ಸಾರಾಂಶ
ಮಂಡ್ಯ : ತಾಯಿ ಪಡೆದಿದ್ದ ಸಾಲಕ್ಕೆ ಏಳು ವರ್ಷದ ಹೆಣ್ಣು ಮಗಳನ್ನು ಕರೆತಂದು ತಾಯಿಯನ್ನು ತೋರಿಸುವಂತೆ ಪೀಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಳವಳ್ಳಿ ತಾಲೂಕಿನ ಬೆಳಕವಾಡಿ ಪೊಲೀಸರು ಮೈಕ್ರೋ ಫೈನಾನ್ಸ್ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಮೈಸೂರು ಜಿಲ್ಲೆ ಟಿ.ನರಸೀಪುರ ಶಾಖೆಯ ಬಜಾಜ್ ಮೈಕ್ರೋ ಫೈನಾನ್ಸ್‌ನ ನೌಕರ ಅಜಿತ್ ಮತ್ತು ಮ್ಯಾನೇಜರ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ತಲಕಾಡು ಸಮೀಪದ ಜಾಲಹಳ್ಳಿ ಗ್ರಾಮದ ನವೀನ್ ಮತ್ತು ಪ್ರಮೀಳಾ ದಂಪತಿ ಟಿ.ನರಸೀಪುರ ಶಾಖೆಯ ಬಜಾಜ್ ಮೈಕ್ರೋ ಫೈನಾನ್ಸ್‌ನಿಂದ ೩೦ ಸಾವಿರ ರು. ಸಾಲ ಪಡೆದಿದ್ದರು. ನವೀನ್ ತಮ್ಮ ತಾಯಿ ಮಂಗಳಮ್ಮ ಹೆಸರಿನಲ್ಲಿ ಪಡೆದಿದ್ದ ಸಾಲಕ್ಕೆ 13 ತಿಂಗಳು ಕಂತು ಕಟ್ಟಿದ್ದು, ಜೂನ್ ತಿಂಗಳ ಕಂತು ಕಟ್ಟುವುದು ನಾಲ್ಕು ದಿನ ವಿಳಂಬವಾಗಿತ್ತು ಎನ್ನಲಾಗಿದೆ.
ನವೀನ್ ಆಟೋ ಚಾಲಕನಾಗಿ ಕಾರ್ಯನಿರ್ವಹಿಸುತ್ತಾ ಮೈಸೂರಿನಲ್ಲಿ ನೆಲೆಸಿದ್ದರೆ, ನವೀನ್ ಪತ್ನಿ ಪ್ರಮೀಳಾ ಮಕ್ಕಳ ಜೊತೆ ಪೂರಿಗಾಲಿ ಸಮೀಪದ ಹಕ್ಕಮಲ್ಲನಹುಂಡಿ ಗ್ರಾಮದಲ್ಲಿರುವ ಅಕ್ಕ ಶೋಭಾ ಅವರ ಮನೆಯಲ್ಲಿ ವಾಸವಿದ್ದು, ಗಂಧದ ಕಡ್ಡಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಕಳೆದ ಸೋಮವಾರ (ಜೂ.೧೬) ಬಜಾಜ್ ಮೈಕ್ರೋ ಫೈನಾನ್ಸ್ ಮ್ಯಾನೇಜರ್ ಮತ್ತು ನೌಕರ ಅಜಿತ್ ಹಕ್ಕಮಲ್ಲನಹುಂಡಿ ಗ್ರಾಮದ ಶೋಭಾ ಅವರ ಮನೆಯ ಬಳಿ ಬಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ನವೀನ್ ತಾಯಿ ಮಂಗಳಮ್ಮ ಅವರಿಗೆ ಅವಾಚ್ಯಶಬ್ಧಗಳಿಂದ ಬೈದು ನಿಂದಿಸಿದರು.
ಬಳಿಕ ಮಗಳಾದ ದೀಕ್ಷಾಳನ್ನು ನಿಮ್ಮ ತಾಯಿಯನ್ನು ತೋರಿಸುವ ಬಾ ಎಂದು ಕಿರುಕುಳ ನೀಡಿ ಪಕ್ಕದ ಮನೆಯ ಸಿದ್ದರಾಜು ಅವರನ್ನು ಪೋಷಕರ ಅನುಮತಿ ಇಲ್ಲದೆ ಕರೆದುಕೊಂಡು ಹೋಗಿ ಸಾಲದ ಹಣ ಕಟ್ಟುವಂತೆ ಒತ್ತಾಯಿಸಿದ್ದಾರೆ. ವಿಷಯ ತಿಳಿದು ಬಾಲಕಿಯ ತಂದೆ ನವೀನ್ ಮೈಸೂರಿನಲ್ಲಿರುವ ಚೈಲ್ಡ್ ಸೋಷಿಯಲ್ ಕಮಿಟಿಗೆ ದೂರು ನೀಡಿದ್ದರು. ಇದನ್ನು ಆಧರಿಸಿ ಬೆಳಕವಾಡಿ ಪೊಲೀಸರು ಬಜಾಜ್ ಮೈಕ್ರೋ ಫೈನಾನ್ಸ್ ಕಂಪನಿಯ ಮ್ಯಾನೇಜರ್ ಮತ್ತು ನೌಕರನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.