ಸಾರಾಂಶ
ಪ್ರೇಯಸಿ ಸಂಪರ್ಕಕ್ಕೆ ಸಿಗಲಿಲ್ಲವೆಂಬ ಕಾರಣಕ್ಕೆ ಮನನೊಂದ ಭಗ್ನ ಪ್ರೇಮಿ ಕಲ್ಲು ಸಿಡಿಸಲು ಬಳಸುವ ಜಿಲೆಟಿನ್‌ನಿಂದ ಸ್ಫೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹೊಣಕೆರೆ ಹೋಬಳಿಯ ಕಾಳೇನಹಳ್ಳಿಯಲ್ಲಿ ಶನಿವಾರ ತಡರಾತ್ರಿ ಸಂಭವಿಸಿದೆ.
ನಾಗಮಂಗಲ : ಪ್ರೇಯಸಿ ಸಂಪರ್ಕಕ್ಕೆ ಸಿಗಲಿಲ್ಲವೆಂಬ ಕಾರಣಕ್ಕೆ ಮನನೊಂದ ಭಗ್ನ ಪ್ರೇಮಿ ಕಲ್ಲು ಸಿಡಿಸಲು ಬಳಸುವ ಜಿಲೆಟಿನ್‌ನಿಂದ ಸ್ಫೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹೊಣಕೆರೆ ಹೋಬಳಿಯ ಕಾಳೇನಹಳ್ಳಿಯಲ್ಲಿ ಶನಿವಾರ ತಡರಾತ್ರಿ ಸಂಭವಿಸಿದೆ.
ತಾಲೂಕಿನ ಮಾಗಡಿ- ಜಲಸೂರು ರಾಜ್ಯ ಹೆದ್ದಾರಿ ಬದಿಯ ಬಸವೇಶ್ವರನಗರದ ಚಾಮುಂಡಿ ಎಂಬುವರ ಪುತ್ರ ರಾಮಚಂದ್ರ (20) ಎಂಬಾತನ ದೇಹ ಛೀದ್ರವಾಗುವಂತೆ ಸ್ಫೋಟಿಸಿಕೊಂಡು ಜೀವ ಕಳೆದುಕೊಂಡಿರುವ ನತದೃಷ್ಟ ಭಗ್ನಪ್ರೇಮಿ.
ಬಸವೇಶ್ವರನಗರದ ಬೋವಿ ಸಮುದಾಯಕ್ಕೆ ಸೇರಿದ ರಾಮಚಂದ್ರ ಮತ್ತು ಕಾಳೇನಹಳ್ಳಿ ಮತ್ತೊಂದು ಸಮುದಾಯದ ಅಪ್ರಾಪ್ತೆಯೊಬ್ಬಳು ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರ ವಿವಾಹಕ್ಕೆ ವಯಸ್ಸು ಮತ್ತು ಜಾತಿ ಅಡ್ಡಿಯಾಗಬಹುದೆಂಬ ಕಾರಣಕ್ಕೆ ಕಳೆದ ಒಂದೂವರೆ ವರ್ಷದ ಹಿಂದೆ ಇಬ್ಬರೂ ಮನೆ ಬಿಟ್ಟು ಪರಾರಿಯಾಗಿದ್ದರು.
ಈ ಸಂಬಂಧ ಅಪ್ರಾಪ್ತೆ ಪೋಷಕರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಇಬ್ಬರನ್ನೂ ಪತ್ತೆ ಹಚ್ಚಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ರಾಮಚಂದ್ರನನ್ನು ಜೈಲಿಗಟ್ಟಿ, ಬಾಲಕಿಯನ್ನು ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿತ್ತು.
ಕೆಲದಿನಗಳ ನಂತರ ಎರಡೂ ಕುಟುಂಬಗಳ ನಡುವೆ ರಾಜೀಸಂಧಾನವಾದ ಬಳಿಕ ಇಬ್ಬರೂ ಸಹ ಹೊರಬಂದು ಅವರವರ ಮನೆಯಲ್ಲಿದ್ದರು. ಒಬ್ಬರನನ್ನೊಬ್ಬರು ಸಂಪರ್ಕಿಸದಂತೆ ಪ್ರೀತಿಸುವುದನ್ನು ಬಿಟ್ಟು ತಮ್ಮ ಪಾಡಿಗೆ ಇರುವಂತೆ ರಾಮಚಂದ್ರ ಮತ್ತು ಬಾಲಕಿಗೆ ಎಚ್ಚರಿಕೆಯನ್ನೂ ಸಹ ನೀಡಲಾಗಿತ್ತು. ಇಷ್ಟಾದರೂ ಕೂಡ ಒಬ್ಬರನ್ನೊಬ್ಬರು ಬಿಟ್ಟಿರಲಾಗದೆ ಮನೆಯವರಿಗೆ ಗೊತ್ತಾಗದಂತೆ ಸಂಪರ್ಕದಲ್ಲಿದ್ದರು ಎಂದು ಹೇಳಲಾಗುತ್ತಿದೆ.
ಶನಿವಾರ ತಡರಾತ್ರಿ 3 ಗಂಟೆ ಸಮಯದಲ್ಲಿ ಕಾಳೇನಹಳ್ಳಿ ಗ್ರಾಮದಲ್ಲಿ ಸ್ಫೋಟಗೊಂಡ ಭಾರೀ ಸದ್ದು ಕೇಳಿಸುತ್ತಿದ್ದಂತೆ ಗಾಬರಿಗೊಂಡ ಸ್ಥಳೀಯರು ನಿದ್ರೆಯಿಂದ ಎದ್ದು ಬಂದು ನೋಡುವಷ್ಟರಲ್ಲಿ ಅಪ್ರಾಪ್ತೆ ಮನೆ ಮುಂದೆ ದೇಹವನ್ನು ಛೀದ್ರಗೊಳಿಸಿಕೊಂಡು ರಾಮಚಂದ್ರ ಸತ್ತುಬಿದ್ದಿದ್ದನು.
ಸ್ಫೋಟದ ತೀವ್ರತೆಗೆ ದೇಹದ ಕೆಲ ಭಾಗ ಛೀದ್ರಗೊಂಡಿತ್ತು. ಪ್ರೀತಿಸಿದ ಹುಡುಗಿ ಕೈಕೊಟ್ಟಳೆಂಬ ಕಾರಣಕ್ಕೆ ಮನನೊಂದು ಜಿಲೆಟಿನ್ ಕಡ್ಡಿಯನ್ನು ಜೊತೆಯಲ್ಲಿ ತಂದು ಸ್ಫೋಟಿಸಿಕೊಂಡಿರಬಹುದೆಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಗ್ರಾಮಾಂತರ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಭಾನುವಾರ ಬೆಳಗ್ಗೆ ಸ್ಥಳಕ್ಕಾಗಮಿಸಿದ ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಎಎಸ್‌ಪಿ ತಿಮ್ಮಯ್ಯ, ಡಿವೈಎಸ್‌ಪಿ ಚಲುವರಾಜು, ಸಿಪಿಐ ನಿರಂಜನ್, ಪಿಎಸ್‌ಐ ರಾಜೇಂದ್ರ ಪರಿಶೀಲನೆ ನಡೆಸಿದರು.
ಜಿಲೆಟಿನ್ ಸ್ಫೋಟದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಬಾಂಬ್ ಪತ್ತೆ ಮತ್ತು ನಿಷ್ಕ್ರೀಯ ದಳ ಹಾಗೂ ಮೈಸೂರಿನಿಂದ ಎಸ್‌ಎಪ್‌ಐ ತಂಡ ಕಾಳೇನಹಳ್ಳಿ ಗ್ರಾಮಕ್ಕೆ ಭೇಟಿಕೊಟ್ಟು ಘಟನಾ ಸ್ಥಳವನ್ನು ಪರಿಶೀಲಿಸಿದರು. ಬಳಿಕ ಛೀದ್ರಗೊಂಡಿದ್ದ ರಾಮಚಂದ್ರನ ಮೃತದೇಹವನ್ನು ತಾಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಯಿತು.
ಒಂದೂವರೆ ವರ್ಷದ ಹಿಂದೆ ಇಬ್ಬರು ಓಡಿ ಹೋಗಿದ್ರು. ಮೂರು ತಿಂಗಳ ಕಾಲ ಜೈಲಿನಲ್ಲಿ ಇದ್ದು ಬಂದಿದ್ರು. ಜೈಲಿನಿಂದ ಬಂದ ಬಳಿಕವೂ ಆ ಹುಡುಗಿ ಜೊತೆ ಸಂಪರ್ಕದಲ್ಲಿದ್ದ. ಒಂದು ತಿಂಗಳಿಂದ ಆಕೆ ನಮ್ಮ ಮಗನ ಜೊತೆ ಮಾತಾಡ್ತಿರಲಿಲ್ಲ. ನಿನ್ನೆ ಅವರ ಮನೆ ಹತ್ತಿರ ನಮ್ಮ ಮಗ ಹೋದಾಗ ಅವರು ನಮಗೆ ತಿಳಿಸಿದ್ದರೆ ಬುದ್ಧಿ ಹೇಳಿ ಮಗನನ್ನು ಉಳಿಸಿಕೊಳ್ಳುತ್ತಿದ್ದೆವು. ನನ್ನ ಮಗನ ಸಾವಿಗೆ ನ್ಯಾಯ ಕೊಡಿಸಿ ಎಂದು ಕಣ್ಣೀರು ಹಾಕಿರುವ ಮೃತ ರಾಮಚಂದ್ರನ ತಾಯಿ ಲಕ್ಷ್ಮಿ ಅಪ್ರಾಪ್ತೆ ಕುಟುಂಬಸ್ಥರ ವಿರುದ್ಧ ಆರೋಪಿಸಿ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.