ಪತಿಯಿಂದ ದೂರವಾಗಿದ್ದವಳಿಂದ ತನ್ನ ಇಬ್ಬರು ಸಹಚರರೊಂದಿಗೆ ಸೇರಿ ಹನಿಟ್ರ್ಯಾಪ್‌ ದಂಧೆ: ಮೂವರ ಸೆರೆ

| Published : Aug 15 2024, 01:53 AM IST / Updated: Aug 15 2024, 03:34 AM IST

ಸಾರಾಂಶ

ಗಂಡನಿಂದ ದೂರವಾಗಿದ್ದ ಮಹಿಳೆ ತನ್ನ ಇಬ್ಬರು ಸಹಚರರೊಂದಿಗೆ ಸೇರಿ ಹನಿಟ್ರ್ಯಾಪ್ ದಂಧೆ ನಡೆಸುತ್ತಿದ್ದು, ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು :  ತಮ್ಮ ಮೋಹದ ಬಲೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪುರುಷರನ್ನು ಸೆಳೆದು ಹಣ ಸುಲಿಗೆ ಮಾಡುತ್ತಿದ್ದ ಹನಿಟ್ರ್ಯಾಪ್ ಗ್ಯಾಂಗ್‌ವೊಂದನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.

ಅಗ್ರಹಾರ ಬಡಾವಣೆಯ ನಜ್ಮಾ ಕೌಸರ್‌, ಆಕೆಯ ಸಹಚರರಾದ ಖಲೀಲ್ ಹಾಗೂ ಅತೀಕ್ ಬಂಧಿತರಾಗಿದ್ದು, ಆರೋಪಿಗಳಿಂದ ಮೊಬೈಲ್‌ಗಳು ಜಪ್ತಿಯಾಗಿವೆ. ತಪ್ಪಿಸಿಕೊಂಡಿರುವ ಮತ್ತೊಬ್ಬ ಆರೋಪಿಗೆ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ. ಕೆಲ ದಿನಗಳ ಹಿಂದೆ ಡೆಲಿವರಿ ಬಾಯ್‌ನನ್ನು ಫೇಸ್‌ಬುಕ್‌ನಲ್ಲಿ ಪರಿಚಯ ಮಾಡಿಕೊಂಡು ಬಳಿಕ ಮನೆಗೆ ಕರೆಸಿಕೊಂಡು ನಜ್ಮಾ ಸುಲಿಗೆ ಮಾಡಿದ್ದಳು. ಈ ಕೃತ್ಯದ ಬಗ್ಗೆ ಸಂತ್ರಸ್ತ ನೀಡಿದ ದೂರಿನ ಮೇರೆಗೆ ತನಿಖೆಗಿಳಿದ ಪೊಲೀಸರು, ನಜ್ಮಾ ಹಾಗೂ ಆಕೆಯ ಗ್ಯಾಂಗನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.

ಮೋಹಕ ಮಾತುಕತೆಯೇ ಉರುಳು:  ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿಯಿಂದ ಪ್ರತ್ಯೇಕವಾಗಿದ್ದ ನಜ್ಮಾ, ತನ್ನ ಇಬ್ಬರು ಮಕ್ಕಳ ಜತೆ ನೆಲೆಸಿದ್ದಳು. ಸುಲಭವಾಗಿ ಹಣ ಅಡ್ಡದಾರಿ ತುಳಿದಿದ್ದ ನಜ್ಮಾ, ತನ್ನ ಮನೆಯನ್ನೇ ಅಕ್ರಮ ಚಟುವಟಿಕೆಗಳಿಗೆ ಅಡ್ಡೆ ಮಾಡಿಕೊಂಡಿದ್ದಳು. ಹಣದಾಸೆಗೆ ಆಕೆಯ ಚಟುವಟಿಕೆಗಳಿಗೆ ಖಲೀಲ್ ಹಾಗೂ ಅತೀಕ್ ಸಾಥ್ ಕೊಟ್ಟಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತ ಪುರುಷರನ್ನು ನಜ್ಮಾ ಪರಿಚಯ ಮಾಡಿಕೊಳ್ಳುತ್ತಿದ್ದಳು. ತನ್ನ ಬಲೆಗೆ ಬೀಳುವ ಜನರ ಜತೆ ಚಾಟಿಂಗ್ ಮಾಡಿ ಬಳಿಕ ಮೊಬೈಲ್ ಸಂಖ್ಯೆ ಪಡೆಯುತ್ತಿದ್ದಳು. ಹೀಗೆ ಆಕೆಯ ಮೋಹಕ ಮಾತುಕತೆಗೆ ಮರುಳಾದ ಜನರಿಗೆ ಲೈಂಗಿಕತೆಗೆ ಆಕೆ ಪ್ರಚೋದಿಸುತ್ತಿದ್ದಳು. ಕೊನೆಗೆ ಏಕಾಂತ ಭೇಟಿಗೆ ತನ್ನ ಮನೆಗೆ ನಜ್ಮಾ ಆಹ್ವಾನಿಸುತ್ತಿದ್ದಳು. ಈ ಆಹ್ವಾನ ಮೇರೆಗೆ ಮನೆಗೆ ಬಂದ ಅತಿಥಿಗಳಿಗೆ ತನ್ನ ಸಹಚರರ ಮೂಲಕ ಅತ್ಯಾಚಾರ ಕೇಸ್ ದಾಖಲಿಸುವುದಾಗಿ ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಅದೇ ರೀತಿ ಕೆಲ ದಿನಗಳ ಹಿಂದೆ ಫೇಸ್‌ ಬುಕ್‌ನಲ್ಲಿ ಆಕೆಗೆ ಡೆಲವರಿ ಬಾಯ್‌ ಸ್ನೇಹವಾಗಿತ್ತು. ಆಗ ಆತನಿಗೆ ಸೆಕ್ಸ್ ಬಗ್ಗೆ ಮಾತನಾಡಲು ಮನೆಗೆ ಬರುವಂತೆ ನಜ್ಮಾ ಹೇಳಿದ್ದಳು. ಈ ಆಹ್ವಾನಕ್ಕೆ ಆತ ಒಪ್ಪಿದ್ದ. ಆಗ ತನ್ನ ಸಹಚರರು ಮನೆ ಸಮೀಪದಲ್ಲೇ ಆಕೆ ನಿಲ್ಲಿಸಿದ್ದಳು. ಡೆಲವರಿ ಬಾಯ್‌ ಮನೆಗೆ ಬಂದ ಕೆಲವೇ ಕ್ಷಣಗಳಲ್ಲಿ ನಜ್ಮಾ ಮನೆಗೆ ಆಕೆಯ ಸಹಚರರು ದಾಳಿ ನಡೆಸಿದ್ದರು. ನಮ್ಮ ಸೋದರಿಯನ್ನು ನೀನು ಅತ್ಯಾಚಾರ ಎಸಗಿದ್ದೀಯಾ ಎಂದು ಬೆದರಿಸಿ ಹಣ ಸುಲಿಗೆ ಮಾಡಿದ್ದರು. ಈ ಕೃತ್ಯದ ಬಗ್ಗೆ ಸಂಪಿಗೆಹಳ್ಳಿ ಠಾಣೆಗೆ ಸಂತ್ರಸ್ತ ದೂರು ನೀಡಿದ್ದರು. ಕೃತ್ಯ ಬೆಳಕಿಗೆ ಬಂದ ಕೂಡಲೇ ನಗರ ತೊರೆದು ಆರೋಪಿಗಳು ಪರಾರಿಯಾಗಿದ್ದರು. ಕೊನೆಗೆ ತಾಂತ್ರಿಕ ಮಾಹಿತಿ ಆಧರಿಸಿ ಹನಿಟ್ರ್ಯಾಪ್‌ ಗ್ಯಾಂಗನ್ನು ಬಂಧಿಸಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.

ದೂರು ಕೊಡಲು ಹಿಂದೇಟು

ಹನಿಟ್ರ್ಯಾಪ್‌ ದಂಧೆಯನ್ನು ನಜ್ಮಾ ವೃತ್ತಿಯಾಗಿಸಿಕೊಂಡಿದ್ದಳು. ಹೀಗಾಗಿ ಆಕೆಯ ಬಲೆಗೆ ಬಿದ್ದು ಹಲವು ಮಂದಿ ಹಣ ಕಳೆದುಕೊಂಡಿದ್ದಾರೆ. ಆದರೆ ಮರ್ಯಾದೆಗೆ ಅಂಜಿ ಕೆಲವು ದೂರು ಕೊಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.