ಸಾರಾಂಶ
ಬೆಂಗಳೂರು : ಇತ್ತೀಚಿಗೆ ವಾಹನ ಬಿಡಿ ಭಾಗಗಳ ಮಾರಾಟ ಮಳಿಗೆ ನೌಕರನ ಕೋಣೆಗೆ ನುಗ್ಗಿ ಬೆದರಿಸಿ ಹಣ ಸುಲಿಗೆ ಮಾಡಿ ಪರಾರಿಯಾಗಿದ್ದ ಐವರು ಕಿಡಿಗೇಡಿಗಳನ್ನು ಕಲಾಸಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದೊಡ್ಡಮಾವಳ್ಳಿಯ ಉಮರ್ ಅಹ್ಮದ್, ಆರ್.ಟಿ.ನಗರದ ಶಾಜಾದ್ ಪಾಷ, ಮೊಹಮ್ಮದ್ ಮುಯಿಜ್, ಕಲಾಸಿಪಾಳ್ಯದ ಮೋತಿನಗರದ ಯಾಸಿನ್ ಅಹಮದ್ ಹಾಗೂ ಶೋಯೆಬ್ ಪಾಷ ಬಂಧಿತರಾಗಿದ್ದು, ಆರೋಪಿಗಳಿಂದ ₹11.30 ಲಕ್ಷ ನಗದು, 7 ಮೊಬೈಲ್‌ಗಳು, ಬೈಕ್ ಹಾಗೂ ಕಾರು ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಸಿದ್ದಯ್ಯ ರಸ್ತೆಯ ನೆಲೆಸಿರುವ ರಾಮ್ ಪ್ರಸಾದ್ ಎಂಬುವರ ಕೋಣೆಗೆ ನುಗ್ಗಿ ಕಿಡಿಗೇಡಿಗಳು ಹಣ ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಿದ್ದಯ್ಯ ರಸ್ತೆಯಲ್ಲಿ ಪ್ರತಿಷ್ಠಿತ ವಾಹನ ಬಿಡಿ ಭಾಗಗಳ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ರಾಮ್ ಪ್ರಸಾದ್, ಆ ಮಳಿಗೆ ಸಮೀಪದಲ್ಲೇ ಬಾಡಿಗೆ ಕೋಣೆಯಲ್ಲಿ ನೆಲೆಸಿದ್ದಾರೆ. ಮಳಿಗೆಯಲ್ಲಿ ದೈನಂದಿನ ವಹಿವಾಟು ಮುಗಿದ ಬಳಿಕ ಸಂಪಾದಿಸಿದ ಹಣವನ್ನು ಬ್ಯಾಂಕ್‌ಗೆ ಅವರು ಜಮೆ ಮಾಡುತ್ತಿದ್ದರು. ಅಂತೆಯೇ ಬ್ಯಾಂಕ್‌ಗೆ ₹15 ಲಕ್ಷ ಹಣವನ್ನು ಬ್ಯಾಂಕ್ ಜಮೆ ಮಾಡಲು ರಾಮ್ ಪ್ರಸಾದ್ ಅವರಿಗೆ ಮಳಿಗೆ ಮಾಲಿಕರು ಕೊಟ್ಟಿದ್ದರು. ಆ ಹಣವನ್ನು ತಂದು ತಮ್ಮ ರೂಮ್‌ನಲ್ಲಿ ಅವರು ಇಟ್ಟಿದ್ದರು. ನ.19 ರಂದು ರಾಮ್ ರೂಮ್‌ಗೆ ನುಗ್ಗಿ ಆರೋಪಿಗಳು ಜೀವ ಬೆದರಿಕೆ ಹಾಕಿ ಆರೋಪಿಗಳು ಹಣ ದೋಚಿದ್ದರು. ಈ ಬಗ್ಗೆ ಸಂತ್ರಸ್ತ ನೀಡಿದ ದೂರಿನ ಮೇರೆಗೆ ಕಲಾಸಿಪಾಳ್ಯ ಪೊಲೀಸರು ತನಿಖೆ ನಡೆಸಿದ್ದಾರೆ.