ಸಾರಾಂಶ
ಬೆಂಗಳೂರು : ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತನ್ನ ಇಬ್ಬರು ಮಕ್ಕಳ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಹತ್ಯೆಗೈದು ಮಲ ತಂದೆ ಪರಾರಿಯಾಗಿರುವ ಘಟನೆ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.
ಹೆಬ್ಬಾಳ ದಾಸರಹಳ್ಳಿ ಸಮೀಪದ ಕಾವೇರಿ ಲೇಔಟ್ ನಿವಾಸಿಗಳಾದ ಸೃಷ್ಠಿ (15) ಹಾಗೂ ಸೋನಿ (13) ಕೊಲೆಯಾದ ದುರ್ದೈವಿಗಳು. ಈ ಕೃತ್ಯ ಎಸಗಿ ಪರಾರಿಯಾಗಿರುವ ಮೃತರ ಮಲ ತಂದೆ ಮೋಹನ್ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಮನೆಯಲ್ಲಿ ಇಬ್ಬರು ಹೆಣ್ಣು ಮಕ್ಕಳ ಮೇಲೆ ಹಲ್ಲೆ ನಡೆಸಿ ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಹತ್ಯೆಗೈದು ಕೊಂದು ಮೋಹನ್ ಪರಾರಿಯಾಗಿದ್ದಾನೆ. ಕೆಲ ಹೊತ್ತಿನ ಬಳಿಕ ಕೆಲಸದಿಂದ ಮನೆಗೆ ಮಕ್ಕಳ ತಾಯಿ ಅನಿತಾ ಮರಳಿದಾಗ ಭೀಕರ ಕೃತ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
9 ವರ್ಷಗಳ ಹಿಂದೆ ಉತ್ತರಾಕಾಂಡ ರಾಜ್ಯದ ಮೋಹನ್ ಜತೆ ಉತ್ತರಪ್ರದೇಶ ಮೂಲದ ಅನಿತಾ ಎರಡನೇ ಮದುವೆಯಾಗಿದ್ದರು. ಮದುವೆ ಬಳಿಕ ತನ್ನ ಇಬ್ಬರು ಮಕ್ಕಳ ಜತೆ ಮೋಹನ್‌ನೊಂದಿಗೆ ಆಕೆ ವಾಸವಾಗಿದ್ದರು. ಖಾಸಗಿ ಕಂಪನಿಯಲ್ಲಿ ಅನಿತಾ ಕೆಲಸ ಮಾಡುತ್ತಿದ್ದರೆ, ಡೆಲವರಿ ಬಾಯ್ ಆಗಿ ಮೋಹನ್ ಕೆಲಸ ಮಾಡುತ್ತಿದ್ದರು. ಇತ್ತೀಚಿಗೆ ಕೌಟುಂಬಿಕ ವಿಚಾರವಾಗಿ ದಂಪತಿ ಮಧ್ಯೆ ಮನಸ್ತಾಪವಾಗಿತ್ತು. ತನ್ನ ಮೊದಲ ಗಂಡನ ಮಕ್ಕಳ ಜತೆ ಮೋಹನ್ ಅನ್ಯೋನ್ಯವಾಗಿಲ್ಲ ಎಂದು ಅನಿತಾ ಅಸಮಾಧಾನಗೊಂಡಿದ್ದಳು. ಇದೇ ಕಾರಣಕ್ಕೆ ಮನೆಯಲ್ಲಿ ಜಗಳವಾಗುತ್ತಿತ್ತು ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಮಕ್ಕಳನ್ನು ಮೋಹನ್ ಕೊಂದಿರಬಹುದು ಎಂದು ಆರೋಪಿಸಲಾಗಿದೆ.
ಶನಿವಾರ ಬೆಳಗ್ಗೆ ಅನಿತಾ ಕೆಲಸಕ್ಕೆ ಹೋಗಿದ್ದಳು. ಮನೆ ಸಮೀಪದ ಶಾಲೆಯಲ್ಲಿ 9ನೇ ತರಗತಿಯಲ್ಲಿ ಸೃಷ್ಠಿ ಹಾಗೂ 7 ತರಗತಿಯಲ್ಲಿ ಸೋನಿ ಓದುತ್ತಿದ್ದರು. ಶಾಲೆ ಮುಗಿಸಿಕೊಂಡು ಮಧ್ಯಾಹ್ನ ಮಕ್ಕಳು ಮನೆಗೆ ಮರಳಿದ್ದರು. ಆ ವೇಳೆ ಮಕ್ಕಳ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಮೋಹನ್ ಹತ್ಯೆಗೈದು ಪರಾರಿಯಾಗಿದ್ದಾನೆ. ಈ ಕೃತ್ಯಕ್ಕೆ ನಿಖರ ಕಾರಣ ಗೊತ್ತಾಗಿಲ್ಲ. ಕೆಲಸ ಮುಗಿಸಿಕೊಂಡು ಮನೆಗೆ ಮರಳಿದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಕ್ಕಳ ಮೃತದೇಹ ಕಂಡು ಅನಿತಾ ಆಘಾತಗೊಂಡಿದ್ದಾಳೆ. ಮನೆಯಲ್ಲಿ ಆಕೆಯ ಚೀರಾಟ ಕೇಳಿ ಜಮಾಯಿಸಿದ ಸ್ಥಳೀಯರು, ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೃತ್ಯ ಎಸಗಿದ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಮೋಹನ್ ತಪ್ಪಿಸಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.