ಶಸ್ತ್ರ ಚಿಕಿತ್ಸೆ ಘಟಕದ ಡ್ರೆಸಿಂಗ್ ರೂಮ್‌ನಲ್ಲಿ ಮಹಿಳಾ ಸಿಬ್ಬಂದಿ ಬಟ್ಟೆ ಬದಲಿಸುವಾಗ ರಹಸ್ಯವಾಗಿ ವಿಡಿಯೋ ಮಾಡುತ್ತಿದ್ದ ಆರೋಪದ ಮೇಲೆ ಖಾಸಗಿ ಆಸ್ಪತ್ರೆಯ ಸಿಬ್ಬಂದಿಯನ್ನು ಅನ್ನಪೂಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಶಸ್ತ್ರ ಚಿಕಿತ್ಸೆ ಘಟಕದ ಡ್ರೆಸಿಂಗ್ ರೂಮ್‌ನಲ್ಲಿ ಮಹಿಳಾ ಸಿಬ್ಬಂದಿ ಬಟ್ಟೆ ಬದಲಿಸುವಾಗ ರಹಸ್ಯವಾಗಿ ವಿಡಿಯೋ ಮಾಡುತ್ತಿದ್ದ ಆರೋಪದ ಮೇಲೆ ಖಾಸಗಿ ಆಸ್ಪತ್ರೆಯ ಸಿಬ್ಬಂದಿಯನ್ನು ಅನ್ನಪೂಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಾಗರಭಾವಿಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ನಿರ್ದೇಶಕ ಚೇತನ್‌ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಆಸ್ಪತ್ರೆಯ ಜೂನಿಯರ್‌ ಟೆಕ್ನಿಷಿಯನ್‌ ಆಗಿದ್ದ ಸುವೇಂದು ಮೋಹಂತ (23) ಎಂಬಾತನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡಿ.20ರಂದು ಬೆಳಗ್ಗೆ 8.30 ಸುಮಾರಿಗೆ ಆಸ್ಪತ್ರೆಯ ಶಸ್ತ್ರ ಚಿಕಿತ್ಸೆ ಘಟಕದ ಡ್ರೆಸಿಂಗ್‌ ರೂಮ್‌ನಲ್ಲಿ ಮಹಿಳಾ ಸಿಬ್ಬಂದಿ ತಮ್ಮ ಬಟ್ಟೆಯನ್ನು ಬದಲಾಯಿಸುವಾಗ ಆರೋಪಿ ಮೊಬೈಲ್‌ ಫೋನ್‌ ಬಳಸಿಕೊಂಡು ರಹಸ್ಯವಾಗಿ ವಿಡಿಯೋ ಮಾಡುತ್ತಿದ್ದ. ಇದನ್ನು ಗಮನಿಸಿದ ಇನ್ನೊಬ್ಬ ಮಹಿಳಾ ಸಿಬ್ಬಂದಿ ದೀಪ್ತಿ ಅವರು ಆಸ್ಪತ್ರೆಯ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಚೇತನ್‌ ಅವರು ಠಾಣೆಗೆ ದೂರು ನೀಡಿದ್ದರು. ದೂರಿನನ್ವಯ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಯ ಮೊಬೈಲ್ ಅನ್ನು ಜಪ್ತಿ ಮಾಡಲಾಗಿದ್ದು, ಅದನ್ನು ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್‌) ಕಳುಹಿಸಿಕೊಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.