ಸಾರಾಂಶ
ಬೆಂಗಳೂರು : ಗುರು ರಾಘವೇಂದ್ರ ಬ್ಯಾಂಕ್‌ನ ಠೇವಣಿದಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಬೇಕು ಎಂದು ಮನವಿ ಮಾಡಿದ್ದಾರೆ.
ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯಾ ರೆಡ್ಡಿ, ಮುಖಂಡ ಶಂಕರ್ ಗುಹಾ ದ್ವಾರಕನಾಥ್ ನೇತೃತ್ವದ ನಿಯೋಗ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಬ್ಯಾಂಕ್‌ನಲ್ಲಿ ಹಗರಣ ನಡೆದು ಐದು ವರ್ಷವಾದರೂ ಠೇವಣಿದಾರರ ಪೂರ್ಣ ಹಣ ವಾಪಸಾಗಿಲ್ಲ. ಆದ್ದರಿಂದ ತನಿಖೆ ನಡೆಸಲು ಎಸ್‌ಐಟಿ ರಚಿಸಬೇಕು ಎಂದು ಕೋರಿತು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಂಕರ್ ಗುಹಾ ದ್ವಾರಕನಾಥ್, ಹಗರಣದ ಬಗ್ಗೆ ಸರಿಯಾಗಿ ತನಿಖೆ ನಡೆಯುತ್ತಿಲ್ಲ. ಇಲ್ಲಿಯವರೆಗೂ ಚಾರ್ಜ್ ಶೀಟ್ ದಾಖಲಾಗಿಲ್ಲ. ಕಾಂಗ್ರೆಸ್ ಸರ್ಕಾರ ರಚನೆಯಾದ ಬಳಿಕ ಕೊಟ್ಟ ಮಾತಿನಂತೆ ಈ ಹಗರಣವನ್ನು ಸಿಬಿಐಗೆ ವಹಿಸಲಾಗಿತ್ತು. ಆದರೆ ಸಿಬಿಐನವರು ಪ್ರಕರಣ ತೆಗೆದುಕೊಳ್ಳುತ್ತಿಲ್ಲ. ಆದ್ದರಿಂದ ಕೂಡಲೇ ಹಗರಣವನ್ನು ಎಸ್ಐಟಿಗೆ ವಹಿಸಬೇಕು ಎಂದು ಮನವಿ ಮಾಡಲಾಯಿತು ಎಂದು ತಿಳಿಸಿದರು.
ಈ ಪ್ರಕರಣವನ್ನು ಗಣನೆಗೆ ತೆಗೆದುಕೊಳ್ಳುವುದಾಗಿ ಸಿದ್ದರಾಮಯ್ಯ ಅವರು ಭರವಸೆ ನೀಡಿ ಸಿಐಡಿ ಡಿಜಿ ಕರೆದು ಚರ್ಚಿಸಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಅವರು ಬ್ಯಾಂಕ್ ವಿಚಾರವಾಗಿ ಸುಳ್ಳು ಹೇಳುವುದನ್ನು ಬಿಟ್ಟು ಬೇರೆ ಏನನ್ನೂ ಮಾಡಿಲ್ಲ. ಬಿಜೆಪಿಯ ಎಂಟ್ಹತ್ತು ಪ್ರಭಾವಿ ನಾಯಕರು ಈ ಪ್ರಕರಣದಲ್ಲಿ ಭಾಗಿಯಾಗಿದ್ದು ಅವರೆಲ್ಲರ ವಿರುದ್ಧ ಕ್ರಮ ಜರುಗಿಸಬಹುದು. ಶೀಘ್ರ ತನಿಖೆ ನಡೆಸಬೇಕು ಎಂದು ಕೋರಲಾಯಿತು ಎಂದು ವಿವರಿಸಿದರು.
ತೇಜಸ್ವಿ ಸೂರ್ಯ ಹಾಗೂ ಶಾಸಕ ರವಿ ಸುಬ್ರಮಣ್ಯ ಅವರು ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಮೊದಲಿನಿಂದಲೂ ಸಮ್ಮತಿ ಸೂಚಿಸಿರಲಿಲ್ಲ. ಕೇಂದ್ರ ಸರ್ಕಾರದಿಂದ ಸಿಬಿಐ ಮೇಲೆ ಒತ್ತಡ ಹೇರಿ ತನಿಖೆ ನಡೆಸದಂತೆ ನೋಡಿಕೊಂಡಿದ್ದಾರೆ. ಈ ವಿಚಾರವಾಗಿ ಅವರಿಗೆ ಭಯವೋ ಅಥವಾ ಹಗರಣದಲ್ಲಿ ಭಾಗಿಯಾದವರ ರಕ್ಷಣೆ ಮಾಡುತ್ತಿದ್ದಾರೋ ತಿಳಿದಿಲ್ಲ. ಆದ್ದರಿಂದ ಸರ್ಕಾರ ತಕ್ಷಣ ಈ ಪ್ರಕರಣದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.