ಬೆಟ್ಟಿಂಗ್‌ ಚಟಕ್ಕೆ ಬಿದ್ದು ಕಳ್ಳತನ ಮಾಡುತ್ತಿದ್ದ ಪದವಿಧರ ಬಂಧನ

| Published : Mar 15 2025, 11:45 PM IST

ಸಾರಾಂಶ

ಆನ್‌ಲೈನ್‌ ಬೆಟ್ಟಿಂಗ್‌ ಚಟಕ್ಕೆ ಬಿದ್ದು ಹಾಡಹಗಲೇ ಮನೆಗಳವು ಮಾಡುತ್ತಿದ್ದ ಬಿಸಿಎ ಪದವಿಧರನನ್ನು ಬಂಡೇಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದು, ಆರೋಪಿಯಿಂದ ₹3.50 ಲಕ್ಷ ಮೌಲ್ಯದ 83 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಆನ್‌ಲೈನ್‌ ಬೆಟ್ಟಿಂಗ್‌ ಚಟಕ್ಕೆ ಬಿದ್ದು ಹಾಡಹಗಲೇ ಮನೆಗಳವು ಮಾಡುತ್ತಿದ್ದ ಬಿಸಿಎ ಪದವಿಧರನನ್ನು ಬಂಡೇಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದು, ಆರೋಪಿಯಿಂದ ₹3.50 ಲಕ್ಷ ಮೌಲ್ಯದ 83 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

ಹೊಂಗಸಂದ್ರ ನಿವಾಸಿ ಕೆ.ಎ.ಮೂರ್ತಿ(27) ಬಂಧಿತ. ಇತ್ತೀಚೆಗೆ ಹೊಸಪಾಳ್ಯ ನಿವಾಸಿಯೊಬ್ಬರು ಮನೆಗೆ ಬೀಗ ಹಾಕಿ ಕೀ ಅನ್ನು ಶೂ ರ್‍ಯಾಕ್‌ನಲ್ಲಿ ಇರಿಸಿ ಕೆಲಸಕ್ಕೆ ತೆರಳಿದ್ದರು. ಕೆಲಸ ಮುಗಿಸಿ ಸಂಜೆ ವಾಪಾಸ್‌ ಬಂದಾಗ ಮನೆ ಬೀಗ ತೆರೆದು ಬೀರುವಿನಲ್ಲಿದ್ದ ಚಿನ್ನಾಭರಣ ಕಳವು ಮಾಡಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ದಾಖಲಾಗಿತ್ತು. ಪೊಲೀಸರು ತನಿಖೆ ನಡೆಸಿ, ಬಾತ್ಮೀದಾರರ ಖಚಿತ ಮಾಹಿತಿ ಮೇರೆಗೆ ಮಾ.5ರಂದು ಹೊಂಗಸಂದ್ರದ ಬಸ್‌ ನಿಲ್ದಾಣದ ಬಳಿ ಮೂರ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ತಪ್ಪೊಪ್ಪಿಕೊಂಡಿದ್ದು, ಕದ್ದ ಚಿನ್ನಾಭರಣಗಳನ್ನು ಜಯನಗರ 9ನೇ ಬ್ಲಾಕ್‌ನ ಜುವೆಲರಿ ಅಂಗಡಿಯಲ್ಲಿ ಮಾರಿರುವುದಾಗಿ ಬಾಯ್ಬಿಟ್ಟಿದ್ದಾನೆ. ಬಳಿಕ ಪೊಲೀಸರು ಜುವೆಲರಿ ಅಂಗಡಿಗೆ ನೋಟಿಸ್‌ ನೀಡಿ ಆ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

10 ದಿನದ ಹಿಂದೆಯಷ್ಟೇ ಬಿಡಗಡೆ:

ಶಿವಮೊಗ್ಗ ಮೂಲದ ಮೂರ್ತಿ ಬಿಸಿಎ ಪದವಿಧರನಾಗಿದ್ದು, ಕೆಲ ವರ್ಷಗಳಿಂದ ತಾಯಿಯ ಜತೆಗೆ ಹೊಂಗಸಂದ್ರದಲ್ಲಿ ನೆಲೆಸಿದ್ದಾನೆ. ಆನ್‌ಲೈನ್‌ ಬೆಟ್ಟಿಂಗ್‌ ಆಡಲು ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಮನೆಗಳವು ಕೃತ್ಯಗಳಲ್ಲಿ ಭಾಗಿಯಾಗಿದ್ದ. ಈತನ ವಿರುದ್ಧ ಈ ಹಿಂದೆ ಕೆ.ಆರ್‌.ಪುರ, ಕೋರಮಂಗಲ, ಬೇಗೂರು ಸೇರಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಮನೆಗಳವು ಕೇಸ್ ದಾಖಲಾಗಿವೆ. ಇತ್ತೀಚೆಗೆ ಮನೆಗಳವು ಪ್ರಕರಣದಲ್ಲಿ ಬೇಗೂರು ಠಾಣೆ ಪೊಲೀಸರು ಮೂರ್ತಿಯನ್ನು ಬಂಧಿಸಿ ಜೈಲಿಗಟ್ಟಿದ್ದರು. ನ್ಯಾಯಾಲಯದಲ್ಲಿ ಜಾಮೀನು ಪಡೆದು10 ದಿನಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ.

ಬೀಗ ಕೀ ಸಿಕ್ಕರಷ್ಟೇ ಕಳವು !: ನಗರದ ವಿವಿಧೆಡೆ ಬೆಳಗ್ಗೆ ಸುತ್ತಾಡುತ್ತಿದ್ದ ಆರೋಪಿ ಮೂರ್ತಿ, ನಿವಾಸಿಗಳು ಮನೆಗೆ ಬೀಗ ಹಾಕಿ ಕೀಯನ್ನು ಶೂ ರ್‍ಯಾಕ್‌, ಮ್ಯಾಟ್‌ ಕೆಳಗೆ, ಹೂವಿನ ಪಾಟ್‌ಗಳನ್ನು ಇರಿಸುವುದನ್ನು ಗಮನಿಸುತ್ತಿದ್ದ. ಬೀಗ ಕೀ ಸಿಕ್ಕರಷ್ಟೇ ರಾಜಾರೋಷವಾಗಿ ಮನೆಯ ಬಾಗಿಲು ತರೆದು ಕಳವು ಮಾಡುತ್ತಿದ್ದ. ಯಾವುದೇ ಕಾರಣಕ್ಕೂ ಮನೆಯ ಬಾಗಿಲು ಒಡೆದು ಕಳವು ಮಾಡುವುದಿಲ್ಲ. ಹೊಸಪಾಳ್ಯದಲ್ಲಿ ಕದ್ದ ಚಿನ್ನಾಭರಣವನ್ನು ಮಾರಾಟ ಮಾಡಿ ಹಣ ಪಡೆದು ನೇರ ಧರ್ಮಸ್ಥಳಕ್ಕೆ ಹೋಗಿ ಮುಡಿಕೊಟ್ಟು ವಾಪಾಸ್‌ ನಗರಕ್ಕೆ ಬಂದಿದ್ದ. ಮತ್ತೆ ಮನೆ ಕಳ್ಳತನಕ್ಕೆ ಸಂಚು ರೂಪಿಸುವಾಗ ಪೊಲೀಸರು ಬಂಧಿಸಿದ್ದಾರೆ.