ಕುಡಿದ ಅಮಲಿನಲ್ಲಿ 6 ತಾಸಲ್ಲಿ 5 ಮಂದಿ ಅಮಾಯಕರಿಗೆ ಚಾಕುವಿನಿಂದ ಇರಿದು ರೌಡಿ ಪರಾರಿ

| N/A | Published : Feb 11 2025, 01:48 AM IST / Updated: Feb 11 2025, 04:20 AM IST

crime news

ಸಾರಾಂಶ

ಪಾನಮತ್ತ ರೌಡಿ ಶೀಟರ್‌ 6 ತಾಸಿನಲ್ಲಿ ಕಾರಣವಿಲ್ಲದೇ ಐವರು ಅಮಾಯಕರಿಗೆ ಚಾಕುವಿನಿಂದ ಇರಿದು ಹುಚ್ಚಾಟ ಮೆರೆದಿರುವ ಘಟನೆ ಇಂದಿರಾನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

  ಬೆಂಗಳೂರು : ಪಾನಮತ್ತ ರೌಡಿ ಶೀಟರ್‌ 6 ತಾಸಿನಲ್ಲಿ ಕಾರಣವಿಲ್ಲದೇ ಐವರು ಅಮಾಯಕರಿಗೆ ಚಾಕುವಿನಿಂದ ಇರಿದು ಹುಚ್ಚಾಟ ಮೆರೆದಿರುವ ಘಟನೆ ಇಂದಿರಾನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ರೌಡಿ ಕದಂಬ ಎಂಬಾತ ಫೆ.8ರಂದು ರಾತ್ರಿ 9 ಗಂಟೆಯಿಂದ ಮುಂಜಾನೆ 3 ಗಂಟೆ ಅವಧಿಯಲ್ಲಿ ಈ ಸರಣಿ ಕೃತ್ಯ ಎಸಗಿದ್ದಾನೆ. ಈ ಸಂಬಂಧ ಇಂದಿರಾನಗರ ಪೊಲೀಸ್‌ ಠಾಣೆಯಲ್ಲಿ 5 ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿವೆ. ಸದ್ಯ ತಲೆಮರೆಸಿಕೊಂಡಿರುವ ರೌಡಿ ಕದಂಬನ ಬಂಧನಕ್ಕೆ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.

ಕೃತ್ಯ-1- ಬೈಕ್‌ ಸವಾರನಿಗೆ ಇರಿತ:

ಜಸ್ವಂತ್‌ ಎಂಬುವವರು ಶನಿವಾರ ರಾತ್ರಿ 9 ಗಂಟೆಗೆ ಇಂದಿರಾನಗರದ 6ನೇ ಮುಖ್ಯರಸ್ತೆಯಲ್ಲಿರುವ ನೀರಿನ ಘಟಕಕ್ಕೆ ದ್ವಿಚಕ್ರ ವಾಹನದಲ್ಲಿ ಹೋಗಿದ್ದರು. ಈ ವೇಳೆ ಅಡ್ಡಗಟ್ಟಿರುವ ಆರೋಪಿ ಚಾಕು ತೋರಿಸಿ ತಾನೂ ಸೂಚಿಸಿದ ಸ್ಥಳಕ್ಕೆ ಕರೆದೊಯ್ಯುವಂತೆ ಬೆದರಿಸಿದ್ದಾನೆ. ಆಗ ಆರೋಪಿಯನ್ನು ಇಂದಿರಾನಗರದ 4ನೇ ಕ್ರಾಸ್‌ ಕಡೆಗೆ ಕರೆದುಕೊಂಡು ಹೋಗುವಾಗ ದ್ವಿಚಕ್ರ ವಾಹನವನ್ನು ಎಡಕ್ಕೆ ತಿರುಗಿಸಿದಕ್ಕೆ ಕೋಪಗೊಂಡ ಕದಂಬ ಏಕಾಏಕಿ ಚಾಕು ತೆಗೆದು ಜಸ್ವಂತ್‌ ಕುತ್ತಿಗೆಗೆ ಇರಿದು ಪರಾರಿಯಾಗಿದ್ದಾನೆ.

ಕೃತ್ಯ-2- ಮಸಾಲೆ ಖಾಲಿಯಾಗಿದ್ದಕ್ಕೆ ಇರಿತ:

ಇಂದಿರಾನಗರದ ನೂರಡಿ ರಸ್ತೆಯ ಕುಂಡು ಹೋಟೆಲ್‌ ಸಮೀಪ ದೀಪಕ್‌ ಕುಮಾರ್‌ ವರ್ಮಾ ಎಂಬುವವರ ಪಾನಿಪೂರಿ ಅಂಗಡಿಗೆ ರಾತ್ರಿ 9.40ಕ್ಕೆಬಂದು ಪಾನಿಪೂರಿ ಕೊಡುವಂತೆ ಕೇಳಿದ್ದಾನೆ. ಮಸಾಲೆ ಖಾಲಿಯಾಗಿದೆ ಎಂದಿದ್ದಕ್ಕೆ ಏಕಾಏಕಿ ಚಾಕು ತೆಗೆದು ದೀಪಕ್‌ ಕುತ್ತಿಗೆಗೆ ಇರಿದಿದ್ದಾನೆ.

ಕೃತ್ಯ-3- ತಿಂದು ಬಳಿಕ ಹಣ ಕೊಡಿ ಎಂದಿದ್ದಕ್ಕೆ ಹಲ್ಲೆ:

ಇಂದಿರಾನಗರದ ಎಂಐ ಶೋ ರೂಮ್‌ ಬಳಿ ತಮ್ಮಯ್ಯ ಎಂಬುವವರ ಪಾನಿಪೂರಿ ಅಂಗಡಿಗೆ ರಾತ್ರಿ 9.50ಕ್ಕೆ ಬಂದ ಕದಂಬ, ಪಾನಿಪೂರಿ ಕೊಡುವಂತೆ ಕೇಳಿ ಸ್ಕ್ಯಾನರ್‌ ಎಲ್ಲಿದೆ ಎಂದಿದ್ದಾನೆ. ಮೊದಲು ಪಾನಿಪೂರಿ ತಿಂದು ಬಳಿಕ ಹಣ ಕೊಡಿ ಎಂದು ಹೇಳಿಕ್ಕೆ ಕೋಪಗೊಂಡ ಕದಂಬ ಚಾಕು ತೆಗೆದು ನಿನಗೇಕೆ ದುಡ್ಡು ಕೊಡಬೇಕು ಎಂದು ತಮ್ಮಯ್ಯಗೆ ಇರಿದು ಪರಾರಿಯಾಗಿದ್ದಾನೆ.

ಕೃತ್ಯ-4-ಮೊಬೈಲ್‌ ಕಿತ್ತು ಪರಾರಿ:

ಆದಿಲ್‌ ಎಂಬುವವರು ದೊಮ್ಮಸಂದ್ರದಿಂದ ನ್ಯೂತಿಪ್ಪಸಂದ್ರಕ್ಕೆ ರ್ಯಾಪಿಡೋ ದ್ವಿಚಕ್ರ ವಾಹನದಲ್ಲಿ ಬಾಡಿಗೆಗೆ ಬಂದಿದ್ದರು. ಗ್ರಾಹಕರನ್ನು ಡ್ರಾಪ್‌ ಮಾಡಿ ಮನೆಗೆ ಹೋಗುವಾಗ ಇಂದಿರಾನಗರದ ಲೋನೋ ಪಬ್‌ ಬಳಿ ಅಡ್ಡಗಟ್ಟಿರುವ ರೌಡಿ ಕದಂಬ, ಕೆ.ಆರ್‌.ಪುರ ರೈಲು ನಿಲ್ದಾಣಕ್ಕೆ ಡ್ರಾಪ್‌ ಕೊಡುವಂತೆ ಕೇಳಿದ್ದಾನೆ. ಈಗ ಮನೆಗೆ ಹೋಗುತ್ತಿರುವುದಾಗಿ ಆದಿಲ್‌ ಹೇಳಿದ್ದಕ್ಕೆ ಕುಪಿತನಾದ ರೌಡಿ ಕದಂಬ, ಚಾಕು ತೆಗೆದು ಆದಿಲ್‌ ಕತ್ತಿನ ಭಾಗಕ್ಕೆ ಇರಿದು, ಮೊಬೈಲ್‌ ಕಿತ್ತುಕೊಂಡು ಪರಾರಿಯಾಗಿದ್ದಾನೆ.

ಕೃತ್ಯ-5- ಸೆಕ್ಯೂರಿಟಿ ಗಾರ್ಡ್‌ಗೆ ಇರಿತ:

ಸೆಕ್ಯೂರಿಟಿ ಗಾರ್ಡ್‌ ಮಹೇಶ್‌ ಎಂಬುವವರು ಕೆಲಸ ಮುಗಿಸಿಕೊಂಡು ಬೈಯ್ಯಪ್ಪನಹಳ್ಳಿಯ ಮನೆಗೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಇಂದಿರಾನಗರದ ಕೃಷ್ಣ ದೇವಸ್ಥಾನ ರಸ್ತೆಯಲ್ಲಿ ಎದುರಾದ ರೌಡಿ ಕದಂಬ, ವಿನಾಕಾರಣ ಮಹೇಶ್‌ಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.

ಈ ಐದು ಸರಣಿ ಕೃತ್ಯಗಳ ಸಂಬಂಧ ಇಂದಿರಾನಗರ ಪೊಲೀಸ್‌ ಠಾಣೆಯಲ್ಲಿ ಐದು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿವೆ.