ಮೊಬೈಲ್ ಆ್ಯಪ್ ಮೂಲಕ ಲಕ್ಷಾಂತರ ರು. ವಂಚನೆ
KannadaprabhaNewsNetwork | Published : Oct 09 2023, 12:45 AM IST
ಮೊಬೈಲ್ ಆ್ಯಪ್ ಮೂಲಕ ಲಕ್ಷಾಂತರ ರು. ವಂಚನೆ
ಸಾರಾಂಶ
ಜನರ ಹಣವನ್ನು "ಎಪಿಎಂ ಲಿಂಕ್ ಆ್ಯಪ್ " ಮೂಲಕ ನುಂಗಿದ ಭೂಪರು ಇದೀಗ ಆ್ಯಪ್‌ನ್ನು ಅನ್ ಇನ್‌ಸ್ಟಾಲ್ ಮಾಡಿ ನಾಪತ್ತೆಯಾಗಿದ್ದಾರೆ.
ಸುರೇಶ ಯಳಕಪ್ಪನವರ ಕನ್ನಡಪ್ರಭ ವಾರ್ತೆ ಹಗರಿಬೊಮ್ಮನಹಳ್ಳಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮೊಬೈಲ್ ಆ್ಯಪ್ ಮೂಲಕ ಲಕ್ಷಾಂತರ ರು. ವಂಚಿಸಿರುವ ಕುರಿತು ಪ್ರಕರಣ ಬಯಲಿಗೆ ಬಂದಿದ್ದು, ಹಣ ಕಳೆದುಕೊಂಡವರು ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ. ತಾಲೂಕಿನ ರಾಮೇಶ್ವರಬಂಡಿ, ತೆಲುಗೋಳಿ ಗ್ರಾಮದ ಜನರ ಹಣವನ್ನು "ಎಪಿಎಂ ಲಿಂಕ್ ಆ್ಯಪ್ " ಮೂಲಕ ನುಂಗಿದ ಭೂಪರು ಇದೀಗ ಆ್ಯಪ್‌ನ್ನು ಅನ್ ಇನ್‌ಸ್ಟಾಲ್ ಮಾಡಿ ನಾಪತ್ತೆಯಾಗಿದ್ದಾರೆ. ಏನಿದು ಪ್ರಕರಣ? ಎಪಿಎಂ ಆ್ಯಪ್ ಮೂಲಕ ಒಂದು ಬಾರಿ ₹೬೦೦ ಕಟ್ಟಿದರೆ ದಿನಕ್ಕೆ ₹೧೮ರಂತೆ ಒಂದು ವರ್ಷದವರೆಗೆ ನಿತ್ಯ ಹಣ ಹಾಕುತ್ತೇವೆ ಎಂದು ನಂಬಿಸಿದ್ದಾರೆ. ಈ ರೀತಿ ೨ ತಿಂಗಳ ಕಾಲ ಜನರಿಂದ ಹಣ ಕಟ್ಟಿಸಿಕೊಂಡಿದ್ದಾರೆ. ಎರಡು ಗ್ರಾಮಗಳಿಂದ ೩೫೦ಕ್ಕೂ ಹೆಚ್ಚು ಜನ ಹೀಗೆ ಹಣ ಹಾಕಿದ್ದಾರೆ. ಈಗಾಗಲೇ ಮೋಸಕ್ಕೊಳಗಾದ ಜನರು ಪೊಲೀಸ್ ಇಲಾಖೆಯ ೧೯೩೦ ಟೋಲ್ ಫೀ ನಂಬರ್‌ಗೆ ಕರೆ ಮಾಡಿ ದೂರು ಸಲ್ಲಿಸಿದ್ದಾರೆ. ಸುಮಾರು ₹೨೦ ಲಕ್ಷಕ್ಕೂ ಹೆಚ್ಚು ಹಣ ವಂಚಿಸಲಾಗಿದೆ ಎಂದು ವಂಚನೆಗೊಳಗಾದ ಜನರು ಹೇಳುತ್ತಿದ್ದು, ಕೂಡಲೇ ಪ್ರಕರಣ ಭೇದಿಸಿ ತಪ್ಪಿತಸ್ಥರಿಗೆ ಶಾಸ್ತಿ ಮಾಡಬೇಕೆಂದು ಪೊಲೀಸರಲ್ಲಿ ಮನವಿ ಮಾಡಿದ್ದಾರೆ. ಪರಿಶೀಲನೆ ಎಸ್ಪಿ: ಜಿಲ್ಲಾದ್ಯಂತ ಸೈಬರ್ ಅಪರಾಧಗಳ ಕುರಿತು ಜಾಗೃತಿ ಮೂಡಿಸಲಾಗುವುದು. ಸ್ಮಾರ್ಟ್‌ಪೋನ್‌ಗಳಲ್ಲಿನ ನಕಲಿ ಜಾಹೀರಾತುಗಳನ್ನು ನಂಬಿ ಜನ ಮೋಸ ಹೋಗುತ್ತಿದ್ದಾರೆ. ಜಿಲ್ಲೆಯ ರಾಮೇಶ್ವರಬಂಡಿ, ತೆಲುಗೋಳಿ ಗ್ರಾಮದ ಜನತೆ ಎಪಿಎಂ ಆ್ಯಪ್‌ನವರ ಮೋಸಕ್ಕೆ ಬಲಿಯಾಗಿದ್ದಾರೆ. ಈ ಕುರಿತು ಪರಿಶೀಲಿಸಲಾಗುತ್ತಿದೆ. ಎಂದು ಎಸ್ಪಿ ಬಿ.ಎಲ್. ಶ್ರೀಹರಿಬಾಬು ತಿಳಿಸಿದರು.