ಮೆಟ್ರೋ ಕರ್ತವ್ಯ ವೇಳೆ ಮೃತಪಟ್ಟ ಸೆಕ್ಯೂರಿಟಿ ಗಾರ್ಡ್‌ಗೆ 5.8 ಲಕ್ಷ ಪರಿಹಾರ ನೀಡಿ: ಹೈಕೋರ್ಟ್ ನಿರ್ದೇಶನ

| Published : Aug 26 2025, 02:00 AM IST

ಮೆಟ್ರೋ ಕರ್ತವ್ಯ ವೇಳೆ ಮೃತಪಟ್ಟ ಸೆಕ್ಯೂರಿಟಿ ಗಾರ್ಡ್‌ಗೆ 5.8 ಲಕ್ಷ ಪರಿಹಾರ ನೀಡಿ: ಹೈಕೋರ್ಟ್ ನಿರ್ದೇಶನ
Share this Article
  • FB
  • TW
  • Linkdin
  • Email

ಸಾರಾಂಶ

ಮೆಜೆಸ್ಟಿಕ್‌ ಮೆಟ್ರೋ ನಿಲ್ದಾಣದ ಕಾಂಪೌಂಡ್‌ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ನಿರ್ಮಾಣ ಸಾಮಗ್ರಿಗಳನ್ನು ದರೋಡೆ ಮಾಡಲು ಬಂದಿದ್ದ ದುಷ್ಕರ್ಮಿಗಳ ಮಾರಣಾಂತಿಕ ಹಲ್ಲೆಯಿಂದ ಗಾಯಗೊಂಡು ಮೃತಪಟ್ಟ ಭದ್ರತಾ ಸಿಬ್ಬಂದಿಯ ಕುಟುಂಬದ ಕೈಹಿಡಿದು ಹೈಕೋರ್ಟ್‌ ಮಾನವೀಯತೆ ಮೆರೆದಿದೆ.

ವೆಂಕಟೇಶ್‌ ಕಲಿಪಿ

ಕನ್ನಡಪ್ರಭ ವಾರ್ತೆ ಬೆಂಗಳೂರು

ಮೆಜೆಸ್ಟಿಕ್‌ ಮೆಟ್ರೋ ನಿಲ್ದಾಣದ ಕಾಂಪೌಂಡ್‌ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ನಿರ್ಮಾಣ ಸಾಮಗ್ರಿಗಳನ್ನು ದರೋಡೆ ಮಾಡಲು ಬಂದಿದ್ದ ದುಷ್ಕರ್ಮಿಗಳ ಮಾರಣಾಂತಿಕ ಹಲ್ಲೆಯಿಂದ ಗಾಯಗೊಂಡು ಮೃತಪಟ್ಟ ಭದ್ರತಾ ಸಿಬ್ಬಂದಿಯ ಕುಟುಂಬದ ಕೈಹಿಡಿದು ಹೈಕೋರ್ಟ್‌ ಮಾನವೀಯತೆ ಮೆರೆದಿದೆ.

ಘಟನೆಯಿಂದ ಸಾವನ್ನಪ್ಪಿದ ಭದ್ರತಾ ಸಿಬ್ಬಂದಿಗೆ ಕೇವಲ 11 ಸಾವಿರ ರು. ಪರಿಹಾರ ಘೋಷಿಸಿ ನ್ಯಾಯಾಧೀಕರಣ ಹೊರಡಿಸಿದ ಆದೇಶವನ್ನು ಮಾರ್ಪಡಿಸಿರುವ ಹೈಕೋರ್ಟ್‌, ಮೃತನ ಕುಟುಂಬ ಸದಸ್ಯರಿಗೆ 2016ರಿಂದ ವಾರ್ಷಿಕ ಶೇ.12ರ ಬಡ್ಡಿ ದರದಲ್ಲಿ 5.88 ಲಕ್ಷ ರು. ಪರಿಹಾರ ಪಾವತಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಮತ್ತು ಮೃತ ನೌಕರನನ್ನು ಸೆಕ್ಯೂರಿಟಿ ಗಾರ್ಡ್‌ ಉದ್ಯೋಗಕ್ಕೆ ನೇಮಿಸಿಕೊಂಡಿದ್ದ ಕಂಪನಿಗಳಿಗೆ ನಿರ್ದೇಶಿಸಿದೆ.

ನ್ಯಾಯಾಧೀಕರಣದ ಆದೇಶ ಪ್ರಶ್ನಿಸಿ ಮೃತ ನೌಕರ ಚಿನ್ನಸ್ವಾಮಿಯ ಪತ್ನಿ ಲಕ್ಷ್ಮೀ, ಅಪ್ರಾಪ್ತರಾದ ಮೂವರು ಹೆಣ್ಣು ಮಕ್ಕಳು ಮತ್ತು ಓರ್ವ ಪುತ್ರ ಸಲ್ಲಿಸಿದ್ದ ಮೇಲ್ಮನವಿ ಪುರಸ್ಕರಿಸಿದ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರ ಪೀಠ, ನ್ಯಾಯಾಧೀಕರಣದ ಆದೇಶ ಮಾರ್ಪಡಿಸಿತು. ಪರಿಹಾರ ಮೊತ್ತವನ್ನು 11,576 ರು. ನಿಂದ 5,88,338 ರು.ಗೆ ಹೆಚ್ಚಿಸಿದೆ.

ಪ್ರಕರಣದ ವಿವರ

ಬಿಎಂಆರ್‌ಸಿಎಲ್‌ 2012ರಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ (ಮೆಜೆಸ್ಟಿಕ್‌) ಬಳಿಯ ಮೆಟ್ರೋ ನಿಲ್ದಾಣದ ಕಾಂಪೌಂಡ್‌ ಕಾಮಗಾರಿ ನಡೆಸುತ್ತಿತ್ತು. ಈ ಸ್ಥಳದಲ್ಲಿ ಬಿಎಂಆರ್‌ಸಿಲ್‌ ವಿಲೇವಾರಿ ಮಾಡಿದ್ದ ನಿರ್ಮಾಣ ಸಾಮಗ್ರಿ ದರೋಡೆಗೆ ಕೆಲ ದುಷ್ಕರ್ಮಿಗಳು 2012ರ ಜ. 20ರ ಸಂಜೆ 7 ಗಂಟೆಯಲ್ಲಿ ಮುಂದಾಗಿದ್ದರು. ದರೋಡೆ ತಡೆದ ಚಿನ್ನಸ್ವಾಮಿ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಪರಾರಿಯಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಚಿನ್ನಸ್ವಾಮಿ ಹಲ ದಿನಗಳ ಕಾಲ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆದಿದ್ದರು. ಆದರೆ, ಸಂಪೂರ್ಣವಾಗಿ ಗುಣಮುಖರಾಗಿರಲಿಲ್ಲ. ಅವರಿಗೆ ಬಹು ಅಂಗಗಳ ಸಮಸ್ಯೆ ಕಾಡಿತ್ತು. ಬೆನ್ನುಮೂಳೆ ಹಾನಿಯಾಗಿತ್ತು. ಅಂತಿಮವಾಗಿ 2026ರ ಅ.31ರಂದು ಚಿನ್ನಸ್ವಾಮಿ ಅಸುನೀಗಿದ್ದರು. ಬಳಿಕ ಪರಿಹಾರ ಕೋರಿ ಚಿನ್ನಸ್ವಾಮಿಯ ಪತ್ನಿ ಮತ್ತು ಮಕ್ಕಳು ಚಿನ್ನಸ್ವಾಮಿಯನ್ನು ಸೆಕ್ಯೂರಿಟಿ ಗಾರ್ಡ್‌ ಕೆಲಸಕ್ಕೆ ನೇಮಿಸಿದ್ದ ಕ್ಯಾನಾನ್‌ ಡಿಟೆಕ್ಟಿವ್‌ ಮತ್ತು ಸೆಕ್ಯೂರಿಟಿ ಸರ್ವೀಸ್‌, ಮೆರ್ಸಸ್‌ ಜಿಐಟಿ-ಕೋಸ್ಟಲ್‌ ಜೆವಿ ಸಂಸ್ಥೆ ಮತ್ತು ಬಿಎಂಆರ್‌ಸಿಎಲ್‌ ವಿರುದ್ಧ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ಪುರಸ್ಕರಿಸಿದ್ದ ನಗರದ ಎಸಿಎಂಎಂ ಮತ್ತು ಅಪಘಾತ ಪರಿಹಾರ ಕ್ಲೇಮು ನ್ಯಾಯಾಧೀಕರಣ (ಎಂಎಸಿಟಿ) ವಾರ್ಷಿಕ ಶೇ.12ರ ಬಡ್ಡಿದರದಲ್ಲಿ 11,576 ರು. ಪಾವತಿಗೆ ಕ್ಯಾನಾನ್‌ ಡಿಟೆಕ್ಟಿವ್‌ ಮತ್ತು ಸೆಕ್ಯೂರಿಟಿ ಸರ್ವೀಸ್‌ಗೆ ನಿರ್ದೇಶಿಸಿ 2019ರ ಜೂ.26ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಚಿನ್ನಸ್ವಾಮಿಯ ಪತ್ನಿ, ಮಕ್ಕಳು 2019ರಲ್ಲಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ನ್ಯಾಯಾಧೀಕರಣ ಆದೇಶ ಸರಿಯಿಲ್ಲ

ಅದರ ವಿಚಾರಣೆ ನಡೆಸಿದ ಹೈಕೋರ್ಟ್‌, ಚಿನ್ನಸ್ವಾಮಿ ಉದ್ಯೋಗ ನಿರ್ವಹಣೆ ವೇಳೆ ಸಂಭವಿಸಿದ ಗಾಯಗಳಿಂದ ಸಾವನ್ನಪ್ಪಿದ್ದಾನೆ ಎಂದು ದೃಢಪಡಿಸುವ ದಾಖಲೆಗಳನ್ನು ಕ್ಲೇಮುದಾರರು ಒದಗಿಸಿಲ್ಲ. ಹೀಗಾಗಿ, ಕೇವಲ 11,576 ರು. ಪರಿಹಾರ ಪಡೆಯಲು ಅರ್ಹರಿದ್ದಾರೆ ಎಂದು ನ್ಯಾಯಾಧೀಕರಣ ಹೇಳಿರುವುದು ಸರಿಯಿಲ್ಲ. ಹಲ್ಲೆಯಿಂದ ಚಿನ್ನಸ್ವಾಮಿ ಕ್ವಾಡ್ರಿಪ್ಲೆಜಿಯಾ ಮತ್ತು ದೇಹದ 4 ಅಂಗಗಳ ದುರ್ಬಲತೆ ಸೇರಿ ಇತರೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಒಳಗಾಗಿದ್ದರು. ಪರಿಣಾಮಕಾರಿಯಾಗಿ ಚೇತರಿಸಿಕೊಳ್ಳಲಾಗದೆ 2016ರ ಅ.31ರಂದು ಆತ ಸಾವನ್ನಪ್ಪಿದ್ದು, ಪರಿಹಾರ ಪಡೆಯಲು ಆತನ ಕುಟುಂಬದವರು ಅರ್ಹರಾಗಿದ್ದಾರೆ ಎಂದು ಪೀಠ ಹೇಳಿದೆ.

ಇನ್ನೂ ಉದ್ಯೋಗ ನಿರ್ವಹಣೆ ವೇಳೆ ಚಿನ್ನಸ್ವಾಮಿ ಮಾಸಿಕ 7,500 ರು. ವೇತನ ಪಡೆಯುತ್ತಿದ್ದರು. ಅದರಲ್ಲಿ ಶೇ.50ರಷ್ಟು ಭಾಗ ಅಂದರೆ 3750 ರು. ಅನ್ನು ಸಂಬಂಧಿಸಿದ ಅಂಶಗಳೊಂದಿಗೆ ಗುಣಿಸಿದಾಗ ಬರುವ ಪರಿಹಾರ ಪಡೆಯಬಹುದು. ಸಾವನ್ನಪ್ಪಿದಾಗ ಚಿನ್ನಸ್ವಾಮಿಗೆ 49 ವರ್ಷವಾಗಿತ್ತು. ಅಂದರೆ ನಿವೃತ್ತಿ ವಯಸ್ಸು ಪರಿಗಣಿಸಿದರೆ ಬಾಕಿ ಸೇವಾವಧಿಯ 13 ವರ್ಷಗಳಿಗೆ (156 ತಿಂಗಳಿಗೆ 3,750 ರು.ಗುಣಿಸಿದಾಗ) ಒಟ್ಟು 5,86,762.50 ರು. ಪರಿಹಾರ ಪಾವತಿಸಬೇಕಾಗುತ್ತದೆ. 1,576 ರು. ಅನ್ನು ವೈದ್ಯಕೀಯ ವೆಚ್ಚವಾಗಿ ಕ್ಲೇಮು ಮಾಡಲಾಗಿದೆ. ಇದರಿಂದ ಒಟ್ಟು 5,88,7662.50 ರು. ಪರಿಹಾರ ಪಡೆಯಲು ಮೃತನ ನೌಕರನ ಕುಟುಂಬದವರು ಅರ್ಹರಾಗಿದ್ದಾರೆ ಎಂದು ನ್ಯಾಯಪೀಠ ಹೇಳಿದೆ.

ಅದರಂತೆ ಈ ಮೊತ್ತವನ್ನು ಶೇ.12ರ ಬಡ್ಡಿ ದರದಲ್ಲಿ ಚಿನ್ನಸ್ವಾಮಿ ಸಾವನ್ನಪ್ಪಿದ ದಿನಾಂಕದಿಂದ ಪಾವತಿಸಬೇಕು. ಬಿಎಂಆರ್‌ಸಿಎಲ್‌, ಕ್ಯಾನಾನ್‌ ಮತ್ತು ಕೋಸ್ಟಲ್‌ ಕಂಪನಿಗಳು ಜಂಟಿ ಮತ್ತು ಪ್ರತ್ಯೇಕವಾಗಿ ಪರಿಹಾರ ಪಾವತಿಸಲು ಹೊಣೆಯಾಗಿವೆ ಎಂದು ಪೀಠ ಆದೇಶಿಸಿದೆ.