ನಗರದ ಸೌಂದರ್ಯಕ್ಕೆ ಧಕ್ಕೆ ತಂದ ಆರೋಪದಡಿ ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ಎಂಎಲ್‌ಸಿ ಸಿ.ಟಿ.ರವಿ ಮತ್ತಿತರ ಬಿಜೆಪಿ ನಾಯಕರ ವಿರುದ್ಧದ ತನಿಖೆಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

 ಬೆಂಗಳೂರು : ಸಚಿವ ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಆಗ್ರಹಿಸಿ ರಸ್ತೆಯಲ್ಲಿ ಪ್ರತಿಭಟನೆ ನಡೆಸಿ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸಿದ ಮತ್ತು ಸೂಸೈಡ್‌ ಮತ್ತು ಸುಪಾರಿ ಭಾಗ್ಯ ನೀಡಿದ ಕಾಂಗ್ರೆಸ್‌ ಸರ್ಕಾರಕ್ಕೆ ಧಿಕ್ಕಾರ ಎಂದು ಬರೆದಿರುವ ಪೋಸ್ಟರ್‌ಗಳನ್ನು ಸಾರ್ವಜನಿಕ ಶೌಚಾಲಯದ ಗೋಡೆಗೆ ಅಂಟಿಸಿ ನಗರದ ಸೌಂದರ್ಯಕ್ಕೆ ಧಕ್ಕೆ ತಂದ ಆರೋಪದಡಿ ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ಎಂಎಲ್‌ಸಿ ಸಿ.ಟಿ.ರವಿ ಮತ್ತಿತರ ಬಿಜೆಪಿ ನಾಯಕರ ವಿರುದ್ಧದ ತನಿಖೆಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧ ಹೈಗ್ರೌಂಡ್ಸ್‌ ಠಾಣಾ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ ಮತ್ತು ನಗರದ 42ನೇ ಎಸಿಜೆಎಂ ಕೋರ್ಟ್‌ (ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ) ವಿಚಾರಣೆ ರದ್ದುಪಡಿಸುವಂತೆ ಕೋರಿ ಬಿಜೆಪಿ ಮುಖಂಡರಾದ ಛಲವಾದಿ ನಾರಾಯಣಸ್ವಾಮಿ, ಸಿ.ಟಿ. ರವಿ, ರವಿಕುಮಾರ್‌ ಮತ್ತು ಉಮೇಶ್‌ ಶೆಟ್ಟಿ ಸೇರಿದಂತೆ 12 ಮಂದಿ ಹೈಕೋರ್ಟ್‌ಗೆ ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಆರ್‌.ಕೃಷ್ಣ ಕುಮಾರ್‌ ಅವರ ನ್ಯಾಯಪೀಠ, ಅರ್ಜಿದಾರರ ವಿರುದ್ಧದ ತನಿಖೆಗೆ ತಡೆಯಾಜ್ಞೆ ನೀಡಿತು. ಅಲ್ಲದೆ, ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ ಹೈಗ್ರೌಂಡ್ಸ್‌ ಠಾಣಾ ಪೊಲೀಸರಿಗೆ ನೋಟಿಸ್‌ ನೀಡಿ ವಿಚಾರಣೆ ಮುಂದೂಡಿತು.

‘ಸಚಿವ ಪ್ರಿಯಾಂಕ್‌ ಖರ್ಗೆ ರಾಜೀನಾಮೆ ನೀಡಬೇಕು’ ಎಂದು ಘೋಷಣೆ ಕೂಗುತ್ತಾ 2024ರ ಡಿ.31ರಂದು ಬೆಳಗ್ಗೆ 10 ಗಂಟೆಗೆ ಮಾಧವನಗರ ಜಂಕ್ಷನ್‌ ಬಳಿಕೆ ಛಲವಾದಿ ನಾರಾಯಣ ಸ್ವಾಮಿ ನೇತೃತ್ವದಲ್ಲಿ ಬಿಜೆಪಿ ನಾಯಕರು ಮತ್ತು ಕಾಯರ್ತಕರ್ತರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ರಸ್ತೆಯಲ್ಲಿ ಗುಂಪುಗೂಡಿ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ. ಮಾಧವ ನಗರ ಜಂಕ್ಷನ್‌ನಲ್ಲಿ ಸಾರ್ವಜನಿಕ ಶೌಚಾಲಯ ಗೋಡೆಗೆ ‘ಸೂಸೈಡ್‌ ಮತ್ತು ಸುಪಾರಿ ಭಾಗ್ಯ ನೀಡಿದ ಕಾಂಗ್ರೆಸ್‌ ಸರ್ಕಾರಕ್ಕೆ ಧಿಕ್ಕಾರ’ ಎಂದು ಬರೆದಿರುವ ಪೋಸ್ಟರ್‌ಗಳನ್ನು ಅನಧಿಕೃತವಾಗಿ ಅಂಟಿಸಿ ನಗರದ ಸೌಂಧರ್ಯಕ್ಕೆ ಧಕ್ಕೆ ತಂದ ಆರೋಪದ ಮೇಲೆ ಹೈಗ್ರೌಂಡ್ಸ್‌ ಠಾಣಾ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು.

ಈ ಎಫ್‌ಐಆರ್‌ ರದ್ದು ಕೋರಿ ಅರ್ಜಿದಾರರು ಹೈಕೋರ್ಟ್‌ ಮೋರೆ ಹೋಗಿದ್ದಾರೆ. ಅರ್ಜಿದಾರರ ಪರ ವಕೀಲ ಎಂ.ವಿನೋದ್‌ ಕುಮಾರ್‌ ವಾದ ಮಂಡಿಸಿದರು.