ಸಾರಾಂಶ
ಬೆಂಗಳೂರು : ಎಲೆಕ್ಟ್ರಾನಿಕ್ ಸಿಟಿ-ಸಿಲ್ಕ್ ಬೋರ್ಡ್ ನಡುವಿನ ಮೇಲ್ಸೇತುವೆಯಲ್ಲಿ ಸಂಭವಿಸಿದ ಸರಣಿ ಅಪಘಾತದಲ್ಲಿ ನಾಲ್ಕು ಕಾರುಗಳು ಜಖಂಗೊಂಡಿವೆ. ಪ್ರಾಣಹಾನಿ ಸಂಭವಿಸಿಲ್ಲ.
ಗುರುವಾರ ಸಂಜೆ ಸುಮಾರು 6.30ಕ್ಕೆ ಈ ಘಟನೆ ನಡೆದಿದೆ. ಮುಂದೆ ಹೋಗುತ್ತಿದ್ದ ಕಾರಿನ ಚಾಲಕ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಹಿಂದೆ ಬರುತ್ತಿದ್ದ ಮೂರು ಕಾರುಗಳು ಒಂದಕ್ಕೊಂದು ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದೆ. ಕಾರಿನ ಚಾಲಕರು ಹಾಗೂ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸರಣಿ ಅಪಘಾತದಲ್ಲಿ ನಾಲ್ಕು ಕಾರುಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟ್ರಾಫಿಕ್ ಜಾಮ್:
ಮೇಲ್ಸೇತುವೆಯಲ್ಲಿ ಸರಣಿ ಅಪಘಾತ ಸಂಭವಿಸಿದ ಹಿನ್ನೆಲೆಯಲ್ಲಿ ಸುಮಾರು ನಾಲ್ಕು ಕಿ.ಮೀ. ಉದ್ದಕ್ಕೆ ವಾಹನ ಸಂಚಾರ ದಟ್ಟಣೆ ಉಂಟಾಗಿ ಸವಾರರು ಪರದಾಡಿದರು. ಎಲೆಕ್ಟ್ರಾನಿಕ್ ಸಿಟಿ-ಸಿಲ್ಕ್ ಬೋರ್ಡ್ ಮೇಲ್ಸೇತುವೆ ಸೇರಿದಂತೆ ಸುತ್ತಮುತ್ತಲ ರಸ್ತೆಗಳಲ್ಲಿ ಸುಮಾರು ಒಂದು ತಾಸು ವಾಹನ ಸಂಚಾರ ದಟ್ಟಣೆ ಉಂಟಾಯಿತು.
ವಿಷಯ ತಿಳಿದು ಸ್ಥಳಕ್ಕೆ ಬಂದ ಸಂಚಾರ ಪೊಲೀಸರು, ಸರಣಿ ಅಪಘಾತದಿಂದ ಹಾನಿಯಾಗಿದ್ದ ಕಾರುಗಳನ್ನು ತೆರವುಗೊಳಿಸಿದರು. ಸುಮಾರು ಒಂದು ತಾಸು ಸಂಚಾರ ಪೊಲೀಸರು ಸಂಚಾರ ದಟ್ಟಣೆ ನಿರ್ವಹಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಸರಣಿ ಅಪಘಾತ ಸಂಬಂಧ ಸದ್ಯಕ್ಕೆ ಯಾವುದೇ ದೂರು ದಾಖಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ