ಸಾರಾಂಶ
ಕನ್ನಡಪ್ರಭ ವಾರ್ತೆ ಯಲಹಂಕ
ಒತ್ತುವರಿ ತೆರವು ಮಾಡಲು ಬಂದ ಜೆಸಿಬಿ ವಾಹನಕ್ಕೆ ವ್ಯಕ್ತಿಯೋರ್ವ ಬೆಂಕಿಹಚ್ಚಿದ ಘಟನೆ ಶಿವಕೋಟೆ ಗ್ರಾಮದಲ್ಲಿ ಬುಧವಾರ ನಡೆದಿದೆ.
ಶಿವಕೋಟೆ ಗ್ರಾಮದ ಸರ್ವೆ ಸಂಖ್ಯೆ 10/7ರಲ್ಲಿ ಹಾದು ಹೋಗಿರುವ ಬಂಡಿಜಾಡು ನಕಾಶೆ ರಸ್ತೆ ಒತ್ತುವರಿಯಾಗಿದೆ. ಯಲಹಂಕ ತಹಸೀಲ್ದಾರ್ ಅನಿಲ್‌ಕುಮಾರ್ ಅರೋಲಿಕರ್ ನೇತೃತ್ವದಲ್ಲಿ ಕಂದಾಯ ಇಲಾಖೆಯ ಸಿಬ್ಬಂದಿ, ಪೊಲೀಸ್ ಬಂದೋಬಸ್ತ್‌ನೊಂದಿಗೆ ಬೆಳಗ್ಗೆ 10.30ರ ಹೊತ್ತಿನಲ್ಲಿ ಒತ್ತುವರಿ ತರವುಗೊಳಿಸಲು ಮುಂದಾದರು.
ಈ ವೇಳೆ ರೊಚ್ಚಿಗೆದ್ದ ಒತ್ತುವರಿದಾರರಾದ ಸಿ.ಬಚ್ಚೇಗೌಡ ಮತ್ತು ಅವರ ಮಗ ಚೇತನ್, ಸೀಮೆಎಣ್ಣೆ ಮತ್ತು ಪೆಟ್ರೋಲ್ ತುಂಬಿದ ಗಾಜಿನ ಬಾಟಲ್‌ಗಳಿಗೆ ಬೆಂಕಿ ಹಚ್ಚಿ, ಜೆಸಿಬಿ ವಾಹನದ ಮೇಲೆ ಎಸೆದಿದ್ದಾರೆ.
ಇದರಿಂದ ಜೆಸಿಬಿ ವಾಹನಕ್ಕೆ ಬೆಂಕಿ ಹೊತ್ತಿಕೊಂಡು ಬಹುತೇಕ ಹಾನಿಯಾಗಿದೆ. ತಕ್ಷಣ ಚಾಲಕ ವಾಹನದಿಂದ ಕೆಳಗಿಳಿದು ಓಡಿದ್ದಾನೆ. ನಂತರ ಕಂದಾಯ ಇಲಾಖೆಯ ಸಿಬ್ಬಂದಿ ಹಾಗೂ ಸ್ಥಳೀಯರು ಬೆಂಕಿಯನ್ನು ನಂದಿಸಿದ್ದಾರೆ.
ಜೆಸಿಬಿ ವಾಹನಕ್ಕೆ ಬೆಂಕಿಹಚ್ಚಿದ ಆರೋಪಿಗಳ ವಿರುದ್ಧ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಇಬ್ಬರನ್ನೂ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಜೆಸಿಬಿ ವಾಹನಕ್ಕೆ ಹಾನಿಯಾಗಿ ಉಂಟಾಗಿರುವ ನಷ್ಟವನ್ನು ಬಚ್ಚೇಗೌಡ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ನಷ್ಟವನ್ನು ಭರಿಸಲು ವ್ಯವಸ್ಥೆ ಮಾಡಲಾಗುವುದು ಎಂದು ತಹಸೀಲ್ದಾರ್ ಅನಿಲ್‌ಕುಮಾರ್ ತಿಳಿಸಿದರು.
ನಂತರ ಬೇರೊಂದು ಜೆಸಿಬಿ ವಾಹನದಿಂದ ಬಾಕಿಯಿದ್ದ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಇದರಿಂದ ತಮ್ಮ ಜಮೀನುಗಳಿಗೆ ಕೃಷಿ ಚಟುವಟಿಕೆಗಳಿಗೆ ತೆರಳಲು ರಸ್ತೆಯಿಲ್ಲದೆ ತೊಂದರೆ ಅನುಭವಿಸುತ್ತಿದ್ದ ಸುಮಾರು 30–40 ರೈತರಿಗೆ ಅನುಕೂಲವಾಗಿದೆ ಎಂದು ತಹಸೀಲ್ದಾರ್ ಮಾಹಿತಿ ನೀಡಿದರು.