ತವರು ಸೇರಿದ ಸೊಸೆ: ನೊಂದು ಅತ್ತೆ-ಮಾವ ನೇಣಿಗೆ

| Published : Jul 03 2024, 12:19 AM IST

ಸಾರಾಂಶ

ಸೊಸೆ ತವರು ಮನೆ ಸೇರಿದಳು ಎಂಬ ಕಾರಣಕ್ಕೆ ಮನನೊಂದು ಅತ್ತೆ-ಮಾವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮದುವೆಯಾದ ಮೂರೇ ತಿಂಗಳಿಗೆ ಪತಿ ತೊರೆದು ಸೊಸೆ ತವರು ಮನೆ ಸೇರಿದಳು ಎಂಬ ಕಾರಣಕ್ಕೆ ಮನನೊಂದು ಅತ್ತೆ-ಮಾವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೈಯಪ್ಪನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬೈಯಪ್ಪನಹಳ್ಳಿ ನಿವಾಸಿಗಳಾದ ಚಂದ್ರಶೇಖರ್‌(54) ಮತ್ತು ಶಾರದಾ(45) ಆತ್ಮಹತ್ಯೆಗೆ ಶರಣಾದ ದಂಪತಿ. ಸೋಮವಾರ ಸಂಜೆ ಸುಮಾರು 6.30ಕ್ಕೆ ಈ ಘಟನೆ ನಡೆದಿದೆ. ಅಂಗಡಿಗೆ ತೆರಳಿದ್ದ ಕಿರಿಯ ಮಗ ವಾಪಸ್‌ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?:

ಮೃತ ಚಂದ್ರಶೇಖರ್‌ ಮತ್ತು ಶಾರದಾ ದಂಪತಿಗೆ ಇಬ್ಬರು ಗಂಡು ಮಕ್ಕಳು. ಹಿರಿಯ ಮಗ ಪ್ರಶಾಂತ್‌ಗೆ ಮೂರು ತಿಂಗಳ ಹಿಂದೆಯಷ್ಟೇ ಕೆ.ಆರ್‌.ಪುರದ ದೀಕ್ಷಾ ಎಂಬಾಕೆ ಜತೆಗೆ ಮದುವೆ ಮಾಡಿದ್ದರು. ಮಗ-ಸೊಸೆ ನಡುವೆ ಹೊಂದಾಣಿಕೆ ಬಾರದ ಹಿನ್ನೆಲೆಯಲ್ಲಿ ಸಣ್ಣಪುಟ್ಟ ವಿಚಾರಕ್ಕೆ ಮನೆಯಲ್ಲಿ ಗಲಾಟೆಗಳು ನಡೆಯುತ್ತಿದ್ದವು. ಇತ್ತೀಚೆಗೆ ಸೊಸೆ ದೀಕ್ಷಾ ಪತಿಯನ್ನು ತೊರೆದು ತವರು ಮನೆ ಸೇರಿದ್ದಳು. ರಾಜಿಸಂಧಾನ ಮಾಡಿದರೂ ಸೊಸೆ ಮನೆಗೆ ಬರಲು ನಿರಾಕರಿಸಿದ್ದಳು.

ಸೊಸೆ ತವರು ಸೇರಿದ್ದಕ್ಕೆ ನೊಂದಿದ್ದ ದಂಪತಿ:

ಮದುವೆಯಾದ ಮೂರು ತಿಂಗಳಿಗೆ ಸೊಸೆ ತವರು ಮನೆ ಸೇರಿದ್ದರಿಂದ ಚಂದ್ರಶೇಖರ್‌ ದಂಪತಿ ನೊಂದಿದ್ದರು. ಸಂಬಂಧಿಕರು, ಸ್ನೇಹಿತರ ಎದುರು ಮರ್ಯಾದೆ ಹೋಯಿತು ಎಂದು ಕೊರುಗುತ್ತಿದ್ದರು ಎನ್ನಲಾಗಿದೆ. ಸೋಮವಾರ ಸಂಜೆ ಕಿರಿಯ ಮಗನನ್ನು ಅಂಗಡಿಗೆ ಹೋಗುವಂತೆ ದಂಪತಿ ಕಳುಹಿಸಿದ್ದರು. ಬಳಿಕ ರೂಮ್‌ ಬಾಗಿಲನ್ನು ಲಾಕ್‌ ಮಾಡಿ ಫ್ಯಾನಿಗೆ ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕಿರಿಯ ಮಗ ಮನೆಗೆ ಬಂದಾಗ ಘಟನೆ ಬೆಳಕಿಗೆ

ಇನ್ನು ಅಂಗಡಿಯಿಂದ ಕಿರಿಯ ಮಗ ಮನೆಗೆ ವಾಪಾಸ್‌ ಬಂದಾಗ, ಮನೆಯಲ್ಲಿ ತಂದೆ-ತಾಯಿ ಇಲ್ಲದಿರುವುದು ಕಂಡು ಬಂದಿದೆ. ರೂಮ್‌ ಬಳಿ ತೆರಳಿ ನೋಡಿದಾಗ ಬಾಗಿಲು ಹಾಕಿರುವುದು ಕಂಡು ಬಂದಿದ್ದು, ಹಲವು ಬಾರಿ ಬಾಗಿಲು ಬಡಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದರಿಂದ ಗಾಬರಿಗೊಂಡ ಕಿರಿಯ ಮಗ, ಮನೆಯ ಸಮೀಪದಲ್ಲೇ ಇದ್ದ ಸಂಬಂಧಿಕರ ಮನೆಗೆ ತೆರಳಿ ಅವರನ್ನು ಕರೆದುಕೊಂಡು ಬಂದಿದ್ದಾನೆ. ಬಳಿಕ ಸಂಬಂಧಿಕರು ರೂಮ್‌ನ ಬಾಗಿಲು ಮುರಿದು ನೋಡಿದಾಗ ಚಂದ್ರಶೇಖರ್‌ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ವಿಷಯ ತಿಳಿದು ಸ್ಥಳಕ್ಕೆ ತೆರಳಿ ಪರೀಶೀಲನೆ ಮಾಡಿದ ಪೊಲೀಸರು ಬಳಿಕ ಮೃತದೇಹಗಳನ್ನು ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ಮಾಡಿಸಿ ವಾರಸುದಾರರಿಗೆ ಒಪ್ಪಿಸಿದ್ದಾರೆ. ದಂಪತಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸೊಸೆ ತವರು ಮನೆ ಸೇರಿದ್ದರಿಂದ ಮಾನಸಿಕವಾಗಿ ನೊಂದಿದ್ದರು ಎಂದು ತಿಳಿದು ಬಂದಿದೆ. ಈ ಸಂಬಂಧ ಬೈಯಪ್ಪನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.