ರಾಜಾಜಿನಗರದ ‘ಓಕಿನೋವಾ ಗ್ಯಾಲಾಕ್ಸಿ’ ಶೋ ರೂಂಗೆ ಬೆಂಕಿ: 15 ಎಲೆಕ್ಟ್ರಿಕ್‌ ಬೈಕ್‌ ಅಗ್ನಿಗಾಹುತಿ

| N/A | Published : Jan 28 2025, 01:45 AM IST / Updated: Jan 28 2025, 04:15 AM IST

ರಾಜಾಜಿನಗರದ ‘ಓಕಿನೋವಾ ಗ್ಯಾಲಾಕ್ಸಿ’ ಶೋ ರೂಂಗೆ ಬೆಂಕಿ: 15 ಎಲೆಕ್ಟ್ರಿಕ್‌ ಬೈಕ್‌ ಅಗ್ನಿಗಾಹುತಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜಧಾನಿಯಲ್ಲಿ ಮತ್ತೊಂದು ಎಲೆಕ್ಟ್ರಿಕ್‌ ಬೈಕ್‌ ಶೋ ರೂಮ್‌ನಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ಸುಮಾರು 15 ಎಲೆಕ್ಟ್ರಿಕ್‌ ಬೈಕ್‌ಗಳು ಸುಟ್ಟು ಕರಕಲಾಗಿದ್ದು, 15 ಎಲೆಕ್ಟ್ರಿಕ್‌ ಬೈಕ್‌ಗಳಿಗೆ ಭಾಗಶಃ ಹಾನಿಯಾಗಿದೆ.

 ಬೆಂಗಳೂರು : ರಾಜಧಾನಿಯಲ್ಲಿ ಮತ್ತೊಂದು ಎಲೆಕ್ಟ್ರಿಕ್‌ ಬೈಕ್‌ ಶೋ ರೂಮ್‌ನಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ಸುಮಾರು 15 ಎಲೆಕ್ಟ್ರಿಕ್‌ ಬೈಕ್‌ಗಳು ಸುಟ್ಟು ಕರಕಲಾಗಿದ್ದು, 15 ಎಲೆಕ್ಟ್ರಿಕ್‌ ಬೈಕ್‌ಗಳಿಗೆ ಭಾಗಶಃ ಹಾನಿಯಾಗಿದೆ.

ರಾಜಾಜಿನಗರದ ಡಾ.ರಾಜ್‌ಕುಮಾರ್‌ ರಸ್ತೆಯ ‘ಓಕಿನೋವಾ ಗ್ಯಾಲಾಕ್ಸಿ’ ಎಲೆಕ್ಟ್ರಿಕ್‌ ಬೈಕ್‌ ಶೋ ರೂಮ್‌ನಲ್ಲಿ ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು ಸಂಪೂರ್ಣವಾಗಿ ಬೆಂಕಿ ನಂದಿಸಿದ್ದಾರೆ. ಅದೃಷ್ಟವಶಾತ್‌ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಘಟನೆ?: ಓಕಿನೋವಾ ಗ್ಯಾಲಾಕ್ಸಿ ಹೆಸರಿನ ಎಲೆಕ್ಟ್ರಿಕ್‌ ಬೈಕ್‌ ಶೋ ರೂಮ್‌ ಕಳೆದ ಒಂದು ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದು, ಸೋಮವಾರ ಮಧ್ಯಾಹ್ನ ಸುಮಾರು 2 ಗಂಟೆಗೆ ಶೋ ರೂಮ್‌ ಮುಂಭಾಗ ನಿಲ್ಲಿಸಿದ್ದ ಎಲೆಕ್ಟ್ರಿಕ್‌ ಬೈಕ್‌ ಚಾರ್ಜಿಂಗ್‌ಗೆ ಹಾಕಲಾಗಿತ್ತು. ಈ ವೇಳೆ ಬ್ಯಾಟರಿ ಸ್ಫೋಟಗೊಂಡಿದ್ದು, ಶೋ ರೂಮ್‌ನಲ್ಲಿದ್ದ ನಾಲ್ವರು ಸಿಬ್ಬಂದಿ ತಕ್ಷಣ ಹೊರಗೆ ಓಡಿ ಬಂದಿದ್ದಾರೆ. ಕೆಲವೇ ಕ್ಷಣದಲ್ಲಿ ಬೆಂಕಿ ಅಕ್ಕಪಕ್ಕದ ಬೈಕ್‌ಗಳಿಗೆ ವ್ಯಾಪಿಸಿದ ಪರಿಣಾಮ ಕಟ್ಟಡದ ತುಂಬಾ ದಡ್ಡ ಹೊಗೆ ಹಾಗೂ ಬೆಂಕಿ ಹೊತ್ತಿಕೊಂಡಿದೆ. ಎಲೆಕ್ಟ್ರಿಕ್‌ ಬೈಕ್‌ಗಳ ಬ್ಯಾಟರಿಗಳು ಸ್ಫೋಟಗೊಂಡ ಪರಿಣಾಮ ಬೆಂಕಿ ಪ್ರಮಾಣ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ 2 ವಾಹನಗಳಲ್ಲಿ 3 ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬ್ಯಾಟರಿ ಸ್ಫೋಟದಿಂದ ಬೆಂಕಿ ಶಂಕೆ: ಅವಘಡದಲ್ಲಿ ಸುಮಾರು 15 ಎಲೆಕ್ಟ್ರಿಕ್‌ ಬೈಕ್‌ಗಳು ಬೆಂಕಿಗಾಹುತಿಯಾಗಿದ್ದು, 15 ಎಲೆಕ್ಟ್ರಿಕ್‌ ಬೈಕ್‌ಗಳು ಭಾಗಶಃ ಹಾನಿಯಾಗಿವೆ. ಅಂತೆಯೆ ಕಟ್ಟಡಕ್ಕೂ ಹಾನಿಯಾಗಿದೆ. ಅಕ್ಕಪಕ್ಕದ ಅಂಗಡಿ-ಮುಂಗಟ್ಟುಗಳಿಗೂ ಬೆಂಕಿಯ ಉರಿ ತಾಕಿದ್ದು, ಕೆಲ ವಸ್ತುಗಳಿಗೆ ಹಾನಿಯಾಗಿದೆ. ಶೋ ರೂಮ್‌ನಲ್ಲಿ ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ತಿಳಿದು ಬಂದಿಲ್ಲ. ವಿದ್ಯುತ್‌ ಶಾರ್ಟ್‌ ಸರ್ಕಿಟ್‌ ಅಥವಾ ಬ್ಯಾಟರಿ ಸ್ಫೋಟದಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ಇದೆ. ಈ ಸಂಬಂಧ ರಾಜಾಜಿನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾಹನ ಸಂಚಾರ ದಟ್ಟಣೆ: ಶೋ ರೂಮ್‌ಗೆ ಬೆಂಕಿ ಹೊತ್ತಿಕೊಂಡ ವಿಚಾರ ತಿಳಿದು ಭಾರೀ ಪ್ರಮಾಣದಲ್ಲಿ ಸಾರ್ವಜನಿಕರು ಶೋ ರೂಮ್‌ ಬಳಿ ಜಮಾಯಿಸಿದ್ದರು. ಈ ವೇಳೆ ಪೊಲೀಸರು ಕಾರ್ಯಾಚರಣೆಗೆ ಅಡಚಣೆಯಾಗದಂತೆ ಸಾರ್ವಜನಿಕರನ್ನು ದೂರು ಕಳುಹಿಸಿದರು. ಅವಘಡದಿಂದ ಡಾ.ರಾಜ್‌ಕುಮಾರ್‌ ರಸ್ತೆ, ಯಶವಂತಪುರ, ಸುಬ್ರಮಣ್ಯನಗರ, ಪ್ರಕಾಶ್‌ನಗರ ಸೇರಿದಂತೆ ಸುತ್ತಮುತ್ತಲು ಉಂಟಾಗಿದ್ದ ಸಂಚಾರ ದಟ್ಟಣೆಯನ್ನು ಸಂಚಾರ ಪೊಲೀಸರು ನಿಭಾಯಿಸಿದರು.

ಕಳಪೆ ಗುಣಮಟ್ಟದ ಬ್ಯಾಟರಿ ಬಳಕೆ?: ಈ ಓಕಿನೋವಾ ಶೋ ರೂಮ್‌ನಲ್ಲಿ ಲೈಸೆನ್ಸ್‌ ನಿಯಮ ಉಲ್ಲಂಘಿಸಿ ಎಲೆಕ್ಟ್ರಿಕ್‌ ಬೈಕ್‌ಗಳ ಮಾರಾಟ ಮಾಡುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಆರ್‌ಟಿಓ ಅಧಿಕಾರಿಗಳು ಶುಕ್ರವಾರವಷ್ಟೇ ದಾಳಿ ನಡೆಸಿ ಪರಿಶೀಲಿಸಿದ್ದರು. ಕಡಿಮೆ ವೇಗ ಮತ್ತು 250 ವ್ಯಾಟ್‌ ಬ್ಯಾಟರಿ ಬಳಕೆಗೆ ಮಾತ್ರ ಶೋ ರೂಮ್‌ಗೆ ಅನುಮತಿ ನೀಡಲಾಗಿತ್ತು. ಆದರೆ, ಶೋ ರೂಮ್‌ನವರು ಹೆಚ್ಚಿನ ವೇಗ ಹಾಗೂ ಹೆಚ್ಚು ಸಾಮರ್ಥ್ಯದ ಬ್ಯಾಟರಿ ಬಳಕೆ ಮಾಡುತ್ತಿದ್ದರು. ಕಳಪೆ ಗುಣಮಟ್ಟದ ಬ್ಯಾಟರಿಗಳನ್ನು ಬಳಸುತ್ತಿದ್ದರು. ಹೀಗಾಗಿ ಚಾರ್ಜಿಂಗ್‌ ವೇಳೆ ಅತಿ ಬಿಸಿಯಾಗಿ ಬ್ಯಾಟರಿ ಸ್ಫೋಟಗೊಂಡಿರುವ ಸಾಧ್ಯತೆಯಿದೆ ಎನ್ನಲಾಗಿದೆ.

ನವೆಂಬರ್‌ ದುರಂತದಿಂದಲೂ ಎಚ್ಚೆತ್ತುಕೊಳ್ಳದ ಶೋ ರೂಮ್‌: ಕಳೆದ 2024ರ ನವೆಂಬರ್‌ನಲ್ಲಿ ಇದೇ ಡಾ.ರಾಜ್‌ಕುಮಾರ್‌ ರಸ್ತೆಯ ಮೈ ಇವಿ ಸ್ಟೋರ್‌ ಎಂಬ ಎಲೆಕ್ಟ್ರಿಕ್‌ ಬೈಕ್‌ ಶೋ ರೂಮ್‌ನಲ್ಲಿ ಬೆಂಕಿ ಅವಘಡ ಸಂಭವಿಸಿ, 20 ವರ್ಷದ ಮಹಿಳಾ ಸಿಬ್ಬಂದಿ ಸಜೀವನ ದಹನವಾಗಿದ್ದರು. ಸುಮಾರು 45 ಎಲೆಕ್ಟ್ರಿಕ್‌ ಬೈಕ್‌ಗಳು ಸುಟ್ಟು ಕರಕಲಾಗಿದ್ದವು. ಇದರ ಬೆನ್ನಲ್ಲೇ ರಾಜಾಜಿನಗರ ಠಾಣೆ ಪೊಲೀಸರು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ತಮ್ಮ ವ್ಯಾಪ್ತಿಯ ಎಲೆಕ್ಟ್ರಿಕ್‌ ಬೈಕ್‌ ಶೋ ರೂಮ್‌ಗಳಿಗೆ ನೋಟಿಸ್‌ ನೀಡಿದ್ದರು. ಅದರಂತೆ ಓಕಿನೋವಾ ಶೋ ರೂಮ್‌ಗೆ ನೋಟಿಸ್‌ ನೀಡಿದ್ದರು. ಆದರೂ ಶೋ ರೂಮ್‌ ಮಾಲೀಕರು ಎಚ್ಚೆತ್ತುಕೊಂಡಿರಲಿಲ್ಲ ಎನ್ನಲಾಗಿದೆ.