ಸಾರಾಂಶ
ಬೆಂಗಳೂರು : ಚಿನ್ನಾಭರಣ ಮಳಿಗೆಯಲ್ಲಿ ಮಾಲೀಕರಿಗೆ ಗೊತ್ತಾಗದಂತೆ ಕೆಲಸಗಾರ ಕಳವು ಮಾಡಿದ್ದ ಒಡವೆಯನ್ನು ಸ್ವೀಕರಿಸಿದ್ದ ತಪ್ಪಿಗೆ ಆತನ ಇಬ್ಬರು ಸ್ನೇಹಿತರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾರೆ.
ರಾಜಸ್ಥಾನ ಮೂಲದ ವಿಷ್ಣು ದೇವಸಿ ಹಾಗೂ ದೇವಸಿ ಭದ್ರಿ ಬಂಧಿತರಾಗಿದ್ದು, ಆರೋಪಿಗಳಿಂದ 51.80 ಲಕ್ಷ ರು ಮೌಲ್ಯದ ಆಭರಣ ಜಪ್ತಿ ಮಾಡಲಾಗಿದೆ. ಇದೇ ಪ್ರಕರಣದಲ್ಲಿ ದೇವಸಿ ಸ್ನೇಹಿತ ರಾಹುಲ್ ಕುಮಾರ್‌ನನನ್ನು ಎಸ್.ಆರ್.ನಗರ ಠಾಣೆ ಪೊಲೀಸರು ಬಂಧಿಸಿದ್ದರು. ಬಳಿಕ ಆತ ನೀಡಿದ ಮಾಹಿತಿ ಮೇರೆಗೆ ರಾಹುಲ್ ಸ್ನೇಹಿತರು ಜೈಲು ಸೇರಿದ್ದಾರೆ.
2 ವರ್ಷಗಳಿಂದ ಎಸ್.ಆರ್.ನಗರದ 5ನೇ ಮುಖ್ಯರಸ್ತೆಯಲ್ಲಿರುವ ಗಣಪತಿ ದಾಸ್ ಚಿನ್ನಾಭರಣ ಮಳಿಗೆಯಲ್ಲಿ ರಾಹುಲ್ ಕೆಲಸ ಮಾಡುತ್ತಿದ್ದ. ಆ ವೇಳೆ ಮಾಲೀಕರಿಗೆ ಗೊತ್ತಾಗದಂತೆ ಸ್ವಲ್ಪ, ಸ್ವಲ್ಪ ಪ್ರಮಾಣದ ಆಭರಣ ಕದ್ದು ತನ್ನ ಸ್ನೇಹಿತರಾದ ವಿಷ್ಣು ದೇವಸಿ ಹಾಗೂ ಭದ್ರಿ ಮೂಲಕ ಆತ ವಿಲೇವಾರಿ ಮಾಡಿಸುತ್ತಿದ್ದ.
ಕೆಲ ತಿಂಗಳ ಹಿಂದೆ ಅಂಗಡಿಯ ಆಭರಣದ ಅಡಿಟ್ ನಡೆಸಿದಾಗ ಈ ಕಳ್ಳತನ ಕೃತ್ಯ ಬೆಳಕಿಗೆ ಬಂದಿತ್ತು. ಆಗ ಗಣಪತಿ ದಾಸ್ ನೀಡಿದ ದೂರಿನ ಮೇರೆಗೆ ರಾಹುಲ್‌ನನ್ನು ಪೊಲೀಸರು ಬಂಧಿಸಿದ್ದರು. ಆದರೆ ಕೃತ್ಯ ಬೆಳಕಿಗೆ ಬಂದ ನಂತರ ತಲೆಮರೆಸಿಕೊಂಡಿದ್ದ ಇನ್ನುಳಿದ ಇಬ್ಬರು 10 ತಿಂಗಳ ಬಳಿಕ ಎಸ್.ಆರ್.ನಗರ ಠಾಣೆ ಪೊಲೀಸರು ಬಲೆಗೆ ಬಿದ್ದಿದ್ದಾರೆ.