ಪ್ರೇಯಸಿಯ ಕೊಂದು ಶವದ ಜತೆಗೆ ಇದ್ದ!

| Published : Nov 27 2024, 01:31 AM IST

ಸಾರಾಂಶ

ಅಪಾರ್ಟ್‌ಮೆಂಟ್‌ವೊಂದರ ಪ್ಲ್ಯಾಟ್‌ನಲ್ಲಿ ಪ್ರಿಯಕರನೇ ಪ್ರೇಯಸಿಯ ಎದೆಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಇಂದಿರಾನಗರದ 2ನೇ ಹಂತದ ದಿ ರಾಯಲ್‌ ಲಿವಿಂಗ್‌ ಅಪಾರ್ಟ್‌ಮೆಂಟ್‌ನ ಪ್ಲ್ಯಾಟ್‌ನಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಅಪಾರ್ಟ್‌ಮೆಂಟ್‌ವೊಂದರ ಪ್ಲ್ಯಾಟ್‌ನಲ್ಲಿ ಪ್ರಿಯಕರನೇ ಪ್ರೇಯಸಿಯ ಎದೆಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಇಂದಿರಾನಗರದ 2ನೇ ಹಂತದ ದಿ ರಾಯಲ್‌ ಲಿವಿಂಗ್‌ ಅಪಾರ್ಟ್‌ಮೆಂಟ್‌ನ ಪ್ಲ್ಯಾಟ್‌ನಲ್ಲಿ ನಡೆದಿದೆ.

ಅಸ್ಸಾಂ ಮೂಲದ ಮಾಯಾ ಗೋಗೋಯಿ(19) ಹತ್ಯೆಯಾದ ದುರ್ದೈವಿ. ಹತ್ಯೆ ಬಳಿಕ ಆರೋಪಿ ಕೇರಳ ಮೂಲದ ಆರವ್‌ ಅನಾಯ್‌(21) ಪರಾರಿಯಾಗಿದ್ದಾನೆ. ಈತನ ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.

ಏನಿದು ಘಟನೆ?:

ಹತ್ಯೆಯಾದ ಮಾಯಾ 1 ವರ್ಷದಿಂದ ನಗರದ ಎಚ್‌ಎಸ್‌ಆರ್‌ ಲೇಔಟ್‌ನ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಸ್ಥಳೀಯ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಆಪ್ತ ಸಮಾಲೋಚಕಿಯಾಗಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಪರಿಚಿತನಾಗಿದ್ದ ಕೇರಳದ ಕಣ್ಣೂರು ಮೂಲದ ಆರವ್‌ ಮತ್ತು ಮಾಯಾ ಪರಸ್ಪರ ಪ್ರೀತಿಸುತ್ತಿದ್ದರು ಎಂದು ತಿಳಿದು ಬಂದಿದೆ. ನ.23 ಬೆಂಗಳೂರಿಗೆ ಬಂದಿದ್ದ ಪ್ರಿಯಕರ ಆರವ್‌, ಮಾಯಾಳನ್ನು ಭೇಟಿಯಾಗಿದ್ದ. ಬಳಿಕ ಇಬ್ಬರು ಇಂದಿರಾನಗರದ 2ನೇ ಹಂತದ ದಿ ರಾಯಲ್ ಲಿವಿಂಗ್ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ವೊಂದನ್ನು ಬಾಡಿಗೆ ಪಡೆದಿದ್ದಾರೆ. ಮಧ್ಯಾಹ್ನ ಸುಮಾರು 12.30ಕ್ಕೆ ಇಬ್ಬರು ಪ್ಲ್ಯಾಟ್‌ಗೆ ತೆರಳಿದ್ದಾರೆ. ಬಳಿಕ ಇಬ್ಬರು ಪ್ಲ್ಯಾಟ್‌ಗೆ ಊಟ, ತಿಂಡಿ ತರಿಸಿಕೊಂಡಿದ್ದಾರೆ.

ಕೆಲಸಗಾರರು ನೋಡಿದಾಗ ಘಟನೆ ಬೆಳಕಿಗೆ:

ಆರೋಪಿ ಆರವ್‌ ನ.26 ಬೆಳಗ್ಗೆ 8.30ಕ್ಕೆ ಪ್ಲ್ಯಾಟ್‌ನಿಂದ ಹೊರಗೆ ಬಂದು ಕ್ಯಾಬ್‌ ಬುಕ್ ಮಾಡಿಕೊಂಡು ತೆರಳಿದ್ದಾನೆ. ಮಧ್ಯಾಹ್ನವಾದರೂ ಮಾಯಾ ಪ್ಲ್ಯಾಟ್‌ನಿಂದ ಹೊರಗೆ ಬಂದಿಲ್ಲ. ಊಟ, ತಿಂಡಿ ಸಹ ತರಿಸಿಕೊಂಡಿಲ್ಲ. ಇದರಿಂದ ಅನುಮಾನಗೊಂಡ ಅಪಾರ್ಟ್‌ಮೆಂಟ್‌ ಕೆಲಸಗಾರರು ಪ್ಲ್ಯಾಟ್‌ ಬಳಿ ತೆರಳಿ ಬಾಗಿಲು ಬಡಿದಿದ್ದಾರೆ. ಆದರೆ, ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮತ್ತಷ್ಟು ಅನುಮಾನಗೊಂಡು ಬಾಗಿಲು ಒಡೆದು ಒಳಗೆ ತೆರಳಿ ನೋಡಿದಾಗ, ಮಂಚದ ಮೇಲೆ ಮಾಯಾ ರಕ್ತದ ಮಡುವಿನಲ್ಲಿ ಕೊಲೆಯಾಗಿ ಬಿದ್ದಿರುವುದು ಕಂಡು ಬಂದಿದೆ. ಬಳಿಕ ಕೆಲಸಗಾರರು ಪೊಲೀಸ್‌ ಸಹಾಯವಾಣಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲಿಸಿದ್ದಾರೆ.

ಎದೆಗೆ ಚಾಕು ಇರಿದು ಹತ್ಯೆ:ಮಾಯಾ ಎದೆಗೆ ಚಾಕುವಿನಿಂದ ಹಲವು ಬಾರಿ ಇರಿದು ಭೀಕರವಾಗಿ ಕೊಲೆ ಮಾಡಿರುವುದು ಕಂಡು ಬಂದಿದೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಮಾಯಾ ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಬೆಳಗ್ಗೆ ಪ್ಲ್ಯಾಟ್‌ನಲ್ಲಿ ಮಾಯಾ ಜತೆಗಿದ್ದ ಪ್ರಿಯಕರ ಆರವ್‌ನೇ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಇಂದಿರಾನಗರ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

2 ದಿನ ಶವದ ಜತೆಗೆ ಇದ್ದ ಹಂತಕ:

ಮಾಯಾ ಮತ್ತು ಆಕೆಯ ಪ್ರಿಯಕರ ಆರವ್‌ ನ.23 ಮಧ್ಯಾಹ್ನ ಪ್ಲ್ಯಾಟ್‌ ಪ್ರವೇಶಿಸಿದ್ದಾರೆ. ನ.24ರ ಸಂಜೆಯಿಂದ ಇಬ್ಬರೂ ಹೊರಗೆ ಕಾಣಿಸಿಕೊಂಡಿಲ್ಲ. ಪ್ಲ್ಯಾಟ್‌ಗೆ ಊಟ, ತಿಂಡಿ ತರಿಸಿಕೊಂಡಿದ್ದಾರೆ. ಹೀಗಾಗಿ ಆರೋಪಿ ಆರವ್‌ ನ.24ರ ರಾತ್ರಿಯೇ ಮಾಯಾಳನ್ನು ಹತ್ಯೆ ಮಾಡಿರುವ ಸಾಧ್ಯತೆಯಿದೆ. ಬಳಿಕ 2 ದಿನಗಳ ಕಾಲ ಮೃತದೇಹದ ಜತೆಗೆ ಇದ್ದ ಆರೋಪಿಯು ಪ್ಲ್ಯಾಟ್‌ನಲ್ಲೇ ಮೃತದೇಹ ಬಿಟ್ಟು ನ.26ರಂದು ಬೆಳಗ್ಗೆ ಪರಾರಿಯಾಗಿರುವ ಸಾಧ್ಯತೆಯಿದೆ.ಆನ್‌ಲೈನ್‌ನಲ್ಲಿ ನೈಲಾನ್‌ ದಾರ ಆರ್ಡರ್‌:ಹತ್ಯೆಯ ಸ್ಥಳದಲ್ಲಿ ಚಾಕು, ಸಿಗರೇಟ್‌ ತುಂಡುಗಳು, 2 ಮಾರು ಉದ್ದದ ನೈಲಾನ್‌ ದಾರ ಪತ್ತೆಯಾಗಿದೆ. ಆರೋಪಿಯು ಆರವ್‌, ಆನ್‌ಲೈನ್‌ ಮುಖಾಂತರ ಈ ನೈಲಾನ್‌ ದಾರ ಆರ್ಡರ್‌ ಮಾಡಿ ತರಿಸಿಕೊಂಡಿರುವುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ. ಅಂದರೆ, ಆರೋಪಿಯು ಮಾಯಾಳನ್ನು ಹತ್ಯೆ ಮಾಡಲು ಯೋಜನೆ ರೂಪಿಸಿಕೊಂಡೇ ಬಂದಿದ್ದ. ಪೂರ್ವ ಯೋಜನೆಯಂತೆ ಮಾಯಾಳನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ಮಾಯಾಗೆ ರೀಲ್ಸ್‌ ಹುಚ್ಚು:

ಹತ್ಯೆಯಾದ ಮಾಯಾ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯವಾಗಿದ್ದರು. ಊಟ, ತಿಂಡಿ, ಸೌಂದರ್ಯದ ಬಗ್ಗೆ ರೀಲ್ಸ್‌ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡುತ್ತಿದ್ದರು. ಹೀಗಾಗಿ ಆರೋಪಿ ಆರವ್‌, ಸಾಮಾಜಿಕ ಜಾಲತಾಣದ ಮೂಲಕ ಮಾಯಾಗೆ ಪರಿಚಿತನಾಗಿ ಬಳಿಕ ಸ್ನೇಹ ಬೆಳೆದು ಪರಸ್ಪರ ಪ್ರೀತಿಸಲು ಆರಂಭಿಸಿದ್ದರು ಎನ್ನಲಾಗಿದೆ.-ಕೋಟ್-

ಅಸ್ಸಾಂ ಮೂಲದ ಯುವತಿಯ ಹತ್ಯೆಯಾಗಿದೆ. ಆಕೆಯ ಸ್ನೇಹಿತನೇ ಕೃತ್ಯ ಎಸೆಗಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದೆ- ಡಿ.ದೇವರಾಜ್, ಡಿಸಿಪಿ, ಪೂರ್ವವಿಭಾಗ