ಸಾರಾಂಶ
ನರಗುಂದ/ಗದಗ : ಸಾರಿಗೆ ಬಸ್ ಹಾಗೂ ಆಲ್ಟೋ ಕಾರು ನಡುವೆ ಸಂಭವಿಸಿದ ಮುಖಾಮುಖಿ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ತಾಲೂಕಿನ ಕೊಣ್ಣೂರು ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದೆ.
ಹಾವೇರಿ ನಿವಾಸಿಗಳಾದ ರುದ್ರಪ್ಪ ಅಂಗಡಿ (58), ಪತ್ನಿ ರಾಜೇಶ್ವರಿ (50), ಮಗಳು ಐಶ್ವರ್ಯಾ (18), ಮಗ ವಿಜಯಕುಮಾರ್ (14) ಮೃತರು. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಮೃತರ ಶವ ಹೊರ ತೆಗೆಯಲು ಹರಸಾಹಸ ಪಡಬೇಕಾಯಿತು. ಅಪಘಾತ ನಡೆದ ಸ್ಥಳದಿಂದ ಕೆಲವೇ ಕಿ.ಮೀ. ಅಂತರದಲ್ಲಿದ್ದ (ಕೊಣ್ಣೂರ ಮಾರ್ಗವಾಗಿ 5 ಕಿಮೀ ದೂರದಲ್ಲಿರುವ) ಕಲ್ಲಾಪುರದ ಬಸವಣ್ಣ ದೇವರ ದೇವಸ್ಥಾನಕ್ಕೆ ಕುಟುಂಬದವರು ಹೊರಟಿದ್ದರು. ಆದರೆ ಮಾರ್ಗ ಮಧ್ಯೆಯೇ ಈ ದುರಂತ ಸಂಭವಿಸಿದೆ.
ರಾಜೇಶ್ವರಿ ತೀವ್ರ ಗಾಯಗೊಂಡು ಆಂಬ್ಯುಲೆನ್ಸ್ ಮೂಲಕ ನರಗುಂದ ಸರ್ಕಾರಿ ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯೆ ಮೃತಪಟ್ಟಿದ್ದು, ಉಳಿದವರೆಲ್ಲ ಸ್ಥಳದಲ್ಲೇ ಜೀವ ಬಿಟ್ಟಿದ್ದಾರೆ. ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.