ಮುತ್ತತ್ತಿ ಬಳಿಯ ಕಾವೇರಿ ನದಿಯಲ್ಲಿ ಈಜಲು ಹೋಗಿ ಅಪ್ಪ, ಮಗ ಸೇರಿ ನಾಲ್ವರು ಜಲಸಮಾಧಿ..!

| Published : Mar 27 2024, 01:10 AM IST / Updated: Mar 27 2024, 11:47 AM IST

death 2
ಮುತ್ತತ್ತಿ ಬಳಿಯ ಕಾವೇರಿ ನದಿಯಲ್ಲಿ ಈಜಲು ಹೋಗಿ ಅಪ್ಪ, ಮಗ ಸೇರಿ ನಾಲ್ವರು ಜಲಸಮಾಧಿ..!
Share this Article
  • FB
  • TW
  • Linkdin
  • Email

ಸಾರಾಂಶ

ಹರಕೆ ತೀರಿಸಲು ಆಂಜನೇಯಸ್ವಾಮಿ ದೇವರ ದರ್ಶನಕ್ಕೆ ಬಂದಿದ್ದ ವೇಳೆ ಕಾವೇರಿ ನದಿಯಲ್ಲಿ ಈಜಲು ಹೋಗಿ ಅಪ್ಪ, ಮಗ ಸೇರಿ ನಾಲ್ವರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಸಮೀಪದ ಮುತ್ತತ್ತಿಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.

ಕನ್ನಡಪ್ರಭ ವಾರ್ತೆ ಹಲಗೂರು

ಹರಕೆ ತೀರಿಸಲು ಆಂಜನೇಯಸ್ವಾಮಿ ದೇವರ ದರ್ಶನಕ್ಕೆ ಬಂದಿದ್ದ ವೇಳೆ ಕಾವೇರಿ ನದಿಯಲ್ಲಿ ಈಜಲು ಹೋಗಿ ಅಪ್ಪ, ಮಗ ಸೇರಿ ನಾಲ್ವರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಸಮೀಪದ ಮುತ್ತತ್ತಿಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.

ಮೈಸೂರಿನ ನಾಗರಾಜು ಪುತ್ರ ನಾಗೇಶ್ (40), ಈತನ ಪುತ್ರ ಭರತ್ (17), ಸಂಬಂಧಿಕರಾದ ಕೃಷ್ಣರ ಪುತ್ರ ಮಹದೇವ (14) ಹಾಗೂ ಗುರು (32) ಮೃತಪಟ್ಟ ದುರ್ದೈವಿಗಳು.

ಮೂಲತಃ ಮೈಸೂರು ಕನಕನಗರ ವಾಸಿ ಭಾಗ್ಯಮ್ಮ ರಾಜು ಎಂಬುವವರು ಮುತ್ತತ್ತಿಯ ಆಂಜನೇಯ ಸ್ವಾಮಿಗೆ ಹರಕೆ ಹೊತ್ತುಕೊಂಡಿದ್ದು. ಹರಕೆ ತೀರಿಸಲು ತಮ್ಮ ಬಂಧು ಬಳಗ ಮತ್ತು ಕುಟುಂಬದ ಸಹಿತರೊಂದಿಗೆ ಪ್ರಸಿದ್ಧ ಪ್ರವಾಸಿಗರ ಪ್ರೇಕ್ಷಣೀಯ ಸ್ಥಳವಾದ ಮುತ್ತತ್ತಿಗೆ ಬಂದಿದ್ದರು.

ದೇವರ ದರ್ಶನ ಪಡೆದ ಮೇಲೆ ಬೇಸಿಗೆಯ ಬಿಸಿಲಿನ ತಾಪ ನೀಗಿಸಿಕೊಳ್ಳಲು ಕಾವೇರಿ ನದಿಯಲ್ಲಿ 20ಕ್ಕೂ ಹೆಚ್ಚು ಜನ ಸ್ನಾನ ಮಾಡುತ್ತಿದ್ದ ವೇಳೆ ನಾಗೇಶ್ ಎಂಬುವವರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾರೆ. 

ಇವರನ್ನು ರಕ್ಷಿಸಲು ಹೋದ ಅವರ ಪುತ್ರ ಭರತ್ ಸಹ ನೀರಿನಲ್ಲಿ ಮುಳುಗಿದ್ದು, ಇವರಿಬ್ಬರನ್ನು ರಕ್ಷಿಸಲು ಹೋದ ಮಹದೇವ ಮತ್ತು ಗುರು ಸಹ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಹೀಗೆ ಒಬ್ಬರೊನ್ನಬ್ಬರು ರಕ್ಷಿಸಲು ಹೋಗಿ ನಾಲ್ವರು ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಮೈಸೂರಿನ ಗುಂಡೂರಾವ್ ನಗರದಲ್ಲಿ ವಾಸವಾಗಿರುವ ನಾಗೇಶ್ ಪೇಂಟಿಂಗ್ ಕೆಲಸ ಮಾಡುತ್ತಿದ್ದರು. ಇವರ ಜೊತೆಯಲ್ಲಿ ಪುತ್ರ ಭರತ್ ಸಹ ಅದೇ ಕರ್ತವ್ಯದಲ್ಲಿ ಸಹಕಾರಿಯಾಗಿದ್ದನು. 

ಮಹದೇವ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದು ಗುರು ಬೆಂಗಳೂರಿನ ತ್ಯಾಗರಾಜ ನಗರದಲ್ಲಿ ಫುಡ್ ಡೆಲಿವರಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದನು ಎಂದು ತಿಳಿದು ಬಂದಿದೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಈಜುಗಾರರ ಸಹಾಯದೊಂದಿಗೆ ಮೃತಪಟ್ಟ ನಾಲ್ಕು ದೇಹಗಳನ್ನು ನದಿಯಿಂದ ಹೊರ ತೆಗೆದು ಮಳವಳ್ಳಿ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ನೀಡಲಾಯಿತು.

ಆಸ್ಪತ್ರೆಯ ಆವರಣದಲ್ಲಿ ಅವರ ಕುಟುಂಬದವರ ಗೋಳು ಮುಗಿಲು ಮುಟ್ಟಿತು. ಮೃತ ನಾಗೇಶನಿಗೆ ಒರ್ವ ಪುತ್ರ, ಪುತ್ರಿ ಇದ್ದರು. ಘಟನೆಯಲ್ಲಿ ಅಪ್ಪ-ಮಗ ಇಬ್ಬರೂ ಮೃತಪಟ್ಟಿರುವುದು ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ ಇಬ್ಬರನ್ನು ಕಳೆದುಕೊಂಡಿರುವುದು ನೋವಿನ ಸಂಗತಿಯಾಗಿದೆ.

ತಹಸೀಲ್ದಾರ್ ಲೋಕೇಶ್, ಡಿವೈಎಸ್ಪಿ ಕೃಷ್ಣಪ್ಪ, ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಧರ್ ಮತ್ತು ಸಬ್ ಇನ್ಸ್ ಪೆಕ್ಟರ್ ಬಿ.ಮಹೇಂದ್ರ ಸ್ಥಳ ಪರಿಶೀಲನೆ ನಡೆಸಿದರು. ಮೃತ ನಾಗೇಶ್ ಅವರ ಪತ್ನಿ ಮಂಜುಳಾ ದೂರಿನ ಅನ್ವಯ ಪ್ರಕರಣ ದಾಖಲು ಮಾಡಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನಾಲ್ವರ ಸಾವು ಇದೇ ಮೊದಲು

ಹಲಗೂರು: ಮುತ್ತತ್ತಿ ಕಾವೇರಿ ನದಿಯಲ್ಲಿ ಈಜುಲು ಹೋಗಿ ಈ ಹಿಂದೆ ಹಲವು ಮಂದಿ ಸಾವನ್ನಪ್ಪಿದ್ದರು. ಆದರೆ, ಕುಟುಂಬದ ಸಮೇತ ನಾಲ್ವರು ಮೃತ ಪಟ್ಟಿರುವುದ ಇದೇ ಮೊದಲು ಬಾರಿ ದುರ್ದೈವವಾಗಿದೆ.

ಮುತ್ತತ್ತಿಗೆ ಪ್ರವಾಸಕ್ಕೆಂದು ಬರುವ ಯುವಕರು ಕುಡಿದು ಮತ್ತಿನಲ್ಲಿ ಕಾವೇರಿ ನದಿಯಲ್ಲಿ ಈಜಲು ಹೋಗಿ ಸಾವನ್ನಪ್ಪುತ್ತಿದ್ದ ಬಗ್ಗೆ ಕಠಿಣ ಕ್ರಮ ಕೈಗೊಂಡ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕಾವೇರಿ ನದಿಯಲ್ಲಿ ಈಜದಂತೆ ಕಟ್ಟುನಿಟ್ಟಿನ ಆದೇಶ ನೀಡಿತ್ತು. ಇದರ ಪರಿಣಾಮ ಇತ್ತೀಚೆಗೆ ಕಾವೇರಿ ನದಿಯಲ್ಲಿ ಸಾವು ಸಂಭವಿಸುವುದು ಕಡಿಮೆಯಾಗಿತ್ತು.

ಆದರೆ, ಕಾವೇರಿ ನದಿ ದಡದಲ್ಲಿ ಅಪಾಯದ ಸೂಚನೆ ಫಲಕಗಳನ್ನು ಹಾಕಿದ್ದರೂ ಮೊದಲ ಬಾರಿಗೆ ನಾಲ್ಕು ಮಂದಿ ಸಾವನ್ನಪ್ಪಿರುವುದು ನೋವಿನ ಸಂಗತಿಯಾಗಿದೆ.