ಕೌಟುಂಬಿಕ ವಿಚಾರಕ್ಕೆ ಮನನೊಂದ ಖಾಸಗಿ ಕಂಪನಿಯ ನೌಕರ 26 ಪುಟಗಳ ಮರಣಪತ್ರ ಬರೆದಿಟ್ಟು ಆತ್ಮಹತ್ಯೆ

| Published : Dec 10 2024, 01:15 AM IST / Updated: Dec 10 2024, 05:50 AM IST

Crime News
ಕೌಟುಂಬಿಕ ವಿಚಾರಕ್ಕೆ ಮನನೊಂದ ಖಾಸಗಿ ಕಂಪನಿಯ ನೌಕರ 26 ಪುಟಗಳ ಮರಣಪತ್ರ ಬರೆದಿಟ್ಟು ಆತ್ಮಹತ್ಯೆ
Share this Article
  • FB
  • TW
  • Linkdin
  • Email

ಸಾರಾಂಶ

ಕೌಟುಂಬಿಕ ವಿಚಾರಕ್ಕೆ ಮನನೊಂದ ಖಾಸಗಿ ಕಂಪನಿಯ ನೌಕರ 26 ಪುಟಗಳ ಮರಣಪತ್ರ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ತಡರಾತ್ರಿ ಮಾರತಹಳ್ಳಿ ಮಂಜುನಾಥ ಲೇಔಟ್‌ನ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ನಲ್ಲಿ ನಡೆದಿದೆ.

 ಬೆಂಗಳೂರು : ಕೌಟುಂಬಿಕ ವಿಚಾರಕ್ಕೆ ಮನನೊಂದ ಖಾಸಗಿ ಕಂಪನಿಯ ನೌಕರ 26 ಪುಟಗಳ ಮರಣಪತ್ರ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ತಡರಾತ್ರಿ ಮಾರತಹಳ್ಳಿ ಮಂಜುನಾಥ ಲೇಔಟ್‌ನ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ನಲ್ಲಿ ನಡೆದಿದೆ.

ಉತ್ತರಪ್ರದೇಶ ಮೂಲದ ಅತುಲ್‌ ಸುಭಾಷ್‌(34) ಆತ್ಮಹತ್ಯೆ ಮಾಡಿಕೊಂಡವರು. ಸೋಮವಾರ ಬೆಳಗ್ಗೆ ನೆರೆಹೊರೆಯವರು ಕಿಟಕಿಯಲ್ಲಿ ನೋಡಿದಾಗ ಆತ್ಮಹತ್ಯೆ ಘಟನೆ ಬೆಳಕಿಗೆ ಬಂದಿದೆ.

ಏನಿದು ಪ್ರಕರಣ?:ಉತ್ತರಪ್ರದೇಶ ಮೂಲದ ಅತುಲ್‌ ಸುಭಾಷ್‌ 5 ವರ್ಷಗಳ ಹಿಂದೆ ತನ್ನದೇ ಊರಿನ ಯುವತಿಯನ್ನು ಮದುವೆಯಾಗಿದ್ದರು. 3 ವರ್ಷ ಕಾಲ ಉತ್ತರ ಪ್ರದೇಶದಲ್ಲಿ ನೆಲೆಸಿದ್ದರು. 2 ವರ್ಷಗಳ ಹಿಂದೆ ದಂಪತಿ ಬೆಂಗಳೂರಿಗೆ ಬಂದು ಮಂಜುನಾಥ ಲೇಔಟ್‌ನ ಖಾಸಗಿ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ನಲ್ಲಿ ನೆಲೆಸಿದ್ದರು. ಅತುಲ್‌ ಪ್ರತಿಷ್ಠಿತ ಕಂಪನಿಯೊಂದರ ವಿಭಾಗದಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ನಡುವೆ ಕೌಟುಂಬಿಕ ವಿಚಾರಕ್ಕೆ ದಂಪತಿ ನಡುವೆ ಗಲಾಟೆಯಾಗುತ್ತಿತ್ತು. ಹೀಗಾಗಿ ಅತುಲ್‌ ಪತ್ನಿ ಉತ್ತರಪ್ರದೇಶದ ತವರು ಮನೆಗೆ ತೆರಳಿದ್ದರು. ಹೀಗಾಗಿ ಫ್ಲ್ಯಾಟ್‌ನಲ್ಲಿ ಅತುಲ್‌ ಒಬ್ಬರೇ ವಾಸಿಸುತ್ತಿದ್ದರು.

ಭಾನುವಾರ ತಡರಾತ್ರಿ ನೇಣಿಗೆ ಶರಣು: ಭಾನುವಾರ ತಡರಾತ್ರಿ ಅತುಲ್‌ ಮನೆಯ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಮವಾರ ಬೆಳಗ್ಗೆ ನೆರೆಹೊರೆಯವರು ಅತುಲ್‌ ಫ್ಲ್ಯಾಟ್‌ಗೆ ಕಡೆಗೆ ನೋಡಿದಾಗ ಕಿಟಕಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅತುಲ್‌ ಮೃತದೇಹ ಕಂಡು ಬಂದಿದೆ. ಬಳಿಕ ಸ್ಥಳೀಯರು 112 ಪೊಲೀಸ್‌ ಸಹಾಯವಾಣಿಗೆ ಕರೆ ಮಾಡಿ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಬಳಿಕ ಉತ್ತರಪ್ರದೇಶದಲ್ಲಿರುವ ಅತುಲ್‌ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಮಾರತಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅತುಲ್‌ ವಿರುದ್ಧ ಪತ್ನಿಯಿಂದ 10ಕ್ಕೂ ಅಧಿಕ ದೂರು:  ಅತುಲ್‌ ಪತ್ನಿ ಉತ್ತರಪ್ರದೇಶದ ಪೊಲೀಸ್‌ ಠಾಣೆಯಲ್ಲಿ ಅತುಲ್‌ ವಿರುದ್ಧ ವದಕ್ಷಿಣೆ ಕಿರುಕುಳ, ಹಲ್ಲೆ, ದೌರ್ಜನ್ಯ, ಹಿಂಸೆ ಸೇರಿ ವಿವಿಧ ಆರೋಪ ಮಾಡಿ 10ಕ್ಕೂ ಅಧಿಕ ದೂರು ದಾಖಲಿಸಿದ್ದಾರೆ. ಇದಕ್ಕೆ ಅತುಲ್‌ ಸಹ ಪತ್ನಿ ವಿರುದ್ಧ ಪ್ರತಿ ದೂರು ನೀಡಿದ್ದಾರೆ. ಈ ನಡುವೆ ಪತ್ನಿ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದು, ಅತುಲ್‌ನಿಂದ ₹1 ಕೋಟಿ ಪರಿಹಾರ ಕೊಡಿಸುವಂತೆ ಮನವಿ ಮಾಡಿದ್ದಾರೆ. ಈ ನಡುವೆ ನ್ಯಾಯಾಲಯ ಪತ್ನಿಗೆ ಪ್ರತಿ ತಿಂಗಳು ₹2.50 ಲಕ್ಷ ಜೀವನಾಂಶ ನೀಡುವಂತೆ ಆದೇಶಿತ್ತು ಎನ್ನಲಾಗಿದೆ. ಪತ್ನಿಯ ಕಿರುಕುಳ ಮತ್ತು ನ್ಯಾಯ ವ್ಯವಸ್ಥೆ ಬಗ್ಗೆ ಬೇಸರಗೊಂಡು ಅತುಲ್‌ ಸುಭಾಷ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. 

26 ಪುಟಗಳ ಡೆತ್‌ನೋಟ್‌ ಪತ್ತೆ: ಅತುಲ್‌ ಆತ್ಮಹತ್ಯೆಗೂ ಮುನ್ನ ಸಿದ್ಧಪಡಿಸಿರುವ 26 ಪುಟಗಳ ಡೆತ್‌ ನೋಟ್‌ ಪತ್ತೆಯಾಗಿದೆ. ಅತುಲ್‌ ಆತ್ಮಹತ್ಯೆಗೂ ಮುನ್ನ ಆ ಡೆತ್‌ ನೋಟ್‌ ಅನ್ನು ಸೇವ್‌ ಇಂಡಿಯಾ ಫ್ಯಾಮಿಲಿ ಫೌಂಡೇಶನ್‌ಗೆ ವಾಟ್ಸಾಪ್‌ ಮಾಡಿದ್ದಾರೆ. ಬಳಿಕ ಸುಪ್ರೀಂ ಕೋರ್ಟ್, ಹೈಕೋರ್ಟ್, ಕೆಲ ಕುಟುಂಬ ಸದಸ್ಯರು, ತಮ್ಮ ಕಂಪನಿ ಇ-ಮೇಲ್ ವಿಳಾಸಕ್ಕೆ ಕಳುಹಿಸಿದ್ದಾರೆ. ಸಾಧ್ಯವಾದರೆ ನನ್ನ ಕುಟುಂಬಕ್ಕೆ ಸಹಾಯ ಮಾಡುವಂತೆ ಡೆತ್‌ನೋಟ್‌ನಲ್ಲಿ ಕೋರಿದ್ದಾರೆ. 

ಎದೆ ಮೇಲೆ ‘ಜಸ್ಟೀಸ್‌ ಈಸ್‌ ಡ್ಯೂ’ ಪೋಸ್ಟರ್‌: ಅತುಲ್‌ ಆತ್ಮಹತ್ಯೆಗೂ ಮುನ್ನ ‘ಜಸ್ಟೀಸ್‌ ಈಸ್‌ ಡ್ಯೂ’ ಎಂಬ ಪೋಸ್ಟರ್‌ನ್ನು ಎದೆ ಮೇಲೆ ಅಂಟಿಸಿಕೊಂಡಿರುವುದು ಕಂಡು ಬಂದಿದೆ. ಪೊಲೀಸರು 26 ಪುಟಗಳ ಸುದೀರ್ಘ ಡೆತ್‌ ನೋಟ್‌, ಈ ಪೋಸ್ಟರ್‌ ಅನ್ನು ಜಪ್ತಿ ಮಾಡಿದ್ದಾರೆ.

ಸಾವಿಗೂ ಮುನ್ನ ಮಾಡಬೇಕಾದ ಕೆಲಸಗಳ ಪಟ್ಟಿ: ಅತುಲ್‌ ಆತ್ಮಹತ್ಯೆಗೂ 2 ದಿನ ಹಿಂದೆ ಏನೆಲ್ಲಾ ಕೆಲಸ ಮಾಡಬೇಕು, ಯಾರಿಗೆ ಕರೆ ಮಾಡಬೇಕು, ಆತ್ಮಹತ್ಯೆ ದಿನ ಏನೆಲ್ಲಾ ಕೆಲಸ ಮಾಡಬೇಕು ಎಂದು ವೇಳಾ ಪಟ್ಟಿ ಸಿದ್ಧಪಡಿಸಿಕೊಂಡು ಗೋಡೆ ಮೇಲೆ ಅಂಟಿಸಿರುವುದು ಪೊಲೀಸರ ಪರಿಶೀಲನೆ ವೇಳೆ ಕಂಡು ಬಂದಿದೆ. ಆತ್ಮಹತ್ಯೆ ದಿನ ಸ್ನಾನ ಮಾಡಬೇಕು, ಕಿಟಕಿ ತೆಗೆಬೇಕು, ಗೇಟ್‌ ಲಾಕ್‌ ಮಾಡಬೇಕು, ನೂರು ಬಾರಿ ಶಿವನ ಜಪಾ ಮಾಡಬೇಕು, ಫ್ರಿಡ್ಜ್‌ ಮೇಲೆ ರೂಮ್‌, ಕಾರು, ಬೈಕ್‌ ಕೀ ಇರಿಸಬೇಕು, ಡೆತ್‌ ನೋಟ್‌ ಟೇಬಲ್‌ ಮೇಲೆ ಇರಿಸುವುದು ಸೇರಿ ಪ್ರತಿ ಕೆಲಸಗಳು ವೇಳಾ ಪಟ್ಟಿಯಲ್ಲಿವೆ.