ಸಾರಾಂಶ
ಬೆಂಗಳೂರು : ಎರಡು ದಿನಗಳ ಹಿಂದೆ ಹೋಟೆಲ್ ಕೆಲಸಗಾರನ ಬ್ಯಾಗ್‌ನಲ್ಲಿ ಸ್ಫೋಟಕ ವಸ್ತು ಪತ್ತೆ ಪ್ರಕರಣ ಸಂಬಂಧ ಸಂಪಿಗೆಹಳ್ಳಿ ಠಾಣೆ ಪೊಲೀಸರು ಆರೋಪಿಯ ಹೇಳಿಕೆ ಆಧರಿಸಿ ತನಿಖೆ ಚುರುಕುಗೊಳಿಸಿದ್ದಾರೆ.
ಆರೋಪಿ ಬೆಳ್ಳಹಳ್ಳಿ ನಿವಾಸಿ ಅಬ್ದುಲ್ ರೆಹಮಾನ್ (23) ಪೊಲೀಸರ ವಿಚಾರಣೆ ವೇಳೆ ಗೊಂದಲ ಹೇಳಿಕೆಗಳನ್ನು ನೀಡುತ್ತಿದ್ದಾನೆ. ಚಿಂದಿ ಹೆಕ್ಕುವಾಗ ಸ್ಫೋಟಕ ವಸ್ತು ಸಿಕ್ಕಿತು ಎಂದು ಒಮ್ಮೆ ಹೇಳಿದರೆ, ಮತ್ತೊಮ್ಮೆ ಅಪರಿಚಿತ ವ್ಯಕ್ತಿ ಕೊಟ್ಟಿದ್ದಾಗಿ ಹೇಳಿದ್ದಾನೆ. ಹೀಗಾಗಿ ಪೊಲೀಸರು ಎಲ್ಲ ಆಯಾಮಗಳಲ್ಲಿಯೂ ತನಿಖೆ ಕೈಗೊಂಡಿದ್ದಾರೆ.
ಆರೋಪಿ ಬಳಿ ಜಪ್ತಿ ಮಾಡಿರುವ ಸ್ಫೋಟಕ ವಸ್ತು ಕೆಂಪು ಬಣ್ಣದ ಬಾಲ್ ಮಾದರಿಯಲ್ಲಿ ಇದೆ. ಮೇಲ್ನೋಟಕ್ಕೆ ಹ್ಯಾಂಡ್ ಗ್ರೆನೈಡ್‌ನಂತೆ ಕಂಡು ಬಂದಿದೆ. ಇಂತಹ ಸ್ಫೋಟಕ ವಸ್ತು ಆರೋಪಿಗೆ ಹೇಗೆ ಸಿಕ್ಕಿತು ಎಂಬುದು ತನಿಖೆಯಿಂದ ಬೆಳಕಿಗೆ ಬರಬೇಕಿದೆ. ಸದ್ಯ ಆ ಸ್ಫೋಟಕ ವಸ್ತುವನ್ನು ನಿಷ್ಕ್ರಿಯಗೊಳಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಅದು ಯಾವ ಮಾದರಿಯ ಸ್ಫೋಟಕ, ಆ ಸ್ಫೋಟಕ ತಯಾರಿಕೆಗೆ ಏನೆಲ್ಲಾ ರಾಸಾಯನಿಕ ಬಳಸಲಾಗಿದೆ ಇತ್ಯಾದಿ ಮಾಹಿತಿ ಲಭ್ಯವಾಗಲಿದೆ. ಒಂದೆರಡು ದಿನಗಳಲ್ಲಿ ಎಫ್‌ಎಸ್‌ಎಲ್ ವರದಿ ಪೊಲೀಸರ ಕೈ ಸೇರುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ಪ್ರಕರಣದ ಹಿನ್ನೆಲೆ:
ಆರೋಪಿ ಅಬ್ದುಲ್ ರೆಹಮಾನ್ ಥಣಿಸಂದ್ರ ಮುಖ್ಯರಸ್ತೆಯ ಶ್ರೀದೇವಿ ವೈಭವ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ. ಮಾ.21ರಂದು ಸಹ ಕೆಲಸಗಾರ ಆರೋಪಿಯ ಬ್ಯಾಗ್ ಪರಿಶೀಲಿಸಿದಾಗ ಸ್ಫೋಟಕ ವಸ್ತು ಪತ್ತೆಯಾಗಿತ್ತು. ಈ ಸಂಬಂಧ ಹೋಟೆಲ್ ಮಾಲೀಕರು ನೀಡಿದ ಮಾಹಿತಿ ಮೇರೆಗೆ ಸಂಪಿಗೆಹಳ್ಳಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ, ಸ್ಫೋಟಕವನ್ನು ಜಪ್ತಿ ಮಾಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿದ್ದ ಪೊಲೀಸರು ಆರೋಪಿಯ ಅಬ್ದುಲ್ ರೆಹಮಾನ್‌ನನ್ನು ಐದು ದಿನಗಳ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.