ಸಾರಾಂಶ
ಸ್ಲಂ ಬೋರ್ಡ್, ರಾಜೀವ್ ಗಾಂಧಿ ಯೋಜನೆಯಲ್ಲಿ ಬಿಜೆಪಿಯವರು ಒಂದು ಮನೆ ಕೊಟ್ಟಿದ್ದರೂ ನಾನು ದೇವರಾಣೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಬಿಜೆಪಿಯವರು ಇದನ್ನು ಸಾಬೀತು ಮಾಡಿದರೆ ಇಂದು ಸಂಜೆಯೇ ರಾಜ್ಯಪಾಲರ ನಿವಾಸಕ್ಕೆ ಹೋಗಿ ರಾಜೀನಾಮೆ ಪತ್ರ ಕೊಡುವೆ - ಸಚಿವ ಜಮೀರ್ ಅಹಮದ್
ಮಂಡ್ಯ : ಸ್ಲಂ ಬೋರ್ಡ್, ರಾಜೀವ್ ಗಾಂಧಿ ಯೋಜನೆಯಲ್ಲಿ ಬಿಜೆಪಿಯವರು ಒಂದು ಮನೆ ಕೊಟ್ಟಿದ್ದರೂ ನಾನು ದೇವರಾಣೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಬಿಜೆಪಿಯವರು ಇದನ್ನು ಸಾಬೀತು ಮಾಡಿದರೆ ಇಂದು ಸಂಜೆಯೇ ರಾಜ್ಯಪಾಲರ ನಿವಾಸಕ್ಕೆ ಹೋಗಿ ರಾಜೀನಾಮೆ ಪತ್ರ ಕೊಡುವೆ ಎಂದು ವಸತಿ ಸಚಿವ ಜಮೀರ್ ಅಹಮದ್ ಅವರು ಬಿಜೆಪಿ ನಾಯಕರಾದ ಆರ್.ಅಶೋಕ್ ಮತ್ತು ವಿಜಯೇಂದ್ರ ಅವರಿಗೆ ಬಹಿರಂಗ ಸವಾಲು ಹಾಕಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಸಿದ್ದರಾಮಯ್ಯನವರು ಹಿಂದೆ ಸ್ಲಂ ಬೋರ್ಡ್‌ಗೆ 1.80 ಲಕ್ಷ ಮನೆ ಕೊಟ್ಟರು.
ರಾಜೀವ್ ಗಾಂಧಿ ವಸತಿ ಯೋಜನೆಯಡಿ 800 ಮನೆ ನೀಡಿದರು. ನವೆಂಬರ್‌ನಲ್ಲಿ ಮತ್ತೆ ಮನೆಗಳನ್ನು ಬಡವರಿಗೆ ಕೊಡುತ್ತಿದ್ದೇವೆ. ಬಿಜೆಪಿಯವರು ಏಕೆ ಕೊಟ್ಟಿಲ್ಲ?. ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಬಡವರ ಬಗ್ಗೆ ಕಾಳಜಿಯಿದೆ ಎಂದರು.
ಬಿಜೆಪಿಯವರಿಗೆ ಟೀಕೆ ಮಾಡೋದು ಬಿಟ್ಟು ಬೇರೆ ಯಾವ ಕೆಲಸವೂ ಇಲ್ಲ. ಯಾವುದಾದರೂ ಅಭಿವೃದ್ಧಿ ಕೆಲಸವನ್ನು ಅವರು ಮಾಡಿದ್ದಾರಾ ಎಂದು ಅವರು ಪ್ರಶ್ನಿಸಿದರು.
ಸಿದ್ದರಾಮಯ್ಯ ಮಾಡಿರುವ ಭಾಗ್ಯದ ಬಗ್ಗೆ ನಾವು ಹೇಳುತ್ತೇವೆ. ಬಿಜೆಪಿಯವರ ಕಾರ್ಯಕ್ರಮ ಬರೀ ಸೊನ್ನೆ. ಅವರ ಅಜೆಂಡಾ ಹಿಂದೂ-ಮುಸ್ಲಿಂ ಅಷ್ಟೇ. ಅವರಿಗೆ ಹಿಂದೂ-ಮುಸ್ಲಿಂ ಸಹಬಾಳ್ವೆ ಬೇಕಾಗಿಲ್ಲ, ಕುರ್ಚಿ ಬೇಕಷ್ಟೆ ಎಂದು ಛೇಡಿಸಿದರು.
ಬಿಜೆಪಿಯವರು ಗ್ಯಾರಂಟಿಗಳ ಬಗ್ಗೆ ಟೀಕೆ ಮಾಡಿದರು. ಆದರೆ, ನಮ್ಮ ಸರ್ಕಾರ ಗ್ಯಾರಂಟಿಗಳನ್ನು ಕೊಟ್ಟು ಸಕ್ಸಸ್ ಅಗಿದೆ ಎಂದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕಾದರೆ ಕನಿಷ್ಠ ಇನ್ನೂ 15 ವರ್ಷ ಬೇಕು. 2028ಕ್ಕೂ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲಿದೆ. ಮುಂದಿನ ಚುನಾವಣೆಯಲ್ಲಿ 150 ಸ್ಥಾನ ದಾಟುತ್ತೇವೆ. ನಮಗೆ ಜನರ ಬೆಂಬಲ ಇದೆ. ಉಪ ಚುನಾವಣೆಯಲ್ಲಿ ನಾವೇ ಗೆದ್ದಿಲ್ವಾ? ಒಳ್ಳೆಯ ಸರ್ಕಾರ ಕೊಟ್ಟಿದ್ದೇವೆ. ಅದಕ್ಕೆ ಜನರು ಗೆಲ್ಲಿಸಿದ್ದಾರೆ. 2028ಕ್ಕೆ 150 ಸೀಟ್ ಗೆದ್ದೇ ಗೆಲ್ಲುತ್ತೇವೆ ಬರೆದಿಟ್ಟುಕೊಳ್ಳಿ ಎಂದು ವಿಶ್ವಾಸದಿಂದ ನುಡಿದರು.