ಮಹಿಳಾ ಬಸ್‌ ಕಂಡಕ್ಟರ್‌ ಮುಖಪರಚಿ ಗಾಯಗೊಳಿಸಿದ ಯುವತಿ

| Published : Jan 15 2024, 01:46 AM IST / Updated: Jan 15 2024, 01:36 PM IST

ಮಹಿಳಾ ಬಸ್‌ ಕಂಡಕ್ಟರ್‌ ಮುಖಪರಚಿ ಗಾಯಗೊಳಿಸಿದ ಯುವತಿ
Share this Article
  • FB
  • TW
  • Linkdin
  • Email

ಸಾರಾಂಶ

ಉಚಿತ ಟಿಕೆಟ್ ನೀಡಲು ಆಧಾರ್‌ ತೋರಿಸುವಂತೆ ಒತ್ತಾಯಿಸಿದ ಮಹಿಳಾ ಕಂಡಕ್ಟರ್‌ ಮೇಲೆ ಮಹಿಳೆಯೊಬ್ಬಳು ಮುಖಕ್ಕೆ ಪರಚಿದ ಘಟನೆ ಬೆಂಗಳೂರಿನ ದಾಸರಹಳ್ಳಿ ಬಳಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಉಚಿತ ಟಿಕೆಟ್‌ ಪಡೆಯಲು ಗುರುತಿನ ಚೀಟಿ ತೋರಿಸುವ ವಿಚಾರವಾಗಿ ನಡೆದ ಜಗಳದ ವೇಳೆ ಖಾಸಗಿ ಕಂಪನಿ ಮಹಿಳಾ ಉದ್ಯೋಗಿಯೊಬ್ಬರು ಬಿಎಂಟಿಸಿ ಮಹಿಳಾ ನಿರ್ವಾಹಕಿಯ ಮೇಲೆ ಹಲ್ಲೆ ಮಾಡಿ ಉಗುರುಗಳಿಂದ ಮುಖ ಪರಚಿ ಗಾಯಗೊಳಿಸಿರುವ ಘಟನೆ ಬಾಗಲಗುಂಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಹಲ್ಲೆ ಸಂಬಂಧ ಬಿಎಂಟಿಸಿ ಮಹಿಳಾ ನಿರ್ವಾಹಕಿ ಸುಕನ್ಯಾ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಚಿಕ್ಕಬಾಣವಾರ ನಿವಾಸಿ ಮೋನಿಷಾ (29) ಎಂಬಾಕೆಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ವಿವರ: ಮತ್ತಿಕೆರೆಯಲ್ಲಿ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಮೋನಿಷಾ, ಭಾನುವಾರ ಬೆಳಗ್ಗೆ 10.30ರ ಸುಮಾರಿಗೆ 8ನೇ ಮೈಲಿಯಿಂದ ದಾಸರಹಳ್ಳಿಗೆ ಹೋಗಲು ಮೆಜೆಸ್ಟಿಕ್-ನೆಲಮಂಗಲ ಮಾರ್ಗದ ಬಿಎಂಟಿಸಿ ಬಸ್ ಏರಿದ್ದಾರೆ. ಈ ವೇಳೆ ನಿರ್ವಾಹಕಿ ಸುಕನ್ಯಾ ಅವರು ಉಚಿತ ಟಿಕೆಟ್‌ ನೀಡಲು ಆಧಾರ್ ಕಾರ್ಡ್ ತೋರಿಸುವಂತೆ ಕೇಳಿದ್ದಾರೆ. 

ಆಗ ಮೋನಿಷಾ ಆಧಾರ್ ಕಾರ್ಡ್ ತೋರಿಸಲು ವಿಳಂಬ ಮಾಡಿದ್ದಾರೆ. ಇದರಿಂದ ಅಸಮಾಧಾನಗೊಂಡು ಸುಕನ್ಯಾ ಅವರು ಬೇಗ ಗುರುತಿನ ಚೀಟಿ ತೋರಿಸಿ ಎಂದು ಏರಿದ ದನಿಯಲ್ಲಿ ಕೇಳಿದ್ದಾರೆ. ಅಷ್ಟಕ್ಕೆ ಮೋನಿಷಾ ಮತ್ತು ಸುಕನ್ಯಾ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. 

ಈ ವೇಳೆ ಮೋನಿಷಾ ಏಕಾಏಕಿ ಸುಕನ್ಯಾ ಮೇಲೆ ಹಲ್ಲೆ ಮಾಡಿ ಕೈ ಉಗುರುಗಳಿಂದ ಸುಕನ್ಯಾ ಅವರ ಮುಖವನ್ನು ಪರಚಿ ಗಾಯಗೊಳಿಸಿದ್ದಾರೆ ಎನ್ನಲಾಗಿದೆ.

ಈ ನಡುವೆ ಮೋನಿಷಾಳ ವರ್ತನೆ ಕಂಡು ಕೆಲ ಮಹಿಳಾ ಪ್ರಯಾಣಿಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಜಗಳ ಜೋರಾದ ಹಿನ್ನೆಲೆಯಲ್ಲಿ ಬಿಎಂಟಿಸಿ ಬಸ್‌ನ ಚಾಲಕ ಬಸ್ಸನ್ನು ರಸ್ತೆಯಲ್ಲೇ ನಿಲ್ಲಿಸಿ, ಬಿಎಂಟಿಸಿಯ ಹಿರಿಯ ಅಧಿಕಾರಿಗಳಿಗೆ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. 

ಬಳಿಕ ಅಧಿಕಾರಿಗಳ ಸೂಚನೆ ಮೇರೆಗೆ ನಿರ್ವಾಹಕಿ ಸುಕನ್ಯಾ ಅವರು ಬಾಗಲಗುಂಟೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಮೋನಿಷಾಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.