಮಾಡಿದರೂ ಪ್ರಯೋಜನವಾಗಿಲ್ಲ. ನಾಯಿಗಳ ಬೊಗಳುವ ಶಬ್ದ ಹಾಗೂ ವೃದ್ಧ ಕಿರುಚುವ ಶಬ್ದ ಕೇಳಿ ಅಕ್ಕ-ಪಕ್ಕದ ಮನೆಯವರು ನೆರವಿಗೆ ಧಾವಿಸುವ ವೇಳೆ ಬೀದಿ ನಾಯಿಗಳ ವೃದ್ಧನ ಕೈ-ಕಾಲಿನ ಮಾಂಸ ಖಂಡವನ್ನು ಕಚ್ಚಿ ತಿಂದಿದ್ದವು.

ಬೀದಿ ನಾಯಿಗಳನ್ನು ಓಡಿಸಿ ವೃದ್ಧ ಸೀನಪ್ಪನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಸೀತಪ್ಪ ಮೃತಪಟ್ಟಿದ್ದಾರೆ

ವೃದ್ಧರ ಸಾವಿನ ಬಳಿಕ ಎಚ್ಚೆತ್ತ ಬಿಬಿಎಂಪಿ

ವೃದ್ಧ ಸೀತಪ್ಪ ಸಾವಿನ ಬಳಿಕ ಬಿಬಿಎಂಪಿಯ ಪಶುಪಾಲನೆ ವಿಭಾಗದ ಅಧಿಕಾರಿ ಸಿಬ್ಬಂದಿ ಎಚ್ಚೆತ್ತುಕೊಂಡಿದ್ದು, ನಾಮ್‌ಕೆವಾಸ್ತೆ ಮಂಗಳವಾರ ಕೋಡಿಗೆಹಳ್ಳಿಯ ವ್ಯಾಪ್ತಿಯಲ್ಲಿ ಇರುವ ನಾಯಿಗಳನ್ನು ಹಿಡಿಯುವ ಕೆಲಸ ಮಾಡಿದ್ದಾರೆ. ಸುಮಾರು 16 ಬೀದಿ ನಾಯಿಗಳನ್ನು ಹಿಡಿದುಕೊಂಡು ಹೋಗಿದ್ದಾರೆ.

ಕಳೆದ ಆಗಸ್ಟ್‌ನಲ್ಲಿ ವೃದ್ಧೆ ಮೇಲೆ ದಾಳಿ

ಕಳೆದ ಆಗಸ್ಟ್ 28 ರಂದು ಜಾಲಹಳ್ಳಿ ವಾಯುಸೇನೆ ನೆಲೆಯ 7ನೇ ವಸತಿ ಗೃಹಗಳ ಕ್ಯಾಂಪ್​ನ ಮೃದಾನದ ಬಳಿ ರಾಜ್ ದುಲಾರಿ ಸಿನ್ಹಾ (76) ವೃದ್ಧೆಯ ಮೇಲೆ ಬೀದಿ ನಾಯಿಗಳ ಗುಂಪು ದಾಳಿ ನಡೆಸಿದ್ದರಿಂದ ವೃದ್ಧೆ ಮೃತಪಟ್ಟಿದ್ದರು.

ಸೋಮವಾರ ಮುಂಜಾನೆ 3.30 ರ ಸುಮಾರಿಗೆ ತಂದೆಯವರಾದ ಸೀನಪ್ಪ ವಾಕಿಂಗ್ ಗೆ ಹೋಗಿದ್ದರು. ತುಂಬಾ ಸಮಯ ಕಳೆದರೂ ಮನೆ ಬರಲಿಲ್ಲ. ಹುಡುಕಾಟ ನಡೆಸುತ್ತಿದ್ದವು. ಆ ವೇಳೆಗೆ ಪೊಲೀಸರು ಫೋನ್‌ ಮಾಡಿ ನಾಯಿ ದಾಳಿ ನಡೆಸಿವೆ. ಯಲಹಂಕದ ಆಸ್ಪತ್ರೆಗೆ ದಾಖಲಿಸಿರುವುದಾಗಿ ಮಾಹಿತಿ ನೀಡಿದರು. ಆಸ್ಪತ್ರೆಗೆ ಹೋಗಿ ನೋಡಿದಾಗ ಮೃತಪಟ್ಟಿದ್ದರು. ಬಿಬಿಎಂಪಿಯ ವಿರುದ್ಧ ಪೊಲೀಸ್‌ ಠಾಣೆಗೆ ದೂರು ನೀಡಿದ್ದೇವೆ.

-ವೆಂಕಟೇಶ, ಮೃತ ಸೀತಪ್ಪ ಅವರ ಮಗವೃದ್ದ ಸೀತಪ್ಪ ಮೃತಪಟ್ಟಿರುವ ಸಂಬಂಧ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ವರದಿಯಲ್ಲಿ ನಾಯಿಗಳ ದಾಳಿಯಿಂದ ಮೃತಪಟ್ಟಿರುವುದು ದೃಢಪಟ್ಟರೆ ಬಿಬಿಎಂಪಿಯಿಂದ ಪರಿಹಾರ ನೀಡಲಾಗುವುದು.

- ಸುರಳ್ಕರ್ ವಿಕಾಸ್ ಕಿಶೋರ್, ವಿಶೇಷ ಆಯುಕ್ತರು, ಬಿಬಿಎಂಪಿ ಪಶುಪಾಲನೆ ವಿಭಾಗ

ಬೀದಿನಾಯಿಗಳಿಂದ ವೃದ್ಧನ

ಸಾವು ಬಗ್ಗೆ ಪಾಲಿಕೆ ಅನುಮಾನ

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಕೊಡಿಗೇಹಳ್ಳಿಯ ಟೆಲಿಕಾಂ ಲೇಔಟ್‌ನಲ್ಲಿ ಬೀದಿ ನಾಯಿಗಳಿಂದ ವೃದ್ಧ ಸೀತಪ್ಪ ಮೃತಪಟ್ಟಿರುವುದಾಗಿ ಸ್ಥಳೀಯರು ಹೇಳಿದ್ದರೂ ಬಿಬಿಎಂಪಿಯು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ.

ಸೋಮವಾರ ಬೆಳಗಿನ ಜಾವ 3 ಗಂಟೆಗೆ ಸುಮಾರು ಸೀತಪ್ಪ (68) ಚಹಾ ಸೇವಿಸಲು ಸ್ಥಳೀಯ ಚಹಾ ಅಂಗಡಿಗೆ ತೆರೆಳಿದಾಗ ಈ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ವಿಚಾರಣೆ ವೇಳೆಯಲ್ಲಿ ಮಾಹಿತಿ ನೀಡಿರುತ್ತಾರೆ. ಆದರೆ, ಘಟನೆಯ ಬಗ್ಗೆ ನಿಖರ ಸಾಕ್ಷ್ಯಾಧಾರಗಳು ಲಭ್ಯವಿರುವುದಿಲ್ಲ. ಜತೆಗೆ, ಕುಟುಂಬಸ್ಥರು ಸೀತಪ್ಪ ಅವರ ಮನಸ್ಥಿತಿ ಸರಿಯಿರುವುದಿಲ್ಲ ಎಂದು ಮಾಹಿತಿ ನೀಡಿರುತ್ತಾರೆಂದು ಬಿಬಿಎಂಪಿಯ ಪ್ರಕಟಣೆಯಲ್ಲಿ ತಿಳಿಸಿದೆ.

ಸ್ಥಳೀಯ ಪೋಲಿಸರು ಗಾಯಗೊಂಡ ಸೀತಪ್ಪ ಅವರನ್ನು ಯಲಹಂಕ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಕರೆತಂದಾಗ ಆಸ್ಪತ್ರೆ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಹೀಗಾಗಿ, ಮರಣೋತ್ತರ ಪರೀಕ್ಷೆಗೆ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ಶವ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ನಾಯಿ ಕಡಿತದಿಂದ ಸೀತಪ್ಪ ಮೃತಪಟ್ಟಿರುವುದು ದೃಢಪಟ್ಟಲ್ಲಿ ಬಿಬಿಎಂಪಿಯಿಂದ ನಿಯಮಾನುಸಾರ ಪರಿಹಾರ ನೀಡಲಾಗುವುದು ಎಂದು ಬಿಬಿಎಂಪಿ ತಿಳಿಸಿದೆ.