ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಸೇರಿ ಏಳು ಮಂದಿ ಆರೋಪಿಗಳ ಜಾಮೀನನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸುವಲ್ಲಿ ಹಾಗೂ ಪ್ರಕರಣ ಗಂಭೀರತೆ ಪಡೆಯುವಂತೆ ಮಾಡುವಲ್ಲಿ ಕೆಲ ಪೊಲೀಸ್‌ ಅಧಿಕಾರಿಗಳು ಹಾಗೂ ವಕೀಲರ ಪಾತ್ರ ಮಹತ್ವದ್ದಾಗಿದೆ.

ಬೆಂಗಳೂರು : ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಸೇರಿ ಏಳು ಮಂದಿ ಆರೋಪಿಗಳ ಜಾಮೀನನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸುವಲ್ಲಿ ಹಾಗೂ ಪ್ರಕರಣ ಗಂಭೀರತೆ ಪಡೆಯುವಂತೆ ಮಾಡುವಲ್ಲಿ ಕೆಲ ಪೊಲೀಸ್‌ ಅಧಿಕಾರಿಗಳು ಹಾಗೂ ವಕೀಲರ ಪಾತ್ರ ಮಹತ್ವದ್ದಾಗಿದೆ.

ರೇಣುಕಾಸ್ವಾಮಿ ಕೊಲೆ ನಡೆದ ಸಂದರ್ಭದಲ್ಲಿ ನಗರ ಪೊಲೀಸ್‌ ಆಯುಕ್ತರಾಗಿದ್ದ ಬಿ.ದಯಾನಂದ ಅವರು ಈ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿದ್ದರು. ಆರೋಪಿಗಳ ಬಂಧನ, ವಿಚಾರಣೆ, ದೋಷಾರೋಪ ಪಟ್ಟಿ ಸಲ್ಲಿಕೆಯಾಗುವವರೆಗೂ ಪ್ರಕರಣದ ಮೇಲ್ವಿಚಾರಣೆ ನಡೆಸಿದ್ದರು.

ಪ್ರಕರಣದ ತನಿಖಾಧಿಕಾರಿ ಎಸಿಪಿ ಚಂದನ್‌ ಕುಮಾರ್ ಅವರು ಡಿಸಿಪಿ ಎಸ್‌.ಗಿರೀಶ್‌ ಮಾರ್ಗದರ್ಶನದಲ್ಲಿ ಉತ್ತಮ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು. ಬಳಿಕ ಆರೋಪಿಗಳು ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋದಾಗ, ಪೊಲೀಸರ ಪರ ಸರ್ಕಾರಿ ವಿಶೇಷ ಅಭಿಯೋಜಕ ಪ್ರಸನ್ನ ಕುಮಾರ್‌ ಪ್ರಖರವಾದ ಮಂಡಿಸಿ, ಆರೋಪಿಗಳಿಗೆ ವಿಚಾರಣಾಧೀನ ನ್ಯಾಯಾಲಯದಲ್ಲಿ ಜಾಮೀನು ಸಿಗದಂತೆ ಮಾಡಿದ್ದರು. ಬಳಿಕ ಆರೋಪಿಗಳು ಹೈಕೋರ್ಟ್‌ನಲ್ಲಿ ಜಾಮೀನು ಪಡೆದುಕೊಂಡಿದ್ದರು.

ಪೊಲೀಸರು ಪ್ರಮುಖ ಆರೋಪಿ ನಟ ದರ್ಶನ್‌ ಸೇರಿ 7 ಆರೋಪಿಗಳ ಜಾಮೀನು ರದ್ದು ಕೋರಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ರಾಜ್ಯ ಸರ್ಕಾರದ ಪರ ಹಿರಿಯ ವಕೀಲ ಸಿದ್ಧಾರ್ಥ್‌ ಲೂತ್ರಾ ವಾದ ಮಂಡಿಸಿದ್ದರು. ಕೊಲೆ ಪ್ರಕರಣದಲ್ಲಿ ಆರೋಪಿಗಳ ಪಾತ್ರವನ್ನು ಸಾಕ್ಷ್ಯ ಸಮೇತ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದರು. ಪ್ರಮುಖ ಆರೋಪಿ ದರ್ಶನ್‌ ಎಷ್ಟು ಪ್ರಭಾವಿ ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಆರೋಪಿಗಳ ಜಾಮೀನು ರದ್ದು ಮಾಡುವಂತೆ ಮನವಿ ಮಾಡಿದ್ದರು. ಅಂತಿಮವಾಗಿ ಸುಪ್ರೀಂ ಕೋರ್ಟ್‌ ಏಳು ಆರೋಪಿಗಳ ಜಾಮೀನು ರದ್ದುಗೊಳಿಸಿದೆ.