ಟಿ.ಆರ್‌.ಮಿಲ್‌ ಗೋದಾಮಿನಲ್ಲಿ ಬೆಂಕಿ: ಟೈಯರ್‌ ಭಸ್ಮ

| Published : Apr 08 2024, 01:00 AM IST / Updated: Apr 08 2024, 05:40 AM IST

ಟಿ.ಆರ್‌.ಮಿಲ್‌ ಗೋದಾಮಿನಲ್ಲಿ ಬೆಂಕಿ: ಟೈಯರ್‌ ಭಸ್ಮ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಚಾಮರಾಜಪೇಟೆಯ ಗೋದಾಮಿನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಭಾರೀ ಪ್ರಮಾಣದ ಟೈಯರ್‌ಗಳು ಬೆಂಕಿಗಾಹುತಿಯಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

 ಬೆಂಗಳೂರು :  ನಗರದ ಚಾಮರಾಜಪೇಟೆಯ ಗೋದಾಮಿನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಭಾರೀ ಪ್ರಮಾಣದ ಟೈಯರ್‌ಗಳು ಬೆಂಕಿಗಾಹುತಿಯಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಚಾಮರಾಜಪೇಟೆಯ ಗವಿಪುರದ ಟಿ.ಆರ್.ಮಿಲ್ ಆವರಣದ ಟೈಯರ್ ಗೋದಾಮಿನಲ್ಲಿ ಭಾನುವಾರ ಮುಂಜಾನೆ 4ರ ಸುಮಾರಿಗೆ ದಟ್ಟ ಹೊಗೆ ಕಾಣಿಸಿಕೊಂಡು ಕೆಲವೇ ಕ್ಷಣಗಳಲ್ಲಿ ಬೆಂಕಿ ಹೊತ್ತಿಕೊಂಡಿದೆ. ಗೋದಾಮಿನಲ್ಲಿ ಭಾರೀ ಪ್ರಮಾಣದ ಟೈಯರ್‌ಗಳು, ಆಯಿಲ್‌ ಬಾಟಲಿಗಳು ಸಂಗ್ರಹವಿದ್ದ ಪರಿಣಾಮ ಭಾರೀ ಪ್ರಮಾಣದ ಬೆಂಕಿ ಹೊತ್ತಿಕೊಂಡು ಪಕ್ಕದ ಪ್ಲೈವುಡ್‌ ಮತ್ತು ಪೈಪ್‌ ಗೋದಾಮಿಗೂ ಬೆಂಕಿ ವ್ಯಾಪಿಸಿದೆ. ಇದರಿಂದ ಈ ಎರಡೂ ಗೋದಾಮಿನಲ್ಲಿದ್ದ ವಸ್ತುಗಳು ಸುಟ್ಟು ಕರಕಲಾಗಿವೆ.

ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ:

ಒಂದು ಹಂತದಲ್ಲಿ ಟೈಯರ್‌ ಗೋದಾಮಿನಲ್ಲಿ ಬೆಂಕಿ ಹೊತ್ತಿಕೊಂಡು ಸ್ಫೋಟದ ಶಬ್ಧವಾಗಿದೆ. ಇದರಿಂದ ಅಕ್ಕಪಕ್ಕದ ನಿವಾಸಿಗಳು ಎದ್ದು ಹೊರಬಂದು ನೋಡಿದಾಗ ಗೋದಾಮಿನಲ್ಲಿ ಹೊತ್ತಿ ಉರಿಯುತ್ತಿರುವುದು ಕಂಡು ಬಂದಿದೆ. ಕೂಡಲೇ ಪೊಲೀಸ್‌ ನಿಯಂತ್ರಣ ಕೊಠಡಿ ಹಾಗೂ ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದಾರೆ. ಅಷ್ಟರಲ್ಲಿ ಗಸ್ತು ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಅಕ್ಕಪಕ್ಕದ ಮನೆಯಗಳ ನಿವಾಸಿಗಳು ಮನೆಯಿಂದ ಹೊರಗೆ ಬರುವಂತೆ ಮೈಕ್‌ನಲ್ಲಿ ಸೂಚನೆ ನೀಡಿದ್ದಾರೆ. ಹೀಗಾಗಿ ನಿದ್ದೆಯಲ್ಲಿದ್ದ ಸ್ಥಳೀಯರು ಎದ್ದು ಹೊರಗೆ ಬಂದಿದ್ದಾರೆ.7 ತಾಸು ಕಾರ್ಯಾಚರಣೆ:

ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಮುಂದಾಗಿದ್ದಾರೆ. ಮೂರು ಗೋದಾಮುಗಳಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದ್ದ ಪರಿಣಾಮ ಹೆಚ್ಚುವರಿ ಅಗ್ನಿಶಾಮಕ ವಾಹನಗಳನ್ನು ಕರೆಸಿಕೊಂಡು ಸುಮಾರು 50ಕ್ಕೂ ಅಧಿಕ ಸಿಬ್ಬಂದಿ ಸತತ 7 ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.ಶಾರ್ಟ್‌ ಸರ್ಕಿಟ್‌ನಿಂದ ಬೆಂಕಿ?:

ವಿದ್ಯುತ್‌ ಶಾರ್ಟ್‌ ಸರ್ಕಿಟ್‌ನಿಂದ ಟೈಯರ್‌ ಗೋದಾಮಿನಲ್ಲಿ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಗೋದಾಮು ರಾಜೇಶ್‌ ಅಗರ್ವಾಲ್‌ ಎಂಬುವವರ ಮಾಲೀಕತ್ವದಲ್ಲಿ ಇರುವುದು ತಿಳಿದು ಬಂದಿದೆ. ಅಗ್ನಿ ಅವಘಡ ಸಂಬಂಧ ಈವರೆಗೂ ಯಾರೊಬ್ಬರು ದೂರು ನೀಡಿಲ್ಲ. ದೂರು ಸ್ವೀಕರಿಸಿದ ಬಳಿಕ ಅವಘಡದಲ್ಲಿ ಉಂಟಾದ ನಷ್ಟದ ಪ್ರಮಾಣದ ಮಾಹಿತಿ ಲಭ್ಯವಾಗಲಿದೆ. ಮಾಲೀಕ ಈ ಗೋದಾಮಿಗೆ ವಿಮೆ ಮಾಡಿಸಿರುವ ಬಗ್ಗೆ ಮಾಹಿತಿ ಇದೆ. ಈ ಸಂಬಂಧ ಕೆಂಪೇಗೌಡನಗರ ಠಾಣೆ ಪೊಲೀಸರು ಘಟನಾ ಸ್ಥಳವನ್ನು ಪರಿಶೀಲಿಸಿದ್ದು, ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.