ನಕಲಿ ಎಂಟೆಕ್ ಪದವಿ ಪ್ರಮಾಣಪತ್ರ ಸಲ್ಲಿಸಿ ಹುದ್ದೆಗೆ ನೇಮಕ: ಒಬ್ಬನ ವಿರುದ್ಧ ಎಫ್‌ಐಆರ್ ದಾಖಲು

| N/A | Published : Feb 14 2025, 12:31 AM IST / Updated: Feb 14 2025, 04:23 AM IST

KSRP

ಸಾರಾಂಶ

ನಕಲಿ ಎಂಟೆಕ್ ಪದವಿ ಪ್ರಮಾಣಪತ್ರ ಸಲ್ಲಿಸಿ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರ ಹುದ್ದೆಗೆ ನೇಮಕಗೊಂಡಿದ್ದ ಆರೋಪದಡಿ ಒಬ್ಬನ ವಿರುದ್ಧ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

 ಮಂಡ್ಯ : ನಕಲಿ ಎಂಟೆಕ್ ಪದವಿ ಪ್ರಮಾಣಪತ್ರ ಸಲ್ಲಿಸಿ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರ ಹುದ್ದೆಗೆ ನೇಮಕಗೊಂಡಿದ್ದ ಆರೋಪದಡಿ ಒಬ್ಬನ ವಿರುದ್ಧ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಇದೇ ಮಾದರಿಯ ನಕಲಿ ಪ್ರಮಾಣಪತ್ರ ಸಲ್ಲಿಸಿ ಮಂಡ್ಯ ನಿರ್ಮಿತಿ ಕೇಂದ್ರದಲ್ಲಿ ಐವರು ಕಾರ್ಯನಿರ್ವಹಿಸುತ್ತಿರುವುದಾಗಿ ಸಾಮಾಜಿಕ ಹೋರಾಟಗಾರ ಕೆ.ಆರ್. ರವೀಂದ್ರ ಆರೋಪಿಸಿದ್ದಾರೆ.

ಮಂಡ್ಯ ನಿರ್ಮಿತಿ ಕೇಂದ್ರದಲ್ಲಿ ಯೋಜನಾ ವ್ಯವಸ್ಥಾಪಕರಾಗಿದ್ದ ಬೆಂಗಳೂರು ಜಿಲ್ಲೆ ನೆಲಮಂಗಲ ತಾಲೂಕು ಅರಿಶಿನಕುಂಟೆ ಆದರ್ಶ ನಗರ ನಿವಾಸಿ ವಿ.ವಿನೋದ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. 2016ರಲ್ಲಿ ನಕಲಿ ಸ್ನಾತಕೋತ್ತರ ಪದವಿ ದಾಖಲೆಗಳನ್ನು ಸಲ್ಲಿಸಿ ಮಂಡ್ಯ ನಿರ್ಮಿತಿ ಕೇಂದ್ರದ ಪ್ರಧಾನ ವ್ಯವಸ್ಥಾಪಕರ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿದ್ದರು ಎಂದು ದೂರಿದ್ದಾರೆ.

ಏನಾಗಿತ್ತು?

ಬೆಂಗಳೂರು ಜಿಲ್ಲೆ ಅರಿಶಿನಕುಂಟೆಯ ಆದರ್ಶನಗರ ನಿವಾಸಿ ವಿ.ವಿನೋದ್ 13.10.2022ರಂದು ಯೋಜನಾ ವ್ಯವಸ್ಥಾಪಕರ ಹುದ್ದೆಗೆ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯ ಜೊತೆ ಎಂಟೆಕ್ ಇನ್ ಸಿವಿಲ್ ಎಂಜಿನಿಯರಿಂಗ್ ಸ್ನಾತಕೋತ್ತರ ಪದವಿಯನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಪ್ರಥಮ ದರ್ಜೆಯಲ್ಲಿ ಪಾಸು ಮಾಡಿರುವುದಾಗಿ2016ರ ನಕಲಿ ಸ್ನಾತಕೋತ್ತರ ಪದವಿ ದಾಖಲೆಗಳನ್ನು ಸಲ್ಲಿಸಿದ್ದರು ಎಂದಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ 8.9.2023 ರಂದು ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರ ಹುದ್ದೆಗೆ ವಿ.ವಿನೋದ್ ಅವರನ್ನು ಆಯ್ಕೆ ಮಾಡಲಾಗಿತ್ತು. ನಂತರದಲ್ಲಿ ಬೆಂಗಳೂರು ಜಯನಗರದ ರವಿಕುಮಾರ್ ಎಂಬ ಗುತ್ತಿಗೆದಾರ ವಿ.ವಿನೋದ್ ಬಿಇ ಸಿವಿಲ್ ಎಂಜಿನಿಯರಿಂಗ್ ಮಾತ್ರ ಮಾಡಿದ್ದು, ಎಂಟೆಕ್ ಪದವಿ ಪಡೆದಿಲ್ಲವೆಂದು ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ಅದರಂತೆ ಜಿಲ್ಲಾಧಿಕಾರಿಗಳು ಪ್ರಮಾಣಪತ್ರದ ನೈಜತೆಯ ಪರಿಶೀಲನೆಗೆ ಮುಕ್ತ ವಿವಿ ಪರೀಕ್ಷಾಂಗ ಉಪ ಕುಲಸಚಿವರಿಗೆ ಪತ್ರ ಬರೆದಿದ್ದರು ಎಂದು ಹೇಳಿದ್ದಾರೆ.

ವಿ.ವಿನೋದ್ ಎಂಬುವರು ಮುಕ್ತ ವಿಶ್ವವಿದ್ಯಾಲಯದಿಂದ ಎಂಟೆಕ್ ಇನ್ ಸಿವಿಲ್ ಎಂಜಿನಿಯರಿಂಗ್ ಸ್ನಾತಕೋತ್ತರ ಪದವಿ ಪಡೆದಿರುವುದಿಲ್ಲವೆಂದು ಪರೀಕ್ಷಾಂಗ ಉಪ ಕುಲಸಚಿವರು ಸ್ಪಷ್ಟಪಡಿಸಿದ್ದರು. ನಂತರ ನಡೆದ ನಿರ್ಮಿತಿ ಕೇಂದ್ರದ ಆಡಳಿತ ಮಂಡಳಿ ಸಭೆಯಲ್ಲಿ ವಿ.ವಿನೋದ್ ಅವರನ್ನು ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲು ತೀರ್ಮಾನಿಸಿ ನಿರ್ಣಯ ಮಾಡಲಾಗಿತ್ತು ಎಂದು ವಿವರಿಸಿದ್ದಾರೆ.

ಅಲ್ಲದೇ, ವಿನೋದ್ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಿರ್ಮಿತಿ ಕೇಂದ್ರದಲ್ಲಿ 1 ಸೆಪ್ಟಂಬರ್ 2016 ರಿಂದ 12 ಏಪ್ರಿಲ್ 2019ರವರೆಗೆ ಅಸಿಸ್ಟೆಂಟ್ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕರ್ತವ್ಯನಿರ್ವಹಿಸಿರುವ ಬಗ್ಗೆ ಬೆಂಗಳೂರು ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರು ಪತ್ರ ಬರೆದಿದ್ದು ಕೆಆರ್‌ಐಡಿಎಲ್‌ನಲ್ಲೂ ಕಾರ್ಯನಿರ್ವಹಿಸಿರುವ ಬಗ್ಗೆ ಮಾಹಿತಿ ಇರುವುದಾಗಿಯೂ ತಿಳಿಸಿದ್ದಾರೆ.

ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿವಿ ಹೆಸರಿನಲ್ಲಿ ಎಂಟೆಕ್ ಇನ್ ಸಿವಿಲ್ ಎಂಜಿನಿಯರಿಂಗ್ ಸ್ನಾತಕೋತ್ತರ ಪದವಿ, ನಕಲಿ ಅಂಕಪಟ್ಟಿಗಳನ್ನು ಮತ್ತು ದಾಖಲೆಗಳನ್ನು ಸಲ್ಲಿಸಿ ಸರ್ಕಾರಕ್ಕೆ ವಂಚನೆ ಮಾಡಿದ್ದಾರೆ. ನಕಲಿ ಪದವಿ ಅಂಕಪಟ್ಟಿಗಳನ್ನು ತಯಾರು ಮಾಡಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.