ಹೆಣ್ಣು ಭ್ರೂಣ ಹತ್ಯೆ ಪ್ರಕರಣ: ಮತ್ತೆ ಇಬ್ಬರ ಬಂಧನ

| Published : May 12 2024, 01:18 AM IST / Updated: May 12 2024, 06:48 AM IST

fetus

ಸಾರಾಂಶ

 ಕಳೆದ ಮೇ 5ರಂದು ಪಾಂಡವಪುರ ಸರ್ಕಾರಿ ಆರೋಗ್ಯ ಇಲಾಖೆ ವಸತಿ ಗೃಹದಲ್ಲಿ ನಡೆಯುತ್ತಿದ್ದ ಹೆಣ್ಣು ಭ್ರೂಣ ಹತ್ಯೆಗೆ ಸಂಬಂಧಿಸಿದಂತೆ ಇದುವರೆಗೆ ಆನಂದ್, ಅಶ್ವಿನಿ, ಗಿರಿಜಾಂಭ, ಸತ್ಯಮ್ಮ ರನ್ನು ಪೊಲೀಸರು ಬಂಧಿಸಿ ಈಗಾಗಲೇ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

 ಪಾಂಡವಪುರ :  ಪಟ್ಟಣದ ಆರೋಗ್ಯ ಇಲಾಖೆ ಸರ್ಕಾರಿ ವಸತಿ ಗೃಹದಲ್ಲಿ ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈವರೆಗೆ 8 ಮಂದಿಯನ್ನು ಬಂಧಿಸಲಾಗಿದೆ.

ಪ್ರಕರಣದ ಎ-1 ಆರೋಪಿಯಾಗಿರುವ ಅಭಿಷೇಕ್‌ ಗೌಡನ (ಕಾರು ಚಾಲಕ) ತಾಲೂಕಿನ ಹೊಸಕೋಟೆ ಗ್ರಾಮದ ಅಖಿಲಾಶ್‌ (23) ಹಾಗೂ ಮಹದೇಶ್ವರಪುರ ಗ್ರಾಮದ ಕಿರಣ್ (35) ನನ್ನು ಸರ್ಕಲ್ ಇನ್ಸ್ ಪೆಕ್ಟರ್ ಕುಮಾರ್ ಹಾಗೂ ಸಬ್ ಇನ್ಸ್ ಪೆಕ್ಟರ್ ಉಮೇಶ್ ನೇತೃತ್ವದಲ್ಲಿ ಪೊಲೀಸರ ತಂಡ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ.

ಅಲ್ಲದೇ, ತಮ್ಮ ಹೆಂಡತಿ ಭ್ರೂಣ ಹತ್ಯೆ ಮಾಡಿಸಿದ್ದ ಕಿರಣ್ ಹಾಗೂ ಅಖಿಲಾಸ್ ಅವರನ್ನು ಬಂಧಿಸಿ ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮಂಡ್ಯ ತಾಲೂಕಿನ ಹುಳ್ಳೇನಹಳ್ಳಿ ಆಲೆಮನೆಯಲ್ಲಿ ನಡೆದ ಭ್ರೂಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದ ಪಾಂಡವಪುರ ತಾಲೂಕು ಸುಂಕಾತೊಣ್ಣೂರು ನಿವಾಸಿ ನವೀನ್ ಹಾಗೂ ಕುಮಾರ್ ನನ್ನು ಶುಕ್ರವಾರ ಬಂಧಿಸಲಾಗಿತ್ತು.

ಕಳೆದ ಮೇ 5ರಂದು ಪಾಂಡವಪುರ ಸರ್ಕಾರಿ ಆರೋಗ್ಯ ಇಲಾಖೆ ವಸತಿ ಗೃಹದಲ್ಲಿ ನಡೆಯುತ್ತಿದ್ದ ಹೆಣ್ಣು ಭ್ರೂಣ ಹತ್ಯೆಗೆ ಸಂಬಂಧಿಸಿದಂತೆ ಇದುವರೆಗೆ ಆನಂದ್, ಅಶ್ವಿನಿ, ಗಿರಿಜಾಂಭ, ಸತ್ಯಮ್ಮ ರನ್ನು ಪೊಲೀಸರು ಬಂಧಿಸಿ ಈಗಾಗಲೇ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಹುಳ್ಳೇನಹಳ್ಳಿ ಆಲೆಮನೆಯಲ್ಲಿ ಭ್ರೂಣ ಪತ್ತೆ ಪ್ರಕರಣದಲ್ಲಿ ಭಾಗಿಯಾಗಿದ್ದ ಕಿಂಗ್‌ಪಿನ್ ಸುಂಕಾತೊಣ್ಣೂರಿನ ನವೀನ್‌ ಕುಮಾರ್ ಜೈಲು ಸೇರಿದ್ದು, ಜಾಮೀನಿನ ಮೇಲೆ ಹೊರ ಬಂದಿದ್ದ. ಜೈಲಿನಿಂದ ಹೊರ ಬಂದು ಅಮಾಯಕನಂತೆ ನಟಿಸುತ್ತಿದ್ದ.

ಒಂಟಿ ಮನೆಯಲ್ಲಿ ಸ್ಕ್ಯಾನಿಂಗ್ ನಡೆಸುತ್ತಿದ್ದ ಈ ತಂಡದ ಮಾಸ್ಟರ್ ಮೈಂಡ್ ಆಗಿ ನವೀನ್‌ಕುಮಾರ್ ಕೆಲಸ ಮಾಡುತ್ತಿದ್ದ. ಈ ಪ್ರಕರಣದಲ್ಲಿ ವೈದ್ಯರು, ಅಧಿಕಾರಿಗಳು ಭಾಗಿಯಾಗಿರುವ ಶಂಕೆ ಇದ್ದು, ಪ್ರಕರಣ ಬೇಧಿಸಲು ಪೊಲೀಸರು ಮುಂದಾಗಿದ್ದಾರೆ.

ಮತ್ತೊಂದೆಡೆ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದ ಕುಮಾರ್ ಸಹ ಪ್ರಕರಣದಲ್ಲಿ ತೊಡಗಿದ್ದ ಮೇರೆಗೆ ಪೊಲೀಸರು ಬಂಧಿಸಿದ್ದಾರೆ. ಹೆಣ್ಣು ಭ್ರೂಣ ತೆಗೆಸಿಕೊಂಡಿದ್ದ ಮಹಿಳೆ ಪತಿ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪರಾರಿಯಾಗಿದ್ದಾನೆ. ತಲೆ ಮರೆಸಿಕೊಂಡಿದರುವ ಆರೋಪಿ ಶಿವಲಿಂಗ ನಾಯಕ್‌ನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಆರೋಪಿ ಶಿವಲಿಂಗ ನಾಯಕ್ ಬಂಧನವಾದರೆ ಮತ್ತಷ್ಟು ಆರೋಪಿಗಳ ಹೆಸರು ಬಯಲಾಗುವ ಸಾಧ್ಯತೆ ಇದ್ದು ಪಾಂಡವಪುರ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.