ಸಾಮಾಜಿಕ ಜಾಲತಾಣದ ಮೂಲಕ ಪರಿಚಿತನಾದ ವ್ಯಕ್ತಿಯೊಬ್ಬ ಮಹಿಳೆಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದು, ನೊಂದ ಮಹಿಳೆ ಆರೋಪಿ ವಿರುದ್ಧ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಾಮಾಜಿಕ ಜಾಲತಾಣದ ಮೂಲಕ ಪರಿಚಿತನಾದ ವ್ಯಕ್ತಿಯೊಬ್ಬ ಮಹಿಳೆಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದು, ನೊಂದ ಮಹಿಳೆ ಆರೋಪಿ ವಿರುದ್ಧ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಮಹಿಳೆ ನೀಡಿದ ದೂರಿನನ್ವಯ ಪಾರಿತೋಷ್ ಯಾದವ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಲಗ್ಗೆರೆ ನಿವಾಸಿಯಾಗಿರುವ 32 ವರ್ಷದ ಮಹಿಳೆಗೆ ಮದುವೆಯಾಗಿ ಮಕ್ಕಳಿದ್ದು, ಒಂದು ವರ್ಷದ ಹಿಂದೆ ಪಾರಿತೋಷ್ ಯಾದವ್ ಎಂಬಾತ ಆ್ಯಪ್‌ವೊಂದರ ಮೂಲಕ ಪರಿಚಯವಾಗಿದ್ದು, ನಂತರ ಇಬ್ಬರ ಮಧ್ಯೆ ಸ್ನೇಹ ಉಂಟಾಗಿತ್ತು. ಈ ನಡುವೆ ಜನರೇಟರ್‌ ಸ್ಫೋಟಗೊಂಡ ಪರಿಣಾಮ ಮಹಿಳೆಯ ಮಗಳಿಗೆ ಗಂಭೀರ ಗಾಯವಾಗಿತ್ತು. ಮಗಳ ಚಿಕಿತ್ಸೆಗಾಗಿ ಮಹಿಳೆ ಪಾರಿತೋಶ್ ಯಾದವ್ ಬಳಿ 30 ಸಾವಿರ ರು. ಸಾಲ ಪಡೆದಿದ್ದಳು.

ಸ್ವಲ್ಪ ದಿನಗಳ ನಂತರ ಆರೋಪಿ ಕೊಟ್ಟಿರುವ ಹಣವನ್ನು ವಾಪಸ್‌ ನೀಡುವಂತೆ ಕೇಳಿದ್ದ. ಹಣ ನೀಡಲು ಸ್ವಲ್ಪ ಕಾಲಾವಕಾಶ ಬೇಕು ಎಂದು ಮಹಿಳೆ ಹೇಳಿದ್ದರು. ಮಹಿಳೆಯ ಪರಿಸ್ಥಿತಿಯನ್ನು ದುರುಪಯೋಗ ಪಡಿಸಿಕೊಂಡ ಆರೋಪಿ ಮಹಿಳೆಗೆ ಅಶ್ಲೀಲ ವಿಡಿಯೋಗಳನ್ನು ಕಳುಹಿಸಿ ದೈಹಿಕವಾಗಿ ಸಹಕರಿಸುವಂತೆ ಕಿರುಕುಳ ನೀಡಿದ್ದಾನೆ.

ಬಾಕ್ಸ್...

ನಂಬರ್‌ ಪಬ್ಲಿಕ್ ಟಾಯ್ಲೆಟ್‌ನಲ್ಲಿ ಬರೆಯುವ ಬೆದರಿಕೆ

ನನಗೆ ಸಹಕರಿಸದಿದ್ದರೆ ನಿನ್ನ ನಂಬರ್‌ ಅನ್ನು ಸೆಕ್ಸ್ ಆ್ಯಪ್‌ಗಳಲ್ಲಿ ಹಾಕುತ್ತೇನೆ, ಪಬ್ಲಿಕ್ ಟಾಯ್ಲೆಟ್ ಮತ್ತು ಸೋಶಿಯಲ್ ಮೀಡಿಯಾಗಳಲ್ಲಿ ನಿನ್ನ ನಂಬರ್ ಬರೆದು ವೇಶ್ಯಾವಾಟಿಕೆ ಮಾಡುವವರು ಎಂದು ಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದ. ಜತೆಗೆ ಅಶ್ಲೀಲ ಫೋಟೋ ಮತ್ತು ವಿಡಿಯೋವನ್ನು ಕಳುಹಿಸಿ ಮಾನಸಿಕ ಹಿಂಸೆ ನೀಡಿದ್ದ. ಈ ವಿಷಯ ಆಕೆ ಪತಿಗೂ ಗೊತ್ತಾಗಿ ಇಬ್ಬರ ಮಧ್ಯೆ ಮನಸ್ತಾಪ ಉಂಟಾಗಿತ್ತು. ಇದರಿಂದ ಮನನೊಂದು ಮಹಿಳೆ ಪೀಣ್ಯದಲ್ಲಿರುವ ಸ್ನೇಹಿತೆ ಮನೆಗೆ ಹೋಗಿದ್ದರು. ನಂತರ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿ ಶಿವಪುರ ಕೆರೆ ಹೋಗಿ, ಕೈಕುಯ್ದುಕೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಸ್ನೇಹಿತೆಯರು ಆಕೆಯನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆ ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚೇತರಿಸಿಕೊಂಡಿರುವ ಮಹಿಳೆ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ತನಗೆ ಮಾನಸಿಕವಾಗಿ ಹಿಂಸೆ ನೀಡುತ್ತಿರುವ ಆರೋಪಿಯ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಶೋಧ ನಡೆಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

- ಲಗ್ಗೆರೆ ನಿವಾಸಿ, 32 ವರ್ಷದ ಮಹಿಳೆ ಸಂತ್ರಸ್ತೆ. ಈಕೆಗೆ ಮಕ್ಕಳಿದ್ದಾರೆ.-ವರ್ಷದ ಹಿಂದೆ ಆನ್‌ಲೈನ್‌ನಲ್ಲಿ ಪಾರಿತೋಷ್ ಯಾದವ್ ಎಂಬಾತ ಪರಿಚಯ, ಸ್ನೇಹ-ಈ ಮಧ್ಯೆ ಜನರೇಟರ್‌ ಸ್ಫೋಟದಿಂದ ಮಹಿಳೆ ಮಗಳಿಗೆ ಗಂಭೀರ ಗಾಯವಾಗಿತ್ತು- ಮಗಳ ಚಿಕಿತ್ಸೆಗಾಗಿ ಮಹಿಳೆ ಯಾದವ್ ಬಳಿ 30 ಸಾವಿರ ಸಾಲ ಪಡೆದಿದ್ದಳು-ಇದನ್ನೇ ದುರುಪಯೋಗಪಡಿಸಿಕೊಂಡ ಆತ ಅಶ್ಲೀಲ ವಿಡಿಯೋ ಕಳಿಸಿ ಕಿರುಕುಳ ಕೊಟ್ಟಿದ್ದಾನೆ.