ಸಾರಾಂಶ
ಮನೆಯಲ್ಲಿ ಎರಡು ದಿನಗಳ ಕಾಲ ಯಾರೂ ಇರಲಿಲ್ಲ. ಇದನ್ನು ಗಮನಿಸಿರುವ ಕಳ್ಳರು, ಮುಖ್ಯ ದ್ವಾರದ ಬಾಗಿಲನ್ನು ಹಾರೆಯಿಂದ ಮೀಟಿ ಬಾಗಿಲು ಒಡೆದು ಮನೆಯೊಳಗೆ ನುಗ್ಗಿ ಬೀರುವಿನಲ್ಲಿದ್ದ ನಗದು, ಬೆಳ್ಳಿ ಮುಖವಾಡ, ಚಿನ್ನದ ತಾಳಿಯನ್ನು ಕಳವು ಮಾಡಿದ್ದಾರೆ.
ಮಂಡ್ಯ : ಮನೆಯ ಬಾಗಿಲನ್ನು ಕಬ್ಬಿಣದ ಹಾರೆಯಿಂದ ಮೀಟಿ ತೆಗೆದು ಒಳ ನುಗ್ಗಿದ ದುಷ್ಕರ್ಮಿಗಳು ನಗದು ಹಾಗೂ ಚಿನ್ನಾಭರಣಗಳನ್ನು ಕಳವು ಮಾಡಿ ಪರಾರಿಯಾಗಿರುವ ಘಟನೆ ನಗರಕ್ಕೆ ಹೊಂದಿಕೊಂಡಿರುವ ದ್ವಾರಕನಗರ ೩ನೇ ಕ್ರಾಸ್‌ನಲ್ಲಿ ನಡೆದಿದೆ.
ರವಿಕುಮಾರ್ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆಯಲ್ಲಿ ಎರಡು ದಿನಗಳ ಕಾಲ ಯಾರೂ ಇರಲಿಲ್ಲ. ಇದನ್ನು ಗಮನಿಸಿರುವ ಕಳ್ಳರು, ಮುಖ್ಯ ದ್ವಾರದ ಬಾಗಿಲನ್ನು ಹಾರೆಯಿಂದ ಮೀಟಿ ಬಾಗಿಲು ಒಡೆದು ಮನೆಯೊಳಗೆ ನುಗ್ಗಿದ್ದಾರೆ. ಬಳಿಕ ಬೀರುವಿನಲ್ಲಿದ್ದ ೫೦ ಸಾವಿರ ರು. ನಗದು, ೨೫೦ ಗ್ರಾಂ ತೂಕದ ಬೆಳ್ಳಿ ಮುಖವಾಡ, ೩ ಗ್ರಾಂ ತೂಕದ ಚಿನ್ನದ ತಾಳಿಯನ್ನು ಕಳವು ಮಾಡಿದ್ದಾರೆ.
ರವಿಕುಮಾರ್ ಮತ್ತು ಕುಟುಂಬದವರು ಸೋಮವಾರ ಮನೆಗೆ ವಾಪಸ್ಸಾದಾಗ ಮನೆಯಲ್ಲಿ ಕಳವು ನಡೆದಿರುವುದು ಬೆಳಕಿಗೆ ಬಂದಿದೆ. ನಗದು ಕಳುವಾಗಿರುವ ವಸ್ತುಗಳ ಮೌಲ್ಯ ೮೦ ಸಾವಿರ ರು. ಎಂದು ಅಂದಾಜಿಸಲಾಗಿದೆ. ಮಂಡ್ಯ ಗ್ರಾಮಾಂತರ ಇನ್ಸ್‌ಪೆಕ್ಟರ್ ಶಿವಪ್ರಸಾದ್‌ರಾವ್, ಪಿಎಸ್‌ಐ ಮಹೇಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಂಡ್ಯ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯ 5 ಸ್ಥಳಗಳಲ್ಲಿ ಐಟಿಎಂಎಸ್ ರೆಡಾರ್ ಕ್ಯಾಮೆರಾ ಅಳವಡಿಕ
ಮಂಡ್ಯ:ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಬರುವ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ-275ರ 5 ಸ್ಥಳಗಳಲ್ಲಿ ಐಟಿಎಂಎಸ್ ರೆಡಾರ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇವುಗಳ ಮೂಲಕ ಸಂಚಾರ ನಿಯಮ ಉಲ್ಲಂಘನೆ ಮಾಡಲಾದ ವಾಹನಗಳನ್ನು ಗುರುತಿಸಿ ದಂಡ ವಿಧಿಸಲಾಗುವುದು.
ಸಂಚಾರಿ ನಿಯಮಗಳ ಉಲ್ಲಂಘನೆ ಕುರಿತಂತೆ ದಾಖಲಾಗುವ ಪ್ರಕರಣಗಳನ್ನು ತಕ್ಷಣವೇ ಸದರಿ ವಾಹನದ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್ ಎಂ ಎಸ್ ಮೂಲಕ ಮಾಹಿತಿ ರವಾನೆಯಾಗಲಿದೆ. ವಾಹನಗಳ ಮಾಲೀಕರು ಹಾಗೂ ಚಾಲಕರು ಜೂನ್ 1 ರಿಂದ ಸ್ಥಳ ದಂಡ ಪಾವತಿ ಹಾಗೂ https://payfine.mchallan.com:7271ರ ವೆಬ್ ಸೈಟ್ ಮೂಲಕ ದಂಡ ಪಾವತಿ ಮಾಡಬಹುದಾಗಿದೆ. ಆದ್ದರಿಂದ ಸಾರ್ವಜನಿಕರು ಸಂಚಾರಿ ನಿಯಮಗಳನ್ನು ಉಲ್ಲಂಘಿಸದೆ, ನಿಯಮಗಳನ್ನು ಪಾಲಿಸಬೇಕೆಂದು ಪ್ರಕಟಣೆ ತಿಳಿಸಿದೆ.