ಶಾಸಕರ ನಕಲಿ ಲೆಟರ್ ಹೆಡ್ ಬಳಸಿ ವರ್ಗಕ್ಕೆ ಯತ್ನಿಸಿದ ಅರಣ್ಯಾಧಿಕಾರಿ!

| Published : Jan 19 2024, 01:47 AM IST

ಸಾರಾಂಶ

ಶಾಸಕರ ನಕಲಿ ಲೆಟರ್ ಹೆಡ್ ಬಳಸಿ ವರ್ಗಕ್ಕೆ ಯತ್ನಿಸಿದ ಅರಣ್ಯಾಧಿಕಾರಿ!

ಕನ್ನಡಪ್ರಭ ವಾರ್ತೆ ಬೆಂಗಳೂರು

ಅಕ್ರಮವಾಗಿ ಗುಬ್ಬಿ ವಿಧಾನಸೌಧ ಕ್ಷೇತ್ರದ ಕಾಂಗ್ರೆಸ್‌ ಶಾಸಕನ ಹೆಸರಿನ ನಕಲಿ ಸಹಿ ಇರುವ ಲೆಟರ್ ಹೆಡ್‌ ಬಳಸಿ ವರ್ಗಾವಣೆಗೆ ಯತ್ನಿಸಿದ್ದ ಆರೋಪದ ಮೇರೆಗೆ ಅರಣ್ಯಾಧಿಕಾರಿಯೊಬ್ಬರ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಡುಗೋಡಿಯಲ್ಲಿರುವ ರಾಜ್ಯ ಅರಣ್ಯ ಇಲಾಖೆಯ ತಾಂತ್ರಿಕ ಮತ್ತು ಆಡಳಿತ ತರಬೇತಿ ಸಂಸ್ಥೆಯ ಅಧಿಕಾರಿ ಹರಿಕಿರಣ್ ವೆಂ.ಭಟ್ ಮೇಲೆ ಆರೋಪ ಬಂದಿದೆ. ಈ ಸಂಬಂಧ ತುಮಕೂರು ಜಿಲ್ಲೆ ಗುಬ್ಬಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ಆರ್‌.ಶ್ರೀನಿವಾಸ್‌ ಅವರ ಆಪ್ತ ಸಹಾಯಕ ಅನಂತ್‌ ಕುಮಾರ್ ದೂರು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ವಿಕಾಸಸೌಧದಲ್ಲಿರುವ ಅರಣ್ಯ ಇಲಾಖೆ ಮಂತ್ರಿಗಳ ಕಚೇರಿಗೆ ಗುಬ್ಬಿ ಶಾಸಕರ ಆಪ್ತ ಸಹಾಯಕ ಅನಂತ್ ಕುಮಾರ್ ತೆರಳಿದ್ದರು. ಅದೇ ವೇಳೆ ಆ ಕಚೇರಿಗೆ ಗುಬ್ಬಿ ಶಾಸಕರ ಹೆಸರಿನ ಲೆಟರ್ ಹೆಡ್ ತೆಗೆದುಕೊಂಡು ಇಬ್ಬರು ಅಪರಿಚಿತರು ಬಂದಿದ್ದರು. ಆಗ ಆ ಪತ್ರ ನೋಡಿದ ಅನಂತ್ ಕುಮಾರ್ ಅವರು, ಕೂಡಲೇ ಅಪರಿಚಿತರಿಂದ ಪತ್ರ ಪಡೆದು ಪರಿಶೀಲಿಸಿದಾಗ ನಕಲಿ ಎಂಬುದು ಗೊತ್ತಾಗಿದೆ. ತಕ್ಷಣವೇ ಅಪರಿಚಿತರು ಓಡಿ ಹೋಗಿದ್ದರು.

ಆ ಲೆಟರ್‌ ಹೆಡ್‌ನಲ್ಲಿ ತಾಂತ್ರಿಕ ಮತ್ತು ಆಡಳಿತ ತರಬೇತಿ ಸಂಸ್ಥೆಯಲ್ಲಿರುವ ಹರಿಕಿರಣ್‌ ಅವರು ಪಾವಗಡ ತಾಲೂಕಿನ ಅರಣ್ಯ ವಲಯ ಸಂರಕ್ಷಣಾಧಿಕಾರಿ ಹುದ್ದೆಗೆ ವರ್ಗಾವಣೆಗೆ ಶಾಸಕರ ಸಹಿಯುಳ್ಳ ಶಿಫಾರಸು ಮಾಡಿದ್ದರು. ಹೀಗಾಗಿ ಶಾಸಕರ ಲೆಟರ್‌ ಹೆಡ್‌ ಅನ್ನು ಅಕ್ರಮವಾಗಿ ದುರುಪಯೋಗಪಡಿಸಿ ಕೊಂಡಿರುವ ಅರಣ್ಯಾಧಿಕಾರಿ ಹರಿಕಿರಣ್ ಹಾಗೂ ಇಬ್ಬರು ಅಪರಿಚಿತರ ಮೇಲೆ ಕಾನೂನುಕ್ರಮ ಜರುಗಿಸುವಂತೆ ಒತ್ತಾಯಿಸಿ ವಿಧಾನಸೌಧ ಠಾಣೆಗೆ ಶಾಸಕರ ಪಿಎ ದೂರು ನೀಡಿದ್ದರು. ಅದರನ್ವಯ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕ್ರಿಮಿನಲ್ಸ್‌ಗೆ ನಾಡ ಪಿಸ್ತೂಲ್‌ ಪೂರೈಸುತ್ತಿದ್ದ ಇಬ್ಬರ ಸೆರೆಕನ್ನಡಪ್ರಭ ವಾರ್ತೆ ಬೆಂಗಳೂರು ನಗರದಲ್ಲಿ ಕ್ರಿಮಿನಲ್‌ಗಳಿಗೆ ಅಕ್ರಮವಾಗಿ ನಾಡ ಪಿಸ್ತೂಲ್ ಪೂರೈಸಲು ಯತ್ನಿಸಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಸೆರೆ ಹಿಡಿದಿದ್ದಾರೆ. ಮಹಾರಾಷ್ಟ್ರ ರಾಜ್ಯದ ಮೀರಜ್‌ ಮೂಲದ ರಾಹುಲ್ ಹಾಗೂ ಮಲ್ಲಿಕ್ ಬಂಧಿತರಾಗಿದ್ದು, ಆರೋಪಿಗಳಿಂದ ಎರಡು ನಾಡ ಪಿಸ್ತೂಲ್‌ಗಳು ಹಾಗೂ ಜೀವಂತ ಗುಂಡುಗಳನ್ನು ಜಪ್ತಿ ಮಾಡಲಾಗಿದೆ. ರೌಡಿಗಳಿಗೆ ಅಕ್ರಮವಾಗಿ ಪಿಸ್ತೂಲ್ ಮಾರಾಟಕ್ಕೆ ಇಬ್ಬರು ಯತ್ನಿಸಿರುವ ಬಗ್ಗೆ ಬಾತ್ಮೀದಾರರ ಮೂಲಕ ಮಾಹಿತಿ ಸಿಕ್ಕಿತು. ಈ ಸುಳಿವು ಆಧರಿಸಿ ಕಾರ್ಯಾಚರಣೆಗಿಳಿದಾಗ ಉಲ್ಲಾಳ ಕೆರೆ ಬಳಿ ಪಿಸ್ತೂಲ್‌ ಪೂರೈಕೆಗೆ ಸಜ್ಜಾಗಿದ್ದ ರಾಹುಲ್ ಹಾಗೂ ಮಲ್ಲಿಕ್ ಸಿಕ್ಕಿಬಿದ್ದಿದ್ದಾರೆ ಎಂದು ಸಿಸಿಬಿ ಹೇಳಿದೆ.ರಾಹುಲ್ ಹಾಗೂ ಮಲ್ಲಿಕ್ ವೃತ್ತಿಪರ ಕ್ರಿಮಿನಲ್‌ಗಳಾಗಿದ್ದು, ಹಲವು ವರ್ಷಗಳಿಂದ ಅಕ್ರಮ ಪಿಸ್ತೂಲ್ ಮಾರಾಟ ದಂಧೆಯಲ್ಲಿ ಇಬ್ಬರು ನಿರತರಾಗಿದ್ದಾರೆ. ಈ ಇಬ್ಬರ ಮೇಲೂ ಬೆಂಗಳೂರು ಹಾಗೂ ಮಹಾರಾಷ್ಟ್ರದಲ್ಲಿ ಪ್ರಕರಣಗಳು ದಾಖಲಾಗಿವೆ.