ಸಾರಾಂಶ
ಬೆಂಗಳೂರು : ಪತಿ ಬೈದಿದ್ದಕ್ಕೆ ಬೇಸರಗೊಂಡು ಮನೆಯಲ್ಲಿ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗಂಗಮ್ಮನಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಅಬ್ಬಿಗೆರೆ ಬಳಿಯ ಲಕ್ಷ್ಮಯ್ಯ ಲೇಔಟ್ ನಿವಾಸಿ ಪೂಜಾ (26) ಆತ್ಮಹತ್ಯೆ ಮಾಡಿಕೊಂಡವರು. ಗುರುವಾರ ಸಂಜೆ ಮನೆಯಲ್ಲಿ ಯಾರು ಇಲ್ಲದ ವೇಳೆ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿ ಕರೆ ಸ್ವೀಕರಿಸದ ಹಿನ್ನೆಲೆ ಪತಿ ಸುನೀಲ್ ಸೂಚನೆ ಮೇರೆಗೆ ಮನೆ ಮಾಲೀಕರು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ಪೂಜಾ ಮತ್ತು ಸುನೀಲ್ ವಿಜಯನಗರ ಜಿಲ್ಲೆಯವರು. ಇಬ್ಬರು ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್. ಕಳೆದ 2022ರ ಏಪ್ರಿಲ್‌ನಲ್ಲಿ ಮದುವೆಯಾಗಿದ್ದರು. ಆರಂಭದಲ್ಲಿ ದಂಪತಿ ಎಚ್‌ಎಸ್‌ಆರ್ ಲೇಔಟ್ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಇವರ ಜತೆಗೆ ಸುನೀಲ್ ಸಹೋದರ ಅನಿಲ್ ಸಹ ನೆಲೆಸಿದ್ದ. ಇತ್ತೀಚೆಗೆ ದಂಪತಿ ನಡುವೆ ಜಗಳವಾಗಿತ್ತು. ಹೀಗಾಗಿ ಎರಡೂವರೆ ತಿಂಗಳ ಹಿಂದೆ ದಂಪತಿ ಲಕ್ಷ್ಮಯ್ಯ ಲೇಔಟ್‌ನ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು.
ಮೈದುನಾನಿಗೆ ಬೈದಳೆಂದು ಪೂಜಾಗೆ ಬೈದ ಪತಿ:
ಗುರುವಾರ ಸಂಜೆ ಮನೆಯಲ್ಲಿ ಒಬ್ಬಳೇ ಇದ್ದ ಪೂಜಾ, ಮೈದುನ ಅನಿಲ್‌ಗೆ ಕರೆ ಮಾಡಿ ನಿಂದಿಸಿದ್ದರು ಎನ್ನಲಾಗಿದೆ. ಈ ವಿಚಾರವನ್ನು ಅನಿಲ್, ಸಹೋದರ ಸುನೀಲ್‌ಗೆ ತಿಳಿಸಿದ್ದ. ಬಳಿಕ ಸುನೀಲ್, ಪೂಜಾಗೆ ಕರೆ ಮಾಡಿ ಬೈದಿದ್ದ. ಇದರಿಂದ ಪೂಜಾ ಬೇಸರಗೊಂಡಿದ್ದರು. ಬಳಿಕ ಪೂಜಾ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲ ಸಮಯದ ಬಳಿಕ ಪತಿ ಸುನೀಲ್, ಪೂಜಾ ಮೊಬೈಲ್‌ಗೆ ಹಲವು ಬಾರಿ ಕರೆ ಮಾಡಿದ್ದಾನೆ. ಆದರೆ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅನುಮಾನಗೊಂಡು ಮನೆಯ ಮಾಲೀಕರಿಗೆ ಕರೆ ಮಾಡಿ ತಮ್ಮ ಮನೆ ಬಳಿ ಹೋಗಿ ನೋಡುವಂತೆ ಹೇಳಿದ್ದಾನೆ. ಅದರಂತೆ ಮನೆ ಮಾಲೀಕರು ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ವರದಕ್ಷಿಣೆ ಕಿರುಕುಳ ಆರೋಪ:
ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ, ಶುಕ್ರವಾರ ಮರಣೋತ್ತರ ಪರೀಕ್ಷೆ ಪರೀಕ್ಷೆ ಮಾಡಿಸಿ ವಾರಸುದಾರರಿಗೆ ಮೃತದೇಹ ಹಸ್ತಾಂತರಿಸಿದ್ದಾರೆ. ಪೂಜಾ ಪೋಷಕರು, ಅಳಿಯ ಸುನೀಲ್, ಸಹೋದರ ಅನಿಲ್ ಹಾಗೂ ಪೋಷಕರ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪದಡಿ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಗಂಗಮ್ಮನಗುಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ, ಅಳಿಯ ಸುನೀಲ್‌ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.