ಸಾರಾಂಶ
ವರ್ಕ್ ಫ್ರಮ್ ಹೋಂ ಹೆಸರಿನಲ್ಲಿ ಕೆಲಸ ಕೊಡಿಸುವುದಾಗಿ ಹಾಗೂ ಮನಿ ಎಕ್ಸ್ಚೇಂಜ್ ಲಾಭಾಂಶದ ಅಮಿಷವೊಡ್ಡಿ ಗೃಹಿಣಿಗೆ ಲಕ್ಷಾಂತರ ರು. ವಂಚಿಸಿರುವ ಘಟನೆ ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.
ಕನ್ನಡಪ್ರಭ ವಾರ್ತೆ ಮದ್ದೂರು
ವರ್ಕ್ ಫ್ರಮ್ ಹೋಂ ಹೆಸರಿನಲ್ಲಿ ಕೆಲಸ ಕೊಡಿಸುವುದಾಗಿ ಹಾಗೂ ಮನಿ ಎಕ್ಸ್ಚೇಂಜ್ ಲಾಭಾಂಶದ ಅಮಿಷವೊಡ್ಡಿ ಗೃಹಿಣಿಗೆ ಲಕ್ಷಾಂತರ ರು. ವಂಚಿಸಿರುವ ಘಟನೆ ತಾಲೂಕಿನ ಸೋಮನಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.ಗ್ರಾಮದ ಕೃಷ್ಣರ ಪತ್ನಿ ಆರ್.ರಮ್ಯಾ 29 ಅವರಿಗೆ ಹರಿಯಾಣ ಮೂಲದ ಮೂವರು ವ್ಯಕ್ತಿಗಳು ವರ್ಕ್ ಫ್ರಮ್ ಹೋಂ ಹಾಗೂ ಮನಿ ಎಕ್ಸ್ಚೇಂಜ್ ಲಾಭಾಂಶದ ಹೆಸರಿನಲ್ಲಿ ಗೃಹಿಣಿಗೆ ಪಂಗನಾಮ ಹಾಕಿದ್ದಾರೆ.
ಹರಿಯಾಣದ ಜಾರ್ಖಂಡ್‌ನ ಸೈಯದ್ ಮಕ್ಸೂದ್, ಹರಿಯಾಣದ ರೋಹಿತ್ ತಿವಾರಿ ಹಾಗೂ ಆದಿತ್ಯ ಸಿಂಗ್ ಚೌಹಾನ್ ಎಂಬ ಆರೋಪಿಗಳು ಕಳೆದ ಆ.16 ರಿಂದ 22ರ ಸಂಜೆ 4 ಗಂಟೆ ವರೆಗೆ ಆನ್ ಲೈನ್‌ನಲ್ಲಿ ಟೆಲಿಗ್ರಾಂ ಆಪ್ ಮೂಲಕ ಮನೆಯಿಂದಲೇ ಕೆಲಸ ಕೊಡುವುದಾಗಿ ಮತ್ತು ಮನೆಯ ಎಕ್ಸ್ಚೇಂಜ್ ಮಾಡಿ ಪ್ರತಿದಿನ 20ರಷ್ಟು ಲಾಭಾಂಶ ನೀಡುವುದಾಗಿ ನಂಬಿಸಿ ಹಂತ ಹಂತವಾಗಿ ಒಟ್ಟು 9 ಲಕ್ಷ ರು.ಗಳನ್ನು ಆನ್ ಲೈನ್ ಮೂಲಕ ಪಡೆದು ಮೋಸ ಮಾಡಿದ್ದಾರೆ ಎಂದು ಗೃಹಿಣಿ ಆರ್.ರಮ್ಯಾ ಮಂಡ್ಯ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.ಈ ಸಂಬಂಧ ಸೈಬರ್ ಠಾಣೆ ಪೊಲೀಸರು ಆರೋಪಿಗಳ ವಿರುದ್ಧ ಬಿಎನ್ಎಸ್ ಆದಾಯ ತೆರಿಗೆ ಕಾಯ್ದೆ 318 ಹಾಗೂ 319 ರ ಅನ್ವಯ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಅತಿಥಿ ಶಿಕ್ಷಕಿ ನಾಪತ್ತೆಮಂಡ್ಯ:
ತಾಲೂಕಿನ ಬಸರಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅತಿಥಿ ಶಿಕ್ಷಕಿ ನಾಪತ್ತೆಯಾಗಿರುವುದಾಗಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಲೂಕಿನ ಬಸರಾಳು ಸಮೀಪದ ದೊಡ್ಡಕೊತ್ತಗೆರೆ ಗ್ರಾಮದ ಡಿ.ಎಂ.ಸಂಗೀತಾ (೨೪) ನಾಪತ್ತೆಯಾಗಿರುವ ಅತಿಥಿ ಶಿಕ್ಷಕಿ. ಆ.೨೧ರಂದು ಮಂಡ್ಯದ ಕುವೆಂಪುನಗರದಲ್ಲಿರುವ ಬಾಮೈದನ ಮನೆಗೆ ಹೋಗಿ ಬರುವುದಾಗಿ ತೆರಳಿದ್ದು, ಮರುದಿನ ಬೆಳಗ್ಗೆ ಅಲ್ಲಿಂದಲೇ ಶಾಲೆಗೆ ಹೋಗುವುದಾಗಿ ತಿಳಿಸಿದ್ದಳು. ಇದುವರೆಗೂ ಸಂಗೀತಾ ಮನೆಗೆ ಬಂದಿರುವುದಿಲ್ಲ. ಎಲ್ಲೆಡೆ ಹುಡುಕಿದರೂ ಪತ್ತೆಯಾಗಿಲ್ಲವೆಂದು ತಂದೆ ಡಿ.ಪಿ.ಮಹದೇವನ್ ದೂರಿನಲ್ಲಿ ತಿಳಿಸಿದ್ದಾರೆ.