ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜಧಾನಿಯ ಮಾದಕ ವಸ್ತು ಮಾರಾಟ ಜಾಲದ ಮೇಲೆ ಭರ್ಜರಿ ಕಾರ್ಯಾಚರಣೆ ನಡೆಸಿರುವ ಸಿಸಿಬಿ, ಸಿವಿಲ್ ಎಂಜಿನಿಯರ್ ಸೇರಿದಂತೆ ಇಬ್ಬರನ್ನು ಪ್ರತ್ಯೇಕವಾಗಿ ಬಂಧಿಸಿ ₹6 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದೆ.ಜಿಗಣಿ ನಿವಾಸಿ ಕ್ರಿಸ್ಟೋಫರ್ ಹಾಗೂ ಬೊಮ್ಮಸಂದ್ರದ ನಿವಾಸಿ ಜಿಜೋ ಪ್ರಸಾದ್ ಬಂಧಿತರಾಗಿದ್ದು, ಆರೋಪಿಗಳಿಂದ 3.5 ಕೆಜಿ ಹೈಡ್ರೋಫೋನಿಕ್ ಗಾಂಜಾ ಹಾಗೂ 1 ಕೆಜಿ ಎಂಡಿಎಂ ಡ್ರಗ್ಸ್ ಸೇರಿ ₹6 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿಯಾಗಿದೆ. ಈ ದಾಳಿ ವೇಳೆ ತಲೆಮರೆಸಿಕೊಂಡಿರುವ ಮತ್ತಿಬ್ಬರ ಪತ್ತೆಗೆ ಸಿಸಿಬಿ ತನಿಖೆ ಮುಂದುವರೆಸಿದೆ.
ಹಲವು ದಿನಗಳಿಂದ ಪ್ರತ್ಯೇಕವಾಗಿ ನಗರದಲ್ಲಿ ಡ್ರಗ್ಸ್ ದಂಧೆಯಲ್ಲಿ ಈ ಪೆಡ್ಲರ್‌ಗಳು ತೊಡಗಿದ್ದ ಬಗ್ಗೆ ಸಿಸಿಬಿಯ ಮಾದಕ ವಸ್ತು ನಿಗ್ರಹ ದಳಕ್ಕೆ ಖಚಿತ ಮಾಹಿತಿ ಸಿಕ್ಕಿತು. ಅಂತೆಯೇ ಡ್ರಗ್ಸ್ ಮಾರಾಟಕ್ಕೆ ಯತ್ನಿಸಿದ್ದಾಗ ಬೇಗೂರು ಕೆರೆ ಬಳಿ ಕ್ರಿಸ್ಟೋಫರ್‌ನನ್ನು ಇನ್‌ಸ್ಪೆಕ್ಟರ್ ಲಕ್ಷ್ಮೀನಾರಾಯಣ್ ಹಾಗೂ ಎಲೆಕ್ಟ್ರಾನಿಕ್ ಸಿಟಿ 2ನೇ ಹಂತದ ಸಮೀಪ ಜಿಜೋನನ್ನು ಇನ್‌ಸ್ಪೆಕ್ಟರ್ ಮಹಮ್ಮದ್ ಮಕ್ರಂ ನೇತೃತ್ವದ ತಂಡವು ಸೆರೆ ಹಿಡಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಸಿವಿಲ್ ಎಂಜಿನಿಯರ್ ಬಳಿ 4 ಕೋಟಿ ಡ್ರಗ್ಸ್:
ಸಿವಿಲ್ ಎಂಜಿನಿಯರ್ ಜಿಜೋ ಪ್ರಸಾದ್ ಮೂಲತಃ ಕೇರಳ ರಾಜ್ಯದವನಾಗಿದ್ದು, ಕಳೆದ ನಾಲ್ಕು ತಿಂಗಳಿಂದ ನಗರದ ಖಾಸಗಿ ಕಂಪನಿಯಲ್ಲಿ ಆತ ಕಾರ್ಯನಿರ್ವಹಿಸುತ್ತಿದ್ದ. ಬೊಮ್ಮಸಂದ್ರ ಸಮೀಪದ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದ ಜಿಜೋ, ಸುಲಭವಾಗಿ ಹಣ ಸಂಪಾದನೆಗೆ ತನ್ನ ಸ್ನೇಹಿತ ಜತೆ ಸೇರಿ ಡ್ರಗ್ಸ್ ದಂಧೆಗಿಳಿದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ಅಂತೆಯೇ ಕೇರಳದ ಡ್ರಗ್ಸ್ ಮಾಫಿಯಾದಿಂದ ಕಡಿಮೆ ಬೆಲೆ ಡ್ರಗ್ಸ್ ಖರೀದಿಸಿ ತಂದು ನಗರದಲ್ಲಿ ದುಬಾರಿ ಬೆಲೆಗೆ ಎಲೆಕ್ಟ್ರಾನಿಕ್ ಸಿಟಿ-ಬೊಮ್ಮಸಂದ್ರ ವ್ಯಾಪ್ತಿ ಐಟಿ ಉದ್ಯೋಗಿಗಳಿಗೆ ಜಿಜೋ ಹಾಗೂ ಆತನ ಸ್ನೇಹಿತ ಮಾರುತ್ತಿದ್ದರು. ಯಾರಿಗೂ ಅನುಮಾನ ಬಾರದಂತೆ ಡಬಲ್ ಲೇಯರ್ ಏರ್ ಟೈಟ್ ಪ್ಲಾಸ್ಟಿಕ್ ಕವರ್‌ಗಳಲ್ಲಿ ತಲಾ 100 ಗ್ರಾಂನಂತೆ ಸಣ್ಣ ಸಣ್ಣ ಪೊಟ್ಟಣಗಳಲ್ಲಿ ಡ್ರಗ್ಸ್ ತುಂಬಿ ಬಿಕರಿ ಮಾಡುತ್ತಿದ್ದರು. ತಲಾ ಗ್ರಾಂ ಹೈಡ್ರೋಫೋನಿಕ್ ಗಾಂಜಾವನ್ನು ₹12 ಸಾವಿರಕ್ಕೆ ಮಾರಾಟ ಮಾಡಿ ಆರೋಪಿಗಳು ಹಣ ಸಂಪಾದಿಸುತ್ತಿದ್ದರು. ಈ ಬಗ್ಗೆ ದಂಧೆ ಬಗ್ಗೆ ಖಚಿತ ಮಾಹಿತಿ ಎಲೆಕ್ಟ್ರಾನಿಕ್ ಸಿಟಿ 2ನೇ ಹಂತದಲ್ಲಿ ಜಿಜೋ ಪ್ರಸಾದ್‌ನ್ನು ಬಂಧಿಸಿ 1.05 ಕೆಜಿ ಹೈಡ್ರೋಫೋನಿಕ್ ಗಾಂಜಾವನ್ನು ಸಿಸಿಬಿ ಜಪ್ತಿ ಮಾಡಿದೆ. ಬಳಿಕ ಆತನ ಫ್ಲ್ಯಾಟ್ ಮೇಲೆ ದಾಳಿ ನಡೆಸಿ ಪೊಲೀಸರು ಪರಿಶೀಲಿಸಿದಾಗ 2.4 ಕೆಜಿ ಗಾಂಜಾ ಪತ್ತೆಯಾಯಿತು. ಒಟ್ಟಾರೆ ಆರೋಪಿಯಿಂದ 3.5 ಕೆಜಿ ಹೈಡ್ರೋಫೋನಿಕ್ ಗಾಂಜಾ, ₹26 ಲಕ್ಷ ನಗದು ಹಾಗೂ ಮೊಬೈಲ್ ಸೇರಿ ಒಟ್ಟು ₹4.52 ಕೋಟಿ ಮೌಲ್ಯದ ವಸ್ತುಗಳನ್ನು ಇನ್‌ಸ್ಪೆಕ್ಟರ್ ಮಕ್ರಂ ತಂಡವು ಜಪ್ತಿ ಮಾಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನೈಜೀರಿಯಾ ಪ್ರಜೆ ಬಳಿ 2 ಕೋಟಿ ಡ್ರಗ್ಸ್:ಬೇಗೂರು ಕೆರೆ ಸಮೀಪ ಇನ್‌ಸ್ಪೆಕ್ಟರ್ ಲಕ್ಷ್ಮೀನಾರಾಯಣ್ ಅವರು ನಡೆಸಿದ ಮತ್ತೊಂದು ಕಾರ್ಯಾಚರಣೆಯಲ್ಲಿ ನೈಜೀರಿಯಾ ದೇಶ ಪೆಡ್ಲರ್ ಕ್ರಿಸ್ಟೋಫರ್ ಸಿಕ್ಕಿಬಿದ್ದಿದ್ದಾನೆ. ಈತನ ಬಳಿ ₹2 ಕೋಟಿ ಮೌಲ್ಯದ 1 ಕೆಜಿ ಎಂಡಿಎಂಎ ಹಾಗೂ ಮೊಬೈಲ್ ಜಪ್ತಿಯಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
2012ರಲ್ಲಿ ಬಿಜಿನೆಸ್ ವೀಸಾದಡಿ ಭಾರತಕ್ಕೆ ಬಂದ ಆತ, ಬಳಿಕ ಬೆಂಗಳೂರಿಗೆ ಬಂದು ಆನೇಕಲ್ ತಾಲೂಕಿನ ಜಿಗಣಿ ಸಮೀಪ ನೆಲೆಸಿದ್ದ. ಮೋಜಿನ ಜೀವನ ನಡೆಸುವ ದುರುದ್ದೇಶದಿಂದ ಡ್ರಗ್ಸ್ ದಂಧೆಗಿಳಿದ್ದ ಕ್ರಿಸ್ಟೋಪರ್, ನಗರದ ಪರಿಚಿತ ಪೆಡ್ಲರ್‌ಗಳಿಂದ ಡ್ರಗ್ಸ್ ಖರೀದಿಸಿ ಮಾರಾಟ ಮಾಡುತ್ತಿದ್ದ. ತಲಾ ಗ್ರಾಂಗೆ ₹20 ಸಾವಿರಕ್ಕೆ ಎಂಡಿಎಂಎ ಡ್ರಗ್ಸ್ ಅನ್ನು ಆತ ಮಾರುತ್ತಿದ್ದ. ಈತನ ಬಗ್ಗೆ ಸ್ಪಷ್ಟ ಬಾತ್ಮಿ ಕಲೆ ಹಾಕಿ ಸಿಸಿಬಿ ಕಾರ್ಯಾಚರಣೆ ನಡೆಸಿದೆ. ನಕಲಿ ದಾಖಲೆ ಸೃಷ್ಟಿಸಿಕೊಂಡು ಅಕ್ರಮವಾಗಿ ಭಾರತದಲ್ಲಿ ಆರೋಪಿ ನೆಲೆಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಕುರಿತು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ (ಎಫ್‌ಆರ್‌ಆರ್‌ಓ) ಮಾಹಿತಿ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಲೊಕೇಷನ್ ಕಳುಹಿಸಿ ಡ್ರಗ್ಸ್ ಪೂರೈಕೆ:
ತಮ್ಮ ಪರಿಚಿತ ಗ್ರಾಹಕರಿಗೆ ಮಾತ್ರ ಆರೋಪಿಗಳು ಡ್ರಗ್ಸ್ ಪೂರೈಸುತ್ತಿದ್ದರು. ಈ ಡ್ರಗ್ಸ್ ದಂಧೆಯೂ ಆನ್‌ಲೈನ್ ಮೂಲಕ ನಡೆದಿತ್ತು. ತಮಗೆ ಆನ್‌ಲೈನ್ ಮೂಲಕ ಹಣವನ್ನು ಸ್ವೀಕರಿಸುತ್ತಿದ್ದ ಆರೋಪಿಗಳು, ಬಳಿಕ ತಾವು ಗೌಪ್ಯ ಸ್ಥಳದಲ್ಲಿ ಡ್ರಗ್ಸ್ ತಂದಿಟ್ಟು ನಂತರ ಗ್ರಾಹಕರಿಗೆ ಲೋಕೇಷನ್ ಕಳುಹಿಸುತ್ತಿದ್ದರು. ಆ ಲೋಕೇಷನ್‌ಗೆ ತೆರಳಿ ಡ್ರಗ್ಸ್ ತೆಗೆದುಕೊಂಡು ಗ್ರಾಹಕರು ತೆರಳುತ್ತಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.