ಜಾತ್ರೇಲಿ ಚಿನ್ನದ ಸರ ಕಳವು ಮಾಡುತ್ತಿದ್ದ ನಾಲ್ವರ ಬಂಧನ

| Published : Jun 12 2024, 01:47 AM IST

ಸಾರಾಂಶ

ದೇವಸ್ಥಾನ ಹಾಗೂ ಜಾತ್ರೆಗಳಲ್ಲಿ ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಚಿನ್ನದ ಸರಗಳನ್ನು ಕಳವು ಮಾಡಿದ್ದ ಇಬ್ಬರು ಮಹಿಳೆಯರು ಸೇರಿ ನಾಲ್ವರು ಆರೋಪಿಗಳನ್ನು ಕುಮಾರಸ್ವಾಮಿ ಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ದೇವಸ್ಥಾನ ಹಾಗೂ ಜಾತ್ರೆಗಳಲ್ಲಿ ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಚಿನ್ನದ ಸರಗಳನ್ನು ಕಳವು ಮಾಡಿದ್ದ ಇಬ್ಬರು ಮಹಿಳೆಯರು ಸೇರಿ ನಾಲ್ವರು ಆರೋಪಿಗಳನ್ನು ಕುಮಾರಸ್ವಾಮಿ ಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆ ಭರಮಸಾಗರ ಗ್ರಾಮದ ಹುಸೇನ್ ಬೀ (52), ಬಾಬು ಸಾಬ್‌ (45), ದಾವಣಗೆರೆ ಜಿಲ್ಲೆ ಚೀಲಾಪುರ ಗ್ರಾಮದ ಗುಲಾಬ್‌ ಜಾನ್‌ (40), ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕೆರೆಬಿಳಚಿ ಗ್ರಾಮದ ದಾದಾಪೀರ್‌(32) ಬಂಧಿತರು. ಆರೋಪಿಗಳಿಂದ 11 ಲಕ್ಷ ರು. ಮೌಲ್ಯದ 174 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.

ಇತ್ತೀಚೆಗೆ ಬನಶಂಕರಿ ದೇವಸ್ಥಾನದ ಗೇಟ್‌ ಬಳಿ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿ ನೂಕುನುಗ್ಗಲು ಉಂಟಾಗಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಮಹಿಳೆಯೊಬ್ಬರ ಕತ್ತಿನಲ್ಲಿದ್ದ 24 ಗ್ರಾಂ ತೂಕದ ಚಿನ್ನದ ಸರ ಕಳವು ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ಕೈಗೊಂಡು ಬನಶಂಕರಿ ಮೆಟ್ರೋ ನಿಲ್ದಾಣದ ಬಳಿ ಕಾರಿನಲ್ಲಿ ಕುಳಿತ್ತಿದ್ದ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ತಪ್ಪೊಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಲಾಸಿ ಜೀವನಕ್ಕಾಗಿ ಕಳ್ಳತನ:

ಆರೋಪಿಗಳು ವಿಲಾಸಿ ಜೀವನಕ್ಕೆ ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಕಳ್ಳತನಕ್ಕೆ ಇಳಿದಿದ್ದರು. ನಾಲ್ವರು ಪರಸ್ಪರ ಪರಿಚಿತರಾಗಿದ್ದು, ಕಾರಿನಲ್ಲಿ ಓಡಾಡುತ್ತಿದ್ದರು. ಜಾತ್ರೆ, ದೇವಸ್ಥಾನಗಳ ಬಳಿ ದಟ್ಟಣೆ ಇರುವ ಸಮಯದಲ್ಲಿ ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಚಿನ್ನದ ಸರ, ಮಾಂಗಲ್ಯ ಸರಗಳನ್ನು ಕಳವು ಮಾಡುತ್ತಿದ್ದರು. ಬಳಿಕ ತುಮಕೂರು ಮತ್ತು ಭರಮಸಾಗರಕ್ಕೆ ತೆರಳಿ ಪರಿಚಿತ ಚಿನ್ನಾಭರಣ ವ್ಯಾಪಾರಿಗಳಿಗೆ ಕದ್ದ ಮಾಲುಗಳನ್ನು ಮಾರಾಟ ಮಾಡಿ ಬಂದ ಹಣವನ್ನು ಹಂಚಿಕೊಂಡು ಮೋಜು-ಮಸ್ತಿ ಮಾಡುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

ವಿಚಾರಣೆ ವೇಳೆ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ತುಮಕೂರು ಮತ್ತು ಭರಮಸಾಗರದ ಚಿನ್ನಾಭರಣ ವ್ಯಾಪಾರಿಗಳಿಗೆ ನೋಟಿಸ್‌ ನೀಡಿ 174 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಆರೋಪಿಗಳ ಬಂಧನದಿಂದ ಕುಮಾರಸ್ವಾಮಿ ಲೇಔಟ್‌ ಠಾಣೆಯಲ್ಲಿ ದಾಖಲಾಗಿದ್ದ ಆರು ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ. ಸದ್ಯಕ್ಕೆ ನಾಲ್ವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.