ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಕಾರು ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವೃದ್ಧೆ ಮೃತಪಟ್ಟಿರುವ ಘಟನೆ ಪಟ್ಟಣದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಬಳಿ ಸೋಮವಾರ ಬೆಳಗ್ಗೆ ಜರುಗಿದೆ.ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕು ಬನ್ನೂರು ಹೋಬಳಿಯ ಚನ್ನವೀರನ ಕೊಪ್ಪಲು ಗ್ರಾಮದ ಚಿಕ್ಕ ವೀರೇಗೌಡನ ಪತ್ನಿ ಸಾಕಮ್ಮ (76) ಮೃತಪಟ್ಟವರು.
ಕಾರು ಡಿಕ್ಕಿ ಹೊಡೆದ ರಭಸಕ್ಕೆ ತಲೆ ಮತ್ತು ಕೈ-ಕಾಲುಗಳಿಗೆ ತೀವ್ರವಾಗಿ ಗಾಯಗೊಂಡಿದ್ದ ಈಕೆಯನ್ನು ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಕೊನೆ ಉಸಿರಳೆದಿದ್ದಾರೆ.ಕಳೆದ ಒಂದು ವಾರದ ಹಿಂದೆ ಸ್ವಗ್ರಾಮ ಚನ್ನವೀರನ ಕೊಪ್ಪಲು ಗ್ರಾಮದಿಂದ ಗೆಜ್ಜಲಗೆರೆಯ ಅಕ್ಕನ ಮನೆಗೆ ಬಂದಿದ್ದ ಸಾಕಮ್ಮ ವಾಪಸ್ ತೆರಳಲು ಮದ್ದೂರು ಸಾರಿಗೆ ಸಂಸ್ಥೆ ಬಸ್ ನಿಲ್ದಾಣಕ್ಕೆ ಬಂದು ಬೆಂಗಳೂರು ಮೈಸೂರು ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ರಸ್ತೆ ದಾಟುತ್ತಿದ್ದಾಗ ಮೈಸೂರು ಕಡೆಯಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಈ ಸಂಬಂಧ ಸಂಚಾರಿ ಠಾಣೆ ಪೊಲೀಸರು ಕಾರು ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.ಲಾಡಿ ಡಿಕ್ಕಿ: ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವು
ಮಂಡ್ಯ:ಬೈಕ್‌ಗೆ ಲಾರಿ ಡಿಕ್ಕಿಯಾಗಿ ಸವಾರರಿಬ್ಬರು ಸ್ಥಳದಲ್ಲೇ ಧಾರುಣವಾಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಬಸರಾಳು ಸಮೀಪದ ಮಾಡವೀರನಹಳ್ಳಿ ಗೇಟ್ ಬಳಿ ನಡೆದಿದೆ. ತಾಲೂಕಿನ ಹಂಪಾಪುರ ಗ್ರಾಮದ ನಿಂಗಯ್ಯ (48) ಹಾಗೂ ಜವರಯ್ಯ (65) ಅಪಘಾತದಲ್ಲಿ ಧಾರುಣವಾಗಿ ಮೃತಪಟ್ಟವರಾಗಿದ್ದಾರೆ.
ಹಂಪಾಪುರ ಗ್ರಾಮದ ನಿಂಗಯ್ಯ ಹಾಗೂ ಜವರಯ್ಯ ಅವರು ಬೈಕ್‌ನಲ್ಲಿ ಬಸರಾಳಿನಿಂದ ಮಂಡ್ಯ ಕಡೆಗೆ ಬರುತ್ತಿದ್ದರು. ಮಂಡ್ಯದಿಂದ ನಾಗಮಂಗಲ ಕಡೆಗೆ ಹೋಗುತ್ತಿದ್ದ ಲಾರಿ ಮಾಡರಹಳ್ಳಿ ಗೇಟ್ ಬಳಿ ಮುಖಾಮುಖಿ ಡಿಕ್ಕಿ ಹೊಡೆದಿದೆ.ಪರಿಣಾಮ ಸವಾರರಿಬ್ಬರು ಕೆಳಕ್ಕೆ ಬಿದ್ದಾಗ ಲಾರಿ ಚಕ್ರ ನಿಂಗಯ್ಯನ ತಲೆ ಮೇಲೆ ಹರಿದು ಆತ ಸ್ಥಳದಲ್ಲೇ ಧಾರುಣವಾಗಿ ಸಾವನ್ನಪ್ಪಿದರೆ, ಜವರಯ್ಯ ರಸ್ತೆ ಬದಿಯಿಂದ ಸ್ವಲ್ಪ ದೂರ ಜಿಗಿದು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಘಟನೆ ನಂತರ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಬಸರಾಳು ಠಾಣೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಬಸರಾಳು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.