ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಹುದ್ದೆ ಆಸೆ ತೋರಿಸಿ ನಂಬಿಸಿ ₹ 23 ಲಕ್ಷ ವಂಚನೆ

| Published : Sep 20 2024, 01:36 AM IST / Updated: Sep 20 2024, 05:08 AM IST

Money Problem
ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಹುದ್ದೆ ಆಸೆ ತೋರಿಸಿ ನಂಬಿಸಿ ₹ 23 ಲಕ್ಷ ವಂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಹುದ್ದೆ ಕೊಡಿಸುವುದಾಗಿ ನಂಬಿಸಿ ಉದ್ಯೋಗಾಂಕ್ಷಿಗಳಿಂದ ಹಣ ಪಡೆದು ಟೋಪಿ ಹಾಕಿರುವ ವಂಚಕರ ಜಾಲದ ವಿರುದ್ಧ ಹಲಸೂರು ಗೇಟ್ ಹಾಗೂ ಹೈಗ್ರೌಂಡ್ಸ್ ಠಾಣೆಗಳಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.

 ಬೆಂಗಳೂರು : ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಹುದ್ದೆ ಕೊಡಿಸುವುದಾಗಿ ನಂಬಿಸಿ ಉದ್ಯೋಗಾಂಕ್ಷಿಗಳಿಂದ ಹಣ ಪಡೆದು ಟೋಪಿ ಹಾಕಿರುವ ವಂಚಕರ ಜಾಲದ ವಿರುದ್ಧ ಹಲಸೂರು ಗೇಟ್ ಹಾಗೂ ಹೈಗ್ರೌಂಡ್ಸ್ ಠಾಣೆಗಳಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.

ಮಾದವನಗರ ನಿವಾಸಿ ಬಿ.ಲೋಹಿತ್‌ ಗೌಡ ಮೋಸ ಹೋಗಿದ್ದು, ಈ ಸಂಬಂಧ ಸಂತ್ರಸ್ತ ನೀಡಿದ ದೂರಿನ ಮೇರೆಗೆ ದಾಸರಹಳ್ಳಿಯ ಪ್ರವೀಣ್ ಎಂ.ಸೋಮನಕಟ್ಟಿ, ಉತ್ತರಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ವಿಘ್ನೇಶ್ ಹೆಗಡೆ, ದಾಬಸಪೇಟೆ ಎಚ್.ಆರ್.ವೆಂಕಟೇಶ್, ಆರ್.ಟಿ.ನಗರದ ಟಿ. ಶಿವಣ್ಣ, ತಿಪ್ಪಸಂದ್ರದ ಟಿ.ಎನ್. ಶ್ರೀನಿವಾಸ್ ಮತ್ತು ಸಹಕಾರನಗರದ ರಾಜೇಶ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಕೃತ್ಯ ಬೆಳಕಿಗೆ ಬಂದ ನಂತರ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಮೀಷನರ್‌ ಮುಂದೆಯೇ ಡೀಲ್‌:

ಮೂರು ವರ್ಷಗಳ ಹಿಂದೆ ನಗರ ಪೊಲೀಸ್ ಆಯುಕ್ತರ ಕಚೇರಿ ಸಮೀಪದ ಹೋಟೆಲ್‌ನಲ್ಲೇ ಲೋಹಿತ್ ಅವರನ್ನು ತಾವು ಬೆಸ್ಕಾಂ ಅಧಿಕಾರಿಗಳು ಎಂದು ಹೇಳಿ ವಂಚಕರು ಭೇಟಿಯಾಗಿದ್ದರು. ಅಲ್ಲೇ ₹23 ಲಕ್ಷ ನೀಡಿದರೆ ಕೆಪಿಟಿಸಿಎಲ್ ಹಾಗೂ ಬೆಸ್ಕಾಂನಲ್ಲಿ ಎಇಇ ಹುದ್ದೆ ಕೊಡಿಸುವುದಾಗಿ ಡೀಲ್ ಮಾಡಿದ್ದರು. ಇದಕ್ಕೆ ಕೆಲ ದಾಖಲೆಗಳನ್ನು ತೋರಿಸಿ ನೇಮಕಾತಿ ಆದೇಶ ಎಂದಿದ್ದರು. ಈ ಮಾತು ನಂಬಿದ ಲೋಹಿತ್‌, ಆರೋಪಿಗಳಿಗೆ ಹಂತ ಹಂತವಾಗಿ ಹಣವನ್ನು ಪಾವತಿಸಿದ್ದರು.

ತರುವಾಯ ಬೆಸ್ಕಾಂನಲ್ಲಿ ಹೊರಗುತ್ತಿಗೆ ಆಧಾರದ ಮೇರೆಗೆ ಲೋಹಿತ್ ಕೆಲಸ ಕೊಡಿಸಿದ ಆರೋಪಿಗಳು, 18 ತಿಂಗಳ ಬಳಿಕ ಕೆಲಸ ಖಾಯಂ ಮಾಡುತ್ತೇವೆ ಎಂದು ಭರವಸೆ ಕೊಟ್ಟಿದ್ದರು. ಕೆಲ ದಿನಗಳ ಬಳಿಕ ತಾನು ಮೋಸ ಹೋಗಿರುವ ಸಂಗತಿ ಲೋಹಿತ್‌ಗೆ ಅರಿವಾಗಿದೆ. ನಂತರ ಹಲಸೂರು ಗೇಟ್‌ ಠಾಣೆಗೆ ತೆರಳಿ ಅವರು ದೂರು ದಾಖಲಿಸಿದ್ದಾರೆ. ಇದೇ ರೀತಿ ಹಲವು ಜನರಿಗೆ ಆರೋಪಿಗಳು ವಂಚಿಸಿದ್ದಾರೆ. ಕೆಲವು ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.