ದರ್ಶನ್, ಗ್ಯಾಂಗ್‌ಗೆ ಈಗ ಜಾಮೀನು ರದ್ದು ಆತಂಕ - ಸುಪ್ರೀಂನಲ್ಲಿ ಮೇಲ್ಮನವಿಗೆ ಸರ್ಕಾರ ಅಸ್ತು

| Published : Dec 31 2024, 08:16 AM IST

Darshan Pavithra Gowda

ಸಾರಾಂಶ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ನಟ ದರ್ಶನ್‌, ಪವಿತ್ರಾ ಗೌಡ ಸೇರಿ ಏಳು ಮಂದಿ ಆರೋಪಿಗಳಿಗೆ ಮತ್ತೆ ಸಂಕಷ್ಟ ಎದುರಾಗಲಿದ್ದು, ಈ ಆರೋಪಿಗಳ ಜಾಮೀನು ರದ್ದು ಕೋರಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.

 ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ನಟ ದರ್ಶನ್‌, ಪವಿತ್ರಾ ಗೌಡ ಸೇರಿ ಏಳು ಮಂದಿ ಆರೋಪಿಗಳಿಗೆ ಮತ್ತೆ ಸಂಕಷ್ಟ ಎದುರಾಗಲಿದ್ದು, ಈ ಆರೋಪಿಗಳ ಜಾಮೀನು ರದ್ದು ಕೋರಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.

ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯ ಸರ್ಕಾರದ ಪರ ವಾದ ಮಾಡಲು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರಾದ ಅನಿಲ್‌ ಸಿ.ನಿಶಾನಿ ಮತ್ತು ಸಿದ್ಧಾರ್ಥ್‌ ಲೂತ್ರಾ ಅವರನ್ನು ನೇಮಿಸಿ ಆದೇಶಿಸಲಾಗಿದೆ. ಇದರ ಬೆನ್ನಲ್ಲೇ ಪೊಲೀಸರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಇನ್ನೊಂದು ವಾರದೊಳಗೆ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆಯಿದೆ ಎಂದು ಪೊಲೀಸ್‌ ಮೂಲಗಳಿಂದ ತಿಳಿದು ಬಂದಿದೆ.

ಪ್ರಕರಣದ ಪ್ರಮುಖ ಆರೋಪಿಗಳಾದ ನಟ ದರ್ಶನ್‌, ಪವಿತ್ರಾಗೌಡ, ಆರ್‌.ನಾಗರಾಜ್, ಅನುಕುಮಾರ್‌, ಲಕ್ಷ್ಮಣ್‌, ಜಗದೀಶ್‌ ಮತ್ತು ಪ್ರದೂಷ್‌ಗೆ ಹೈಕೋರ್ಟ್‌ ಡಿ.13ರಂದು ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. ಜೈಲಿನಿಂದ ಬಿಡುಗಡೆಯಾಗಿ ನಿಟ್ಟುಸಿರು ಬಿಟ್ಟಿದ್ದ ಆರೋಪಿಗಳಿಗೆ ಇದೀಗ ಹೈಕೋರ್ಟ್‌ ಜಾಮೀನು ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಮುಖಾಂತರ ಶಾಕ್‌ ನೀಡಲು ಮುಂದಾಗಿದೆ.

ವಾರದೊಳಗೆ ಮೇಲ್ಮನವಿ ಸಲ್ಲಿಕೆ:

ಮೇಲ್ಮನವಿಗೆ ಅನುಮತಿ ಸಿಕ್ಕ ಬೆನ್ನಲ್ಲೇ ತನಿಖಾ ತಂಡ ಹಾಗೂ ಸರ್ಕಾರಿ ವಕೀಲರು ಅರ್ಜಿ ಸಲ್ಲಿಕೆಗೆ ಅಗತ್ಯವಿರುವ ಪೂರಕ ದಾಖಲೆಗಳ ಸಿದ್ಧತೆ ಆರಂಭಿಸಿದ್ದಾರೆ. ಪ್ರಕರಣದ ದೋಷಾರೋಪ ಪಟ್ಟಿಯನ್ನು ಕನ್ನಡದಿಂದ ಇಂಗ್ಲಿಷ್‌ಗೆ ತರ್ಜುಮೆ ಮಾಡಿಸಲು ಮುಂದಾಗಿದ್ದಾರೆ. ಇನ್ನೊಂದು ವಾರದೊಳಗೆ ಎಲ್ಲಾ ಪ್ರಕ್ರಿಯೆ ಮುಗಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಕರಣದ ಹಿನ್ನೆಲೆ:

ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಜೂ.8ರ ರಾತ್ರಿ ಬೆಂಗಳೂರಿನ ಪಟ್ಟಣಗೆರೆಯ ಶೆಡ್‌ವೊಂದರಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿತ್ತು. ಜೂ.9ರಂದು ಸುಮ್ಮನಹಳ್ಳಿಯ ರಾಜಕಾಲುವೆ ಬಳಿ ರೇಣುಕಾಸ್ವಾಮಿ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು. ಕೊಲೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಟ ದರ್ಶನ್‌, ಪವಿತ್ರಾಗೌಡ ಸೇರಿ 17 ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಬಳಿಕ ಸುದೀರ್ಘ ವಿಚಾರಣೆ ನಡೆಸಿ ಜೈಲಿಗಟ್ಟಿದ್ದರು. ಬಳಿಕ ತನಿಖೆ ಪೂರ್ಣಗೊಳಿಸಿ ಸಾಕ್ಷ್ಯಗಳು, ಆರೋಪಿಗಳ ಹೇಳಿಕೆಗಳು ಒಳಗೊಂಡಂತೆ ಮೂರು ಸಾವಿರಕ್ಕೂ ಅಧಿಕ ಪುಟಗಳ ದೋಷಾರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಇದರ ಬೆನ್ನಲ್ಲೇ ಎಲ್ಲಾ ಆರೋಪಿಗಳು ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಸುದೀರ್ಘ ವಿಚಾರಣೆ ಬಳಿಕ ಕೆಳಹಂತದ ನ್ಯಾಯಾಲಯ 10 ಮಂದಿ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಉಳಿದ 7 ಆರೋಪಿಗಳಿಗೆ ಡಿ.13ರಂದು ಹೈಕೋರ್ಟ್‌ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಹೀಗಾಗಿ ಸುಮಾರು ಆರು ತಿಂಗಳ ಜೈಲುವಾಸದ ಬಳಿಕ ಎಲ್ಲಾ ಆರೋಪಿಗಳು ಬಿಡುಗಡೆಯಾಗಿದ್ದರು.