ಸಾರಾಂಶ
ಆಟೋಗೆ ಬೈಕ್ ಗುದ್ದಿಸಿ ಬಳಿಕ ಪರಾರಿ ಆಗಿದ್ದ ಬೈಕ್ ಸವಾರನನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರಿಗೆ ಯಾವುದೇ ಸುಳಿವು ಇರಲಿಲ್ಲ. 70 ಸಿಸಿ ಕ್ಯಾಮೆರಾ ದೃಶ್ಯಾವಳಿ ಶೋಧಿಸಿ ಸೆರೆ ಹಿಡಿದಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಹಿಟ್ ಆ್ಯಂಡ್ ರನ್ ಅಪಘಾತ ಪ್ರಕರಣದಲ್ಲಿ ಪರಾರಿಯಾಗಿದ್ದ ದ್ವಿಚಕ್ರ ವಾಹನ ಸವಾರನನ್ನು ಬಸವನಗುಡಿ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಬಸವನಗುಡಿಯ ವೇಣು(25) ಬಂಧಿತ ದ್ವಿಚಕ್ರ ವಾಹನ ಸವಾರ. ಫೆ.12ರಂದು ಮುಂಜಾನೆ 2.45ರ ಸಮಾರಿಗೆ ಹನುಮಂತನಗರದ 1ನೇ ಮುಖ್ಯರಸ್ತೆ ಗವಿಪುರ ಎಕ್ಸ್‌ಟೆನ್ಷನ್ ಅಂಚೆ ಕಚೇರಿ ಬಳಿ ಆಟೋರಿಕ್ಷಾಗೆ ದ್ವಿಚಕ್ರ ವಾಹನ ಡಿಕ್ಕಿಯಾಗಿತ್ತು. ಈ ವೇಳೆ ಆಟೋ ಚಾಲಕ ರಮೇಶ್(48) ಮೇಲೆ ಆಟೋರಿಕ್ಷಾ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಸ್ಥಳೀಯರು ಗಾಯಾಳು ಆಟೋ ಚಾಲಕನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಗಂಭೀರ ಗಾಯಗಳಾಗಿ ತೀವ್ರರಕ್ತಸ್ರಾವವಾಗಿದ್ದ ಪರಿಣಾಮ ಚಿಕಿತ್ಸೆ ಫಲಿಸದೆ ರಮೇಶ್ ಮೃತಪಟ್ಟಿದ್ದರು.
ಅಪಘಾತ ಎಸೆಗಿದ ದ್ವಿಚಕ್ರ ವಾಹನ ಸವಾರ ವೇಣು ಘಟನೆ ಬಳಿಕ ದ್ವಿಚಕ್ರ ವಾಹನ ಸಹಿತ ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಬಸವನಗುಡಿ ಸಂಚಾರ ಠಾಣೆ ಪೊಲೀಸರಿಗೆ ಅಪಘಾತ ಎಸೆಗಿದ ದ್ವಿಚಕ್ರ ವಾಹನ ಮತ್ತು ಅದರ ಸವಾರನ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಬಳಿಕ ಘಟನಾ ಸ್ಥಳದ ಸುತ್ತಮುತ್ತಲ ಸುಮಾರು 70ಕ್ಕೂ ಅಧಿಕ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಸಂಗ್ರಹಿಸಿ ಪರಿಶೀಲಿಸಿದಾಗ ಒಂದು ಸಿಸಿಟಿವಿ ಕ್ಯಾಮೆರಾದಲ್ಲಿ ದ್ವಿಚಕ್ರ ವಾಹನ ಸವಾರನ ಸುಳಿವು ಸಿಕ್ಕಿದೆ. ಈ ಸುಳಿವು ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.