ಕೆಂಗೇರಿಯಲ್ಲಿ ₹1,600 ಕೋಟಿ ಮೌಲ್ಯದ ಸರ್ಕಾರಿ ಸ್ವತ್ತು ಕಬಳಿಕೆ: ಲೋಕಾಯುಕ್ತಕ್ಕೆ ಬಿಜೆಪಿಯ ರಮೇಶ್‌ ದೂರು

| Published : Dec 18 2024, 01:45 AM IST

ಕೆಂಗೇರಿಯಲ್ಲಿ ₹1,600 ಕೋಟಿ ಮೌಲ್ಯದ ಸರ್ಕಾರಿ ಸ್ವತ್ತು ಕಬಳಿಕೆ: ಲೋಕಾಯುಕ್ತಕ್ಕೆ ಬಿಜೆಪಿಯ ರಮೇಶ್‌ ದೂರು
Share this Article
  • FB
  • TW
  • Linkdin
  • Email

ಸಾರಾಂಶ

ರಾಜಕೀಯ ಪ್ರಭಾವಿಗಳು ಮತ್ತು ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಬೆಂಗಳೂರು ದಕ್ಷಿಣ ತಾಲೂಕು ಕೆಂಗೇರಿ ಗ್ರಾಮದ ಸರ್ವೇ 69ರಲ್ಲಿ ಸುಮಾರು ₹1,600 ಕೋಟಿಗೂ ಅಧಿಕ ಮೌಲ್ಯದ 37.20 ಎಕರೆ ಸರ್ಕಾರಿ ಭೂಮಿಯನ್ನು ಕಬಳಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಎನ್‌.ಆರ್‌.ರಮೇಶ್‌ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೆಂಗೇರಿ ಗ್ರಾಮದ ಸರ್ವೇ ನಂ.69ರಲ್ಲಿ ಒಟ್ಟು 183 ಎಕರೆಗಳಷ್ಟು ವಿಸ್ತೀರ್ಣದ ಸರ್ಕಾರಿ ಸ್ವತ್ತು ಇದ್ದು, ಈ ಪೈಕಿ 37.20 ಎಕರೆ ವಿಸ್ತೀರ್ಣದ ಸ್ವತ್ತನ್ನು 1973ರಲ್ಲಿ 25 ಮಂದಿ ಜಮೀನು ರಹಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ತಲಾ 1.20 ಎಕರೆ ವಿಸ್ತೀರ್ಣದಂತೆ ಸರ್ಕಾರದ ವತಿಯಿಂದ ಮಂಜೂರು (ಗ್ರ್ಯಾಂಟ್‌) ಮಾಡಲಾಗಿದೆ. ಈ 25 ಜನರ ಪೈಕಿ ಹಲವರು ಈಗಾಗಲೇ ಮೃತಪಟ್ಟಿದ್ದಾರೆ. ಉತ್ತರಹಳ್ಳಿ-ಕೆಂಗೇರಿ ರಸ್ತೆಯ ಬಿಜಿಎಸ್‌ ಆಸ್ಪತ್ರೆಗೆ ಹೊಂದಿಕೊಂಡಿರುವ ಈ ಅಮೂಲ್ಯ ಸ್ವತ್ತನ್ನು ಹಲವು ಭ್ರಷ್ಟರು ನಕಲಿ ದಾಖಲೆ ಸೃಷ್ಟಿಸಿ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ನೆಲಗಳ್ಳರೊಂದಿಗೆ ಶಾಮೀಲಾಗಿರುವ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಕೆಎನ್‌ಎಸ್‌ ರೆಸಿಡೆನ್ಸಿ ಸಂಸ್ಥೆಯ ಮಾಲೀಕ ಕೆ.ಎನ್‌.ಸುರೇಂದ್ರ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನ್ಯಾಯಾಂಗ ಅಥವಾ ಸಿಐಡಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಅನುಮತಿ ಪಡೆಯದೆ ಮಾರಾಟ: ಸರ್ಕಾರದಿಂದ ಗ್ರ್ಯಾಂಟ್‌ ಪಡೆದಿದ್ದ 25 ಮಂದಿ ಫಲಾನುಭವಿಗಳ ಪೈಕಿ ಬಹುತೇಕರು 1995-96 ರಿಂದ 1999-2000 ಇಸವಿ ಅವಧಿಯಲ್ಲಿ ಸರ್ಕಾರದಿಂದ ಮಾರಾಟದ ಅನುಮತಿ ಪಡೆಯದೆ 75ಕ್ಕೂ ಹೆಚ್ಚು ಜನರಿಗೆ ನಿವೇಶನಗಳ ರೂಪದಲ್ಲಿ ಅಕ್ರಮವಾಗಿ ಮಾರಾಟ ಮಾಡಿದ್ದಾರೆ. ಹೀಗಾಗಿ ಆ ಸ್ವತ್ತುಗಳು ತಾನಾಗೇ ಸರ್ಕಾರದ ವಶಕ್ಕೆ ಸೇರುತ್ತವೆ. ಫಲಾನುಭವಿಗಳು ತಮ್ಮ ಹಕ್ಕು ಸ್ವಾಮ್ಯವನ್ನು ಕಳೆದುಕೊಳ್ಳುತ್ತಾರೆ ಎಂದು ರಮೇಶ್ ವಿವರಿಸಿದ್ದಾರೆ.