ಸಾರಾಂಶ
ಬೆಂಗಳೂರು : ಎರಡು ದಿನಗಳ ಹಿಂದೆ ವೈಯಕ್ತಿಕ ಕಾರಣ ಹಿನ್ನೆಲೆಯಲ್ಲಿ ರೌಡಿ ಮೊಹಮ್ಮದ್ ನಹೀಮ್ (26) ಎಂಬಾತನನ್ನು ಹತ್ಯೆ ಮಾಡಿದ ಆರೋಪದಡಿ ಐವರನ್ನು ಎಚ್‌ಎಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಇಸ್ಲಾಂಪುರದ ಟಿ,ಎಸ್. ಶಫೀಕ್, ಶೇಖ್ ಸದ್ದಾಂ ಹುಸೇನ್, ಯತೀಶ್ ಅಲಿಯಾಸ್ ಚಾಕಲೇಟ್, ಇರ್ಫಾನ್ ಪಾಷ ಅಲಿಯಾಸ್ ಶಿಬ್ಬು ಹಾಗೂ ಇಮ್ರಾನ್ ಖಾನ್ ಅಲಿಯಾಸ್ ಸೂಪ್ಲೆಕ್ಸ್ ಬಂಧಿತರು. ಎರಡು ದಿನಗಳ ಹಿಂದೆ ತನ್ನ ಸಂಬಂಧಿ ಮನೆಗೆ ತೆರಳುತ್ತಿದ್ದಾಗ ಅನ್ನಸಂದ್ರಪಾಳ್ಯದ ಮುಖ್ಯರಸ್ತೆಯಲ್ಲಿ ನಹೀಮ್ ಮೇಲೆ ಶಫೀಕ್ ಗ್ಯಾಂಗ್ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ನಹೀಮ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದನು.
ಶಫೀಕ್ ವೃತ್ತಿಪರ ಕ್ರಿಮಿನಲ್ ಆಗಿದ್ದು, ಆತನ ಮೇಲೆ ಬೈಯಪ್ಪನಹಳ್ಳಿ ಹಾಗೂ ಎಚ್‌ಎಎಲ್ ಠಾಣೆಗಳಲ್ಲಿ 7 ಪ್ರಕರಣಗಳು ದಾಖಲಾಗಿವೆ. ಈತ ವಿಪರೀತ ಗಾಂಜಾ ವ್ಯಸನಿ ಸಹ ಆಗಿದ್ದ. ಈ ಹಿನ್ನೆಲೆಯಲ್ಲಿ ಶಫೀಕ್ ಮೇಲೆ ರೌಡಿಪಟ್ಟಿ ತೆರೆಯಲು ಪೊಲೀಸರು ಮುಂದಾಗಿದ್ದರು. ಮೊದಲು ಇಸ್ಲಾಂಪುರದಲ್ಲೇ ನೆಲೆಸಿದ್ದ ಮೃತ ರೌಡಿ ನಹೀಮ್, ಕೆಲ ವರ್ಷಗಳ ಹಿಂದಷ್ಟೇ ಕೆಂಗೇರಿ ಉಪನಗರಕ್ಕೆ ವಾಸ್ತವ್ಯ ಬದಲಿಸಿದ್ದ. ಮೊದಲಿನಿಂದಲೂ ಸ್ಥಳೀಯವಾಗಿ ಹವಾ ಸೃಷ್ಟಿಸಲು ರೌಡಿ ನಹೀಮ್ ಹಾಗೂ ಶಫೀಕ್ ತಂಡಗಳ ಮಧ್ಯೆ ಪೈಪೋಟಿ ನಡೆದಿತ್ತು. ಇದೇ ವಿಷಯವಾಗಿ ಪರಸ್ಪರ ಎರಡು ತಂಡಗಳು ಬಡಿದಾಡಿಕೊಂಡಿದ್ದವು. ಕಳೆದ ವರ್ಷ ಶಫೀಕ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ನಹೀಮ್ ಜೈಲು ಸೇರಿದ್ದ. ಬಳಿಕ ಜಾಮೀನು ಪಡೆದು ಹೊರಬಂದಿದ್ದ ಆತ, ಕೆಂಗೇರಿಯಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.
ಎರಡು ದಿನಗಳ ಹಿಂದೆ ತನ್ನ ಸಂಬಂಧಿಕರ ಮನೆಗೆ ನಹೀಮ್ ಬಂದಿದ್ದ. ಈ ವಿಚಾರ ತಿಳಿದ ಶಫೀಕ್, ತನ್ನ ಕೊಲೆಗೆ ನಹೀಮ್ ಯತ್ನಿಸಿದ್ದಾನೆ ಎಂದು ಭಾವಿಸಿ ಸಹಚರರ ಜತೆ ಸೇರಿ ಆತನ ಮೇಲೆ ದಾಳಿ ಮಾಡಿದ್ದಾನೆ. ಈ ವೇಳೆ ಮನಬಂದಂತೆ ನಹೀಮ್ ಮೇಲೆ ಹಲ್ಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.