ಸಾರಾಂಶ
ಬೆಂಗಳೂರು : ಜೈಲಿನಲ್ಲಿ ಕೈದಿಗಳ ಅಕ್ರಮ ಚಟುವಟಿಕೆಗಳಿಗೆ ಸಹಕರಿಸಿದ ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೂವರು ಅಧಿಕಾರಿಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆಗೆ ಪೊಲೀಸರಿಗೆ ರಾಜ್ಯ ಕಾರಾಗೃಹ ಇಲಾಖೆ ಅನುಮತಿ ನೀಡಿದೆ.
ಸಹಾಯಕ ಜೈಲು ಅಧೀಕ್ಷಕರಾದ ಕರ್ಣ ಬಿ.ಕ್ಷತ್ರಿ, ರಾಯಮಾನೆ ಹಾಗೂ ಜೈಲು ವಾರ್ಡನ್ ಸುದರ್ಶನ್ ಅವರಿಗೆ ಸಂಕಷ್ಟ ಎದುರಾಗಿದ್ದು, ಈ ಅಧಿಕಾರಿಗಳ ವಿರುದ್ಧ ತನಿಖೆಯನ್ನು ಪೂರ್ಣಗೊಳಿಸಿ ಆರೋಪಪಟ್ಟಿ ಸಲ್ಲಿಸಲು ಸಕ್ಷಮ ಪ್ರಾಧಿಕಾರಕ್ಕೆ ಪ್ರಾಸಿಕ್ಯೂಷನ್ ಅನುಮತಿ ಕೋರಿ ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಪೊಲೀಸರು ಮನವಿ ಮಾಡಿದ್ದರು. ಈ ಕೋರಿಕೆ ಪುರಸ್ಕರಿಸಿ ಕಾರಾಗೃಹ ಮತ್ತು ಸುಧಾರಣಾ ಇಲಾಖೆಯ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಹಸಿರು ನಿಶಾನೆ ತೋರಿದ್ದಾರೆ.
ಕಳೆದ ವರ್ಷ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿದ್ದ ನಟ ದರ್ಶನ್ ಅವರಿಗೆ ಜೈಲಿನಲ್ಲಿ ವಿಶೇಷ ಸೌಲಭ್ಯ ನೀಡಿಕೆ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ವಾಟ್ಸಾಪ್ ವಿಡಿಯೋ ಕಾಲ್‌ನ ವಿಡಿಯೋ ಹಾಗೂ ಫೋಟೋಗಳು ಬಹಿರಂಗವಾಗಿ ತೀವ್ರ ಸಂಚಲನ ಸೃಷ್ಟಿಸಿದ್ದವು.
ಈ ಪ್ರಕರಣದ ಬೆನ್ನಲ್ಲೇ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ದಾಳಿ ನಡೆಸಿತ್ತು. ಈ ದಾಳಿಗೂ ಕೆಲ ಹೊತ್ತಿನ ಮುನ್ನ ಜೈಲಿನಲ್ಲಿ ಸಿಸಿಟಿವಿ ಕ್ಯಾಮೆರಾಗಳ ಕಾರ್ಯ ಸ್ಥಗಿತಗೊಳಿಸಿ ಕೆಲ ಕೈದಿಗಳ ಸೆಲ್‌ನಲ್ಲಿದ್ದ ಸ್ಟೌವ್, ತರಕಾರಿ ಹಾಗೂ ಇತರೆ ವಸ್ತುಗಳನ್ನು ಸಾಗಿಸಿದ್ದ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಸಿಸಿಬಿ ಅಧಿಕಾರಿಗಳ ದೂರಿನ ಮೇರೆಗೆ ಸಹಾಯಕ ಜೈಲು ಅಧೀಕ್ಷಕರಾದ ಕರ್ಣ, ರಾಯಮಾನೆ, ವಾರ್ಡನ್ ಸುದರ್ಶನ್ ಹಾಗೂ ಸಜಾ ಕೈದಿ ಮುಜೀಬ್ ವಿರುದ್ಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಪ್ರಕರಣದ ತನಿಖೆ ಪೂರ್ಣಗೊಳಿಸಿ ದೋಷಾರೋಪ ಪಟ್ಟಿಗೆ ಸಕ್ಷಮ ಪ್ರಾಧಿಕಾರದ ಅನುಮತಿಗೆ ಪೊಲೀಸರು ಮನವಿ ಮಾಡಿದ್ದರು. ಈಗ ಕಾರಾಗೃಹ ಇಲಾಖೆ ಡಿಜಿಪಿ ಅನುಮತಿ ನೀಡಿದ್ದಾರೆ ಎನ್ನಲಾಗಿದೆ.