ಸಾರಾಂಶ
ಕೌಟುಂಬಿಕ ಕಲಹದಿಂದ ಪತಿ ಕುಡಿದ ಅಮಲಿನಲ್ಲಿ ತನ್ನ ಪತ್ನಿಯನ್ನೇ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಾಲೂಕಿನ ಬೆಳ್ಳೂರು ಹೋಬಳಿಯ ಮಂಥನಹಳ್ಳಿಯಲ್ಲಿ ಸಂಭವಿಸಿದೆ.
ನಾಗಮಂಗಲ : ಕೌಟುಂಬಿಕ ಕಲಹದಿಂದ ಪತಿ ಕುಡಿದ ಅಮಲಿನಲ್ಲಿ ತನ್ನ ಪತ್ನಿಯನ್ನೇ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಾಲೂಕಿನ ಬೆಳ್ಳೂರು ಹೋಬಳಿಯ ಮಂಥನಹಳ್ಳಿಯಲ್ಲಿ ಸಂಭವಿಸಿದೆ.
ಗ್ರಾಮದ ತೇಜಸ್ವಿನಿ (38) ಪತಿಯಿಂದ ಕೊಲೆಯಾದ ದುರ್ದೈವಿ. ಈಕೆಯ ಪತಿ ಜಯರಾಮು ಕೊಲೆ ಮಾಡಿರುವ ಆರೋಪಿ.
ಕೆಲ ವರ್ಷಗಳಿಂದ ದಂಪತಿ ನಡುವೆ ಕೌಟುಂಬಿಕ ಕಲಹಗಳು ನಡೆದು ಅನೇಕ ಬಾರಿ ಗ್ರಾಮದ ಹಿರಿಯರು ರಾಜಿಸಂಧಾನ ಕೂಡ ಮಾಡಿದ್ದರು ಎನ್ನಲಾಗಿದೆ. ಕೆಲವು ತಿಂಗಳ ಹಿಂದೆ ಪತ್ನಿ ಮಕ್ಕಳೊಂದಿಗೆ ಗ್ರಾಮದಲ್ಲಿ ವಾಸಿಸುವಂತೆ ತಿಳಿಸಿ ತಾನು ಬೆಂಗಳೂರಿಗೆ ತೆರಳಿದ್ದ ಆರೋಪಿ ಜಯರಾಮು, ಕೆಲ ದಿನಗಳ ಹಿಂದೆಯಷ್ಟೆ ಬೆಂಗಳೂರಿನಿಂದ ಸ್ವಗ್ರಾಮಕ್ಕೆ ಮರಳಿದ್ದನು.
ಬುಧವಾರ ಸಂಜೆ ಪಾನಮತ್ತನಾಗಿ ಮನೆಗೆ ಬಂದ ಜಯರಾಮು ಪತ್ನಿ ಜತೆ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿ ಪತ್ನಿಯ ಕುತ್ತಿಗೆಗೆ ಸ್ಕ್ರೂಡ್ರೈವರ್‌ನಿಂದ ಚುಚ್ಚಿ ಹಾಗೂ ತಲೆಗೆ ಕೊಡಲಿಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಮೃತ ಮಹಿಳೆಗೆ ಒಂದು ಗಂಡು ಮತ್ತು ಹೆಣ್ಣು ಮಕ್ಕಳಿದ್ದಾರೆ. ವಿಷಯ ತಿಳಿದ ಬೆಳ್ಳೂರು ಪೊಲೀಸ್ ಠಾಣೆ ಪಿಎಸ್‌ಐ ರವಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿ ಜಯರಾಮನನ್ನು ಬಂಧಿಸಿದ್ದಾರೆ.
ಈ ಸಂಬಂಧ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ ಸಾವು
ಮಳವಳ್ಳಿ:ತಾಲೂಕಿನ ಬೆಳಕವಾಡಿ ಟಿ.ನರಸೀಪುರ ರಸ್ತೆಯ ವಾಸುವಳ್ಳಿ ಬಳಿ ಬುಧವಾರ ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಗಾಯಗೊಂಡಿದ್ದ ಮತ್ತೊಬ್ಬ ಬೈಕ್ ಸವಾರ ಬಿಜಿಪುರ ಗ್ರಾಮದ ಶೇಖರ್ ಪುತ್ರ ಅಭಿಷೇಕ್ (22) ಚಿಕಿತ್ಸೆ ಫಲಕಾರಿಯಗದೇ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಈ ಸಂಬಂಧ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತ ವ್ಯಕ್ತಿ ರೈಲಿಗೆ ಸಿಲುಕಿ ಸಾವು
ಅಪರಿಚಿತ ವ್ಯಕ್ತಿ ರೈಲಿಗೆ ಸಿಲುಕಿ ಮೃತಪಟ್ಟಿರುವ ಘಟನೆ ಮಂಡ್ಯ ಮತ್ತು ಯಲಿಯೂರು ಮಾರ್ಗದಲ್ಲಿ ಗುರುವಾರ ಬೆಳಗ್ಗೆ ಜರುಗಿದೆ. ಸುಮಾರು 35 ರಿಂದ 40 ವರ್ಷ ವಯಸ್ಸಿನ ವ್ಯಕ್ತಿ ಮೈಸೂರು- ಬೆಂಗಳೂರು ಜೋಡಿ ರೈಲು ಮಾರ್ಗದ ನಡುವೆ ಯಾವುದೋ ರೈಲುಗಾಡಿಗೆ ಸಿಕ್ಕಿ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆ ಉಸಿರು ಎಳೆದಿದ್ದಾನೆ.
ಮೃತನು 5.6 ಅಡಿ ಎತ್ತರ, ಗೋದಿ ಮೈಬಣ್ಣ, ದುಂಡು ಮುಖ, ಚಪ್ಪಟೆ ಮೂಗು, ತಲೆಯಲ್ಲಿ ಒಂದು ಇಂಚು ಕಪ್ಪು ಕೂದಲು ಹಾಗೂ ಮೀಸೆ ದಾಡಿ ಬಿಟ್ಟಿದ್ದಾನೆ. ಈತನ ಬಲಗೈನಲ್ಲಿ ತ್ರಿಶೂಲ ಮತ್ತು ಕುದುರೆಮುಖದ ಹಚ್ಚೆ ಗುರುತು ಇದೆ.ಬಲಗೈನಲ್ಲಿ ಹಳದಿ ಮತ್ತು ಕಪ್ಪು ದಾರ ಹಾಗೂ ಕತ್ತಿನಲ್ಲಿ ಹಿತ್ತಾಳೆ ಸರ ಧರಿಸಿದ್ದಾನೆ. ಮೈ ಮೇಲೆ ಸಿಮೆಂಟ್ ಬಣ್ಣದ ಹರಿದ ಜೀನ್ಸ್ ಪ್ಯಾಂಟ್, ತಿಳಿ ನೀಲಿ ಬಣ್ಣದ ಅಂಡರ್ವೇರ್, ಚಿಂದಿಯಾದ ಹಳದಿ ಬಣ್ಣದ ಅರ್ಧ ತೋಳಿನ ಶರ್ಟ ಹಾಗೂ ಸೊಂಟದಲ್ಲಿ ಕಪ್ಪು ಬಣ್ಣದ ಹಾಕಿದ್ದಾನೆ. ಈತನ ಬಗ್ಗೆ ವಾರಸುದಾರರು ಇದ್ದಲ್ಲಿ ಮೈಸೂರು ರೈಲ್ವೆ ಪೊಲೀಸ್ ಠಾಣೆ. ಮೊ-948080 2 1 22 ಸಂಪರ್ಕಿಸುವಂತೆ ಕೋರಲಾಗಿದೆ.