ಸಾರಾಂಶ
ಹಣಕ್ಕಾಗಿ ಅಜ್ಜಿಗೆ ಹೊಡೆದು ಹಿಂಸಿಸಿದ್ದ ಸೋದರಳಿಯನ್ನು ಮಾವನೇ ಕೊಲೆ ಮಾಡಿದ ಘಟನೆ ಬೆಂಗಳೂರಿನ ಬಾಸವಾಡಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕುಡಿದು ಹಣಕ್ಕೆ ಪೀಡಿಸುತ್ತಿದ್ದ ಅಕ್ಕನ ಮಗನನ್ನು ಮಾವನೇ ಚಾಕುವಿನಿಂದ ಚುಚ್ಚಿ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಘಟನೆ ಬಾಸಣವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ದೊಡ್ಡಬಾಣಸವಾಡಿ ನಿವಾಸಿ ಅಜಯ್ ಅಲಿಯಾಸ್ ಟಿನ್ನು(29) ಕೊಲೆಯಾದವನು. ಈ ಸಂಬಂಧ ಮುರುಳಿ(42) ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.
ಕೊಲೆಯಾದ ಅಜಯ್‌ಗೆ ತಂದೆ-ತಾಯಿ ಇಲ್ಲ. ಹೀಗಾಗಿ ಚಿಕ್ಕಂದಿನಿಂದ ಅಜ್ಜಿ ಲಕ್ಷ್ಮಮ್ಮ ಹಾಗೂ ಮಾವ ಮುರಳಿ ಜತೆಗೆ ಇದ್ದ. ಕುಡಿತದ ಚಟಕ್ಕೆ ಬಿದ್ದಿದ್ದ ಅಜಯ್, ಶುಕ್ರವಾರ ಮದ್ಯ ಸೇವಿಸಿ ಮನೆಗೆ ಬಂದು ಅಜ್ಜಿ ಬಳಿ ₹2 ಲಕ್ಷ ಕೊಡುವಂತೆ ಪೀಡಿಸಿದ್ದಾನೆ. ಅಜ್ಜಿ ಹಣ ಇಲ್ಲ ಎಂದಿದ್ದಕ್ಕೆ ಹಲ್ಲೆ ಮಾಡಿದ್ದಾನೆ. ಶನಿವಾರವೂ ಬೆಳಗ್ಗೆ ಮದ್ಯ ಸೇವಿಸಿ ಮನೆಗೆ ಬಂದು ಹಣ ಕೊಡುವಂತೆ ಅಜ್ಜಿಯನ್ನು ಮತ್ತೆ ಪೀಡಿಸಲು ಆರಂಭಿಸಿದ್ದಾನೆ.ಇದೇ ಸಮಯಕ್ಕೆ ಮನೆಗೆ ಬಂದ ಮುರುಳಿ ಬುದ್ಧಿವಾದ ಹೇಳಿದರೂ ಕೇಳದೆ ಆತನೊಂದಿಗೆ ಜಗಳಕ್ಕೆ ಹೋಗಿದ್ದಾನೆ. ಇದರಿಂದ ಕೋಪಗೊಂಡ ಮುರುಳಿ, ಮನೆಯಲ್ಲೇ ಇದ್ದ ಚಾಕು ತೆಗೆದು ಅಜಯ್‌ಗೆ ಇರಿದಿದ್ದಾನೆ. ಅಷ್ಟಕ್ಕೆ ಸುಮ್ಮನಾಗದೆ ಅಜಯ್ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ.
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮೃತನ ಅಜ್ಜಿ ಲಕ್ಷ್ಮಮ್ಮ ನೀಡಿದ ದೂರಿನ ಮೇರೆಗೆ ಬಾಣಸವಾಡಿ ಠಾಣೆ ಪೊಲೀಸರು, ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಮುರುಳಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.ಕೊಲೆಯಾದ ಅಜಯ್‌ಗೆ ಅಪರಾಧ ಹಿನ್ನೆಲೆ ಇದ್ದು, 2013ರಲ್ಲಿ ಹಲಸೂರು ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
)
;Resize=(128,128))
;Resize=(128,128))
;Resize=(128,128))
;Resize=(128,128))