ಸಾರಾಂಶ
ಬೆಂಗಳೂರು : ತನ್ನ ಪತ್ನಿ ಜತೆ ಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲೇ ಅಲ್ಲಿನ ನೌಕರನೊಬ್ಬನ ಕುತ್ತಿಗೆ ಕುಯ್ದು ಭೀಕರವಾಗಿ ಆತನ ಸ್ನೇಹಿತನನ್ನು ಹತ್ಯೆಗೈದ ಘಟನೆ ಬುಧವಾರ ನಡೆದಿದೆ.
ದೇವನಹಳ್ಳಿ ನಿವಾಸಿ ರಾಮಕೃಷ್ಣ (40) ಹತ್ಯೆಯಾದ ನತದೃಷ್ಟ. ಈ ಪ್ರಕರಣ ಸಂಬಂಧ ಮೃತನ ಸ್ನೇಹಿತ ರಮೇಶ್‌ನನ್ನು ವಿಮಾನ ನಿಲ್ದಾಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೆಐಎ ಟರ್ಮಿನಲ್ 1ರ ಪ್ರಯಾಣಿಕರ ನಿರ್ಗಮನ ದ್ವಾರದ ಬಳಿ ಟ್ರ್ಯಾಲಿಗಳನ್ನು ತೆರವುಗೊಳಿಸಲು ಬಂದಾಗ ನೌಕರ ರಾಮಕೃಷ್ಣ ಕುತ್ತಿಗೆ ಚಾಕುವಿನಿಂದ ಇರಿದು ರಮೇಶ್ ಕೊಂದಿದ್ದಾನೆ.
ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ತಿಮ್ಮನಹಳ್ಳಿ ಗ್ರಾಮದ ರಾಮಕೃಷ್ಣ ಹಾಗೂ ರಮೇಶ್ ಸ್ನೇಹಿತರಾಗಿದ್ದು, ಕೆಐಎನಲ್ಲಿ ರಾಮಕೃಷ್ಣ ನೌಕರಿಯಲ್ಲಿದ್ದ. ಟರ್ಮಿನಲ್‌ನಲ್ಲಿ ಟ್ರ್ಯಾಲಿಗಳನ್ನು ತೆರವುಗೊಳಿಸುವ ಕೆಲಸಕ್ಕೆ ಆತ ನಿಯೋಜನೆಗೊಂಡಿದ್ದ. ಇನ್ನು ಮಧುಗಿರಿಯಲ್ಲಿ ಖಾಸಗಿ ಬಸ್‌ನಲ್ಲಿ ರಮೇಶ್ ಕಂಡಕ್ಟರ್ ಆಗಿದ್ದ. ಆದರೆ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಆತನಿಂದ ಪತ್ನಿ ಪ್ರತ್ಯೇಕವಾಗಿದ್ದರು.
ತನ್ನ ಪತ್ನಿ ಜತೆ ರಾಮಕೃಷ್ಣ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ರಮೇಶ್ ಶಂಕಿಸಿದ್ದ. ಇದೇ ವಿಚಾರವಾಗಿ ಪರಸ್ಪರ ಜಗಳವಾಡಿದ್ದರು. ಕೊನೆಗೆ ತನ್ನ ಕೌಟುಂಬಿಕ ಪ್ರತ್ಯೇಕಗೊಳಿಸಿದ ಸ್ನೇಹಿತನ ಕೊಲೆಗೆ ರಮೇಶ್ ನಿರ್ಧರಿಸಿದ್ದಾನೆ. ಅಂತೆಯೇ ಮಧುಗಿರಿಯಿಂದ ಬ್ಯಾಗ್‌ನಲ್ಲಿ ಚಾಕುವನ್ನಿಟ್ಟುಕೊಂಡು ಮೆಜೆಸ್ಟಿಕ್ ಬಂದಿಳಿದ ರಮೇಶ್, ಅಲ್ಲಿಂದ ಬಿಎಂಟಿಸಿ ಬಸ್‌ನಲ್ಲಿ ಕೆಐಎಗೆ ಆಗಮಿಸಿದ್ದಾನೆ. ಬಳಿಕ ಟರ್ಮಿನಲ್-1ರ ಪ್ರಯಾಣಿಕರ ನಿರ್ಗಮನ ದ್ವಾರದ ಬಳಿ ರಾಮಕೃಷ್ಣನಿಗೆ ಆತ ಹೊಂಚು ಹಾಕಿದ್ದ.
ಕೊನೆಗೆ ಸಂಜೆ 6.30 ಗಂಟೆಗೆ ಆತ ಟ್ರ್ಯಾಲಿಗಳನ್ನು ತೆಗೆದುಕೊಂಡು ಹೋಗಲು ಬಂದಾಗ ರಮೇಶ್ ಚಾಕುವಿನಿಂದ ಹಲ್ಲೆ ನಡೆಸಿ ಕೊಂದಿದ್ದಾನೆ. ಈ ಅನಿರೀಕ್ಷಿತ ದಾಳಿಯಿಂದ ಆತಂಕಗೊಂಡ ಪ್ರಯಾಣಿಕರು ಕೂಗಾಡಿದ್ದಾರೆ. ಅಷ್ಟರಲ್ಲಿ ಅಲ್ಲೇ ಇದ್ದ ಭದ್ರತಾ ಸಿಬ್ಬಂದಿ ಆರೋಪಿಯನ್ನು ಸೆರೆ ಹಿಡಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.