ಪ್ರಥಮ ಬಾರಿಗೆ ಏ.11ರಂದು ಗೃಹ ರಕ್ಷಕ ದಳದ ಕವಾಯತ್‌

| Published : Apr 06 2025, 01:47 AM IST

ಸಾರಾಂಶ

ಪ್ರಥಮ ಬಾರಿಗೆ ನಗರ ಪೊಲೀಸ್ ಕಮೀಷನರ್‌ ಘಟಕದ ಗೃಹ ರಕ್ಷಕ ದಳ ಸಿಬ್ಬಂದಿಯಿಂದ ಕವಾಯತ್‌ (ಪರೇಡ್‌) ಅನ್ನು ನಗರ ಸಶಸ್ತ್ರ ಪಡೆ (ಸಿಎಆರ್‌) ಆಯೋಜಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪ್ರಥಮ ಬಾರಿಗೆ ನಗರ ಪೊಲೀಸ್ ಕಮೀಷನರ್‌ ಘಟಕದ ಗೃಹ ರಕ್ಷಕ ದಳ ಸಿಬ್ಬಂದಿಯಿಂದ ಕವಾಯತ್‌ (ಪರೇಡ್‌) ಅನ್ನು ನಗರ ಸಶಸ್ತ್ರ ಪಡೆ (ಸಿಎಆರ್‌) ಆಯೋಜಿಸಿದೆ.

ಮೈಸೂರು ರಸ್ತೆಯ ಸಿಎಆರ್ ಮೈದಾನದಲ್ಲಿ ಏ.11 ರಂದು ಸಿಎಆರ್‌ (ಕೇಂದ್ರ) ಡಿಸಿಪಿ ಡಿ.ಎಲ್.ನಾಗೇಶ್ ಸಾರಥ್ಯದಲ್ಲಿ ಗೃಹ ರಕ್ಷಕ ದಳದ ಕವಾಯತು ನಡೆಯಲಿದ್ದು, ಆಯುಕ್ತ ಬಿ.ದಯಾನಂದ್ ಅವರು ಗೌರವ ವಂದನೆ ಸ್ವೀಕರಿಸಲಿದ್ದಾರೆ.

ನಗರದಲ್ಲಿ ಸುಮಾರು 2 ಸಾವಿರ ಗೃಹ ರಕ್ಷಕ ದಳ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಿಎಆರ್ ಡಿಸಿಪಿ ನಾಗೇಶ್ ನೇತೃತ್ವದಲ್ಲಿ 300ಕ್ಕೂ ಅಧಿಕ ಗೃಹ ರಕ್ಷಕರು ಕವಾಯತ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜಂಟಿ ಪೊಲೀಸ್ ಆಯುಕ್ತ (ಆಡಳಿತ) ಕುಲದೀಪ್ ಕುಮಾರ್ .ಆರ್‌.ಜೈನ್ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

ತಮ್ಮ ಘಟಕದ ಅಧಿಕಾರಿ-ಸಿಬ್ಬಂದಿ ಅಹವಾಲು ಆಲಿಸಲು ಹಾಗೂ ಉತ್ತಮ ಕೆಲಸ ಮಾಡಿದವರಿಗೆ ಅಭಿನಂದಿಸುವ ಸಲುವಾಗಿ ಪ್ರತಿ ತಿಂಗಳ ಎರಡನೇ ಶುಕ್ರವಾರ ನಗರ ಪೊಲೀಸ್ ಆಯುಕ್ತರು ಕವಾಯತ್ ನಡೆಸುತ್ತಿದ್ದಾರೆ. ಈ ಮಾಸಿಕ ಕವಾಯತ್‌ನಲ್ಲಿ ನಗರದ ಒಂದೊಂದು ವಿಭಾಗದ ಡಿಸಿಪಿ ಸಾರಥ್ಯದಲ್ಲಿ ನಡೆಯುತ್ತಿದ್ದು, ಈ ಬಾರಿ ಗೃಹ ರಕ್ಷಕರಿಗೆ ಅವಕಾಶ ಸಿಕ್ಕಿದೆ. ಈವರೆಗೆ ಸ್ವಾತಂತ್ರ್ಯೋತ್ಸವ ಹಾಗೂ ಗಣರಾಜ್ಯೋತ್ಸವಗಳ ಕವಾಯತ್‌ನಲ್ಲಿ ಗೃಹ ರಕ್ಷಕ ದಳ ಸಿಬ್ಬಂದಿ ಭಾಗವಹಿಸುತ್ತಿದ್ದರು. ಆದರೆ ತಾವೇ ಪ್ರತ್ಯೇಕವಾಗಿ ಅ‍ವರು ಕವಾಯತ್‌ ನಡೆಸಿರಲಿಲ್ಲ. ಈಗ ಸಿವಿಲ್‌ ಹಾಗೂ ಸಶಸ್ತ್ರ ಮೀಸಲು ಪಡೆಯ ಪೊಲೀಸರಂತೆ ಗೃಹ ರಕ್ಷಕ ದಳಕ್ಕೆ ಕವಾಯತ್ ನಡೆಸಲು ಆಯುಕ್ತ ದಯಾನಂದ್ ಅವಕಾಶ ನೀಡಿದ್ದಾರೆ. ...ಬಾಕ್ಸ್‌...

ಕೆಲ ಸೂಚನೆಗಳು ಮಾರ್ಪಾಡು:

ಮೊದಲ ಬಾರಿಗೆ ಗೃಹ ರಕ್ಷಕ ದಳದ ಕವಾಯತ್‌ ನಡೆಯಲಿದ್ದು, ಇದಕ್ಕೆ ಕೆಲ ಕವಾಯತ್‌ನ ಸೂಚನೆಗಳನ್ನು ಅಧಿಕಾರಿಗಳು ಮಾರ್ಪಾಡು ಮಾಡಿದ್ದಾರೆ. ಸಿವಿಲ್ ಹಾಗೂ ಸಶಸ್ತ್ರ ಮೀಸಲು ಪಡೆ ಪೊಲೀಸರ ಹಾಗೂ ಗೃಹ ರಕ್ಷಕ ದಳದ ಕವಾಯತಿಗೆ ನಿಯಾನುಸಾರ ವ್ಯತ್ಯಾಸಗಳಿವೆ. ಹೀಗಾಗಿ ಕೆಲ ಬದಲಾವಣೆ ಅನಿರ್ವಾಯವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗೃಹ ರಕ್ಷಕ ಸಿಬ್ಬಂದಿ ಸಮಸ್ಯೆಗಳನ್ನು ಕೇಳಲು ಮಾತ್ರವಲ್ಲ ಅವರಿಗೆ ಪ್ರೋತ್ಸಾಹಿಸುವ ಸಲುವಾಗಿ ಕವಾಯತ್‌ ನಡೆಸಲಾಗುತ್ತಿದೆ. ಇದೇ ಮೊದಲ ಬಾರಿಗೆ ಗೃಹ ರಕ್ಷಕರು ಕವಾಯತ್ ನಡೆಸುತ್ತಿರುವ ಕಾರಣ ಕುತೂಹಲವೂ ಇದೆ.

- ಬಿ.ದಯಾನಂದ್, ಪೊಲೀಸ್ ಆಯುಕ್ತ, ಬೆಂಗಳೂರು