ವಿಳಾಸ ಕೇಳುವ ನೆಪದಲ್ಲಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಯುವತಿ ಜತೆಗೆ ಅಸಭ್ಯವಾಗಿ ವರ್ತಿಸಿದ್ದ ಆರೋಪಿಯನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ವಿಳಾಸ ಕೇಳುವ ನೆಪದಲ್ಲಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಯುವತಿ ಜತೆಗೆ ಅಸಭ್ಯವಾಗಿ ವರ್ತಿಸಿದ್ದ ಆರೋಪಿಯನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಿಲಕನಗರದ ಯಾಸೀನ್‌ (24) ಬಂಧಿತ. 19 ವರ್ಷದ ಯುವತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗಿದೆ. ಬಂಧಿತ ಯಾಸೀನ್‌ ತಿಲಕನಗರದಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದು, ಈತ ಬೇರೆ ಯುವತಿಯರಿಗೂ ಕಿರುಕುಳ ನೀಡಿರುವ ಆರೋಪವಿರುವುದರಿಂದ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

ಏನಿದು ಪ್ರಕರಣ?:ದೂರುದಾರೆ ಯುವತಿ ಜ.17ರಂದು ಸಂಜೆ 6.15ಕ್ಕೆ ಜಯನಗರ 3ನೇ ಬ್ಲಾಕ್‌ನ ಬಸ್‌ ನಿಲ್ದಾಣದ ಬಳಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದಿರುವ ಆರೋಪಿಯು ಜಯನಗರ 3ನೇ ಬ್ಲಾಕ್‌ನ 36ನೇ ಅಡ್ಡರಸ್ತೆ ಎಲ್ಲಿ ಬರಲಿದೆ ಎಂದು ಕೇಳಿದ್ದಾನೆ. ಇದಕ್ಕೆ ಯುವತಿ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ಬಳಿಕ ಸ್ವಲ್ಪ ಮುಂದಕ್ಕೆ ಹೋಗುವ ಆರೋಪಿಯು ಮತ್ತೆ ವಾಪಸ್‌ ಯುವತಿ ಬಳಿ ಬಂದು ತನ್ನ ಮೊಬೈಲ್‌ ತೆಗೆದು ನಗ್ನ ಚಿತ್ರವನ್ನು ತೋರಿಸಿ ಪರಾರಿಯಾಗಿದ್ದಾನೆ. ಈತನ ವರ್ತನೆಯಿಂದ ಯುವತಿ ಗಾಬರಿಗೊಂಡಿದ್ದಾರೆ.

ಇದೇ ಆರೋಪಿ ವಾರದ ಹಿಂದೆಯೂ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಆ್ಯಕ್ಸಿಸ್‌ ಬ್ಯಾಂಕ್‌ ಎಲ್ಲಿದೆ ಎಂದು ಕೇಳಿದ್ದ. ಹೀಗಾಗಿ ಪದೇ ಪದೇ ತನ್ನನ್ನು ಹಿಂಬಾಲಿಸಿ ಅಸಭ್ಯವಾಗಿ ವರ್ತಿಸುತ್ತಿರುವ ಆರೋಪಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಯುವತಿ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.