ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಕೆ.ಡಿ.ಮಾದೇಗೌಡ ಅವರು ಎಸ್ಸೆಸ್ಸೆಲ್ಸಿ, ಪಿಯುಸಿ ಅಂಕಪಟ್ಟಿಯನ್ನು ದೃಢೀಕರಿಸಿ ಸಲ್ಲಿಸದಿರುವ ಹಿನ್ನೆಲೆಯಲ್ಲಿ ಮಿಮ್ಸ್ ನಿರ್ದೇಶಕರು ಇದೀಗ ಅಂತಿಮ ನೋಟಿಸ್ ಜಾರಿಗೊಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಕೆ.ಡಿ.ಮಾದೇಗೌಡ ಅವರು ಎಸ್ಸೆಸ್ಸೆಲ್ಸಿ, ಪಿಯುಸಿ ಅಂಕಪಟ್ಟಿಯನ್ನು ದೃಢೀಕರಿಸಿ ಸಲ್ಲಿಸದಿರುವ ಹಿನ್ನೆಲೆಯಲ್ಲಿ ಮಿಮ್ಸ್ ನಿರ್ದೇಶಕರು ಇದೀಗ ಅಂತಿಮ ನೋಟಿಸ್ ಜಾರಿಗೊಳಿಸಿದ್ದಾರೆ.

ಗುತ್ತಿಗೆ ನೇಮಕಾತಿ ವೇಳೆ ನಕಲಿ ದಾಖಲೆಗಳನ್ನು ಸಲ್ಲಿಸಿರುವುದಾಗಿ ದೂರುದಾರರು ಸಂಸ್ಥೆಗೆ ಪದೇ ಪದೇ ಮಾಹಿತಿ ಹಕ್ಕು ಅಧಿನಿಯಮದಡಿ ಅರ್ಜಿ ಸಲ್ಲಿಸುತ್ತಿದ್ದು ಸರ್ಕಾರದ ಪರಿಶೀಲನೆಗೆ ಮಾಹಿತಿ ನೀಡಲು ಕ್ರಮ ವಹಿಸಬೇಕಿದೆ. ಕೆ.ಡಿ. ಮಾದೇಗೌಡರ ವೈಯಕ್ತಿಕ ಕಡತದಲ್ಲಿ ಕುಮುಲೇಟೀವ್ ರೆಕಾರ್ಡ್ (ಸಂಚಿತ ದಾಖಲೆ) ಹೊರತುಪಡಿಸಿ ಯಾವುದೇ ಅಂಕಪಟ್ಟಿಗಳ ನಕಲು ಲಭ್ಯವಿಲ್ಲದಿರುವುದು ಕಂಡುಬಂದಿತ್ತು.

ಎಸ್ಸೆಸ್ಸೆಲ್ಸಿ, ಪಿಯುಸಿ ಅಂಕಪಟ್ಟಿ ಹಾಗೂ ಪದವಿ ಅಂಕಪಟ್ಟಿ, ಪದವಿ ಪ್ರಮಾಣಪತ್ರ ಅಲ್ಲದೆ ನಿಮ್ಮ ಜನ್ಮದಿನಾಂಕ ನಮೂದಿಸಿರುವ ದಾಖಲೆಗೆ ಸಂಬಂಧಸಿದಂತೆ ಎಸ್ಸೆಸ್ಸೆಲ್ಸಿ ದೃಢೀಕೃತ ಅಂಕಪಟ್ಟಿ ಲಭ್ಯವಿಲ್ಲದಿರುವುದರಿಂದ ಈ ದಾಖಲೆಗಳನ್ನು ಟಪಾಲಿನಲ್ಲಿ ತುರ್ತಾಗಿ ಸಲ್ಲಿಸುವಂತೆ ಮಿಮ್ಸ್ ನಿರ್ದೇಶಕರು ಸೂಚಿಸಿದ್ದರು.

ಆದರೆ, ಕೆ.ಡಿ.ಮಾದೇಗೌಡರು ಸಲ್ಲಿಸಿರುವ ಸಮಜಾಯಿಷಿಯನ್ನೊಳಗೊಂಡ ದಾಖಲೆಗಳಲ್ಲಿ ಜನ್ಮದಿನಾಂಕಕ್ಕೆ ಸಂಬಂಧಿಸಿದ ಎಸ್ಸೆಸ್ಸೆಲ್ಸಿ ಅಂಕಪಟ್ಟಿಯನ್ನು ನೀಡಿಲ್ಲ. ಪ್ರತಿಯೊಂದು ಸರ್ಕಾರಿ, ಅರೆ ಸರ್ಕಾರಿ, ನಿಗಮ-ಮಂಡಳಿಗಳಲ್ಲಿ ಕರ್ತವ್ಯ ನಿರ್ವಹಿಸುವ ಕಾಯಂ, ಗುತ್ತಿಗೆ, ಹೊರಗುತ್ತಿಗೆ ನೌಕರರು ಕರ್ತವ್ಯನಿರ್ವಹಿಸಲು ಅಗತ್ಯ ವಿದ್ಯಾರ್ಹತೆಯೊಂದಿಗೆ ಜನ್ಮದಿನಾಂಕ ಹಾಗೂ ವಯಸ್ಸಿಗೆ ಸಂಬಂಧಿಸಿದಂತೆ ಪ್ರಮುಖ ಮಾನದಂಡವಾಗಿ ಎಸ್ಸೆಸ್ಸೆಲ್ಸಿ ಅಂಕಪಟ್ಟಿಯನ್ನು ಪಡೆಯುವುದು ನಿಯಮವಾಗಿದೆ. ಹಾಗಾಗಿ ಸಮಜಾಯಿಷಿ ಪತ್ರದಲ್ಲಿ ಜನ್ಮದಿನಾಂಕ ದೃಢೀಕರಣಕ್ಕ ಸಲ್ಲಿಸಿರುವ ಸಂಚಿತ ದಾಖಲೆಯನ್ನು ದಾಖಲೆಯಾಗಿ ಪರಿಗಣಿಸಲು ಅವಕಾಶವಿರುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಹಲವಾರು ಬಾರಿ ದೃಢೀಕೃತ ನಕಲು ಪ್ರತಿ ಸಲ್ಲಿಸುವಂತೆ ಸೂಚಿಸಿದ್ದರೂ ಎಸ್ಸೆಸ್ಸೆಲ್ಸಿ ಅಂಕಪಟ್ಟಿ ನೀಡದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಂತಿಮ ನೋಟಿಸ್ ತಲುಪಿದ ಕೂಡಲೇ ಎಸ್ಸೆಸ್ಸೆಲ್ಸಿ ನಕಲು ಅಂಕಪಟ್ಟಿ ಸಲ್ಲಿಸಲು ಸೂಚಿಸಿದೆ. ತಪ್ಪಿದಲ್ಲಿ ಸೇವೆಯಿಂದ ಬಿಡುಗಡೆಗೊಳಿಸುವ ಹಾಗೂ ಎಸ್ಸೆಸ್ಸೆಲ್ಸಿ ಅಂಕಪಟಿ ಸಲ್ಲಿಸದಿರುವ ಬಗ್ಗೆ ಅಗತ್ಯ ವಿಚಾರಣೆ ಕೋರಿ ಕಾನೂನು ರೀತ್ಯಾ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗುವುದು. ಈ ಬಗ್ಗೆ ಸರ್ಕಾರದ ಮೇಲಧಿಕಾರಿಗಳು ಹಾಗೂ ಹೈಕೋರ್ಟ್ ಗಮನಕ್ಕೂ ತಲಾಗುವುದು ಎಂದು ನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ.ಸರ್ಕಾರದಿಂದ ಹುದ್ದೆಯೇ ಮಂಜೂರಾಗಿಲ್ಲ

ವೈದ್ಯಕೀಯ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯವರು ನಿರ್ದೇಶಕರಿಗೆ ಬರೆದಿರುವ ಪತ್ರಾನುಸಾರ ಮಿಮ್ಸ್‌ನಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿ ಹುದ್ದೆಯು ಸರ್ಕಾರದಿಂದ ಮಂಜೂರಾಗಿಲ್ಲ. ಆದರೂ ಕೆ.ಡಿ.ಮಾದೇಗೌಡರು ರಾಜಕೀಯ ಪ್ರಭಾವ ಬಳಸಿ ಸಾರ್ವಜನಿಕ ಸಂಪಕಾಧಿಕಾರಿ ಹುದ್ದೆಯಲ್ಲಿ ಮುಂದುವರೆದಿರುವುದು ಖಚಿತಪಟ್ಟಿದೆ. ಜೊತೆಗೆ ನಕಲಿ ದಾಖಲೆಗಳನ್ನು ಸಲ್ಲಿಸಿರುವ ಆರೋಪವೂ ಕೇಳಿಬಂದಿದೆ. ಆ ಹಿನ್ನೆಲೆಯಲ್ಲಿ ವಯಸ್ಸಿನ ಮಾನದಂಡವಾಗಿರುವ ಎಸ್ಸೆಸ್ಸೆಲ್ಸಿ ಅಂಕಪಟ್ಟಿ ದೃಢೀಕೃತ ನಕಲನ್ನು ಮಿಮ್ಸ್ ನಿರ್ದೇಶಕರು ಕೋರಿದ್ದಾರೆ.